ಪೆರ್ನೆ ಗೋ ಹತ್ಯೆ ಪ್ರಕರಣ : ಮಾಲಕರ ಮನೆಗೆ ಶಾಸಕ ಅಶೋಕ್ ರೈ ಭೇಟಿ

0

‘ನಮ್ಮ ದೇಶದಲ್ಲಿ ಇದಕ್ಕೆಲ್ಲಾ ಸರಿಯಾದ ಕಾನೂನುಗಳು ಇಲ್ಲ’

ʼಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯಬಾರದು’ – ಅಶೋಕ್ ರೈ

ಪುತ್ತೂರು: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಬು ಎಂಬಲ್ಲಿ ಮನೆಯ ಹಟ್ಟಿಯಿಂದ ಗೋವನ್ನು ಕದ್ದೊಯ್ದು ಮಾಲಕರ ತೋಟದಲ್ಲಿಯೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿಕ ದೇಜಪ್ಪ ಮೂಲ್ಯ ಅವರ ನಿವಾಸಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಭೇಟಿ ನೀಡಿದರು.

ದೇಜಪ್ಪ ಮೂಲ್ಯ ಹಾಗೂ ಅವರ ಕುಟುಂಬದ ಜೊತೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ‘ಇದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯಬಾರದು. ಈಗಾಗಲೇ ದಕ್ಷಿಣ ಕನ್ನಡ ಎಸ್.ಪಿ, ಡಿವೈಎಸ್ಪಿ ಹಾಗೂ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಎಲ್ಲ ಮಾತನಾಡಿದ್ದೇನೆ. ಕೂಡಲೇ ಅವರನ್ನು ಬಂಧಿಸುವ ಕೆಲಸವಾಗ್ಬೇಕು. ಹಟ್ಟಿಯಿಂದ ದನವನ್ನು ಕದ್ದೊಯ್ದು ಕೊಂದ ಆರೋಪಿಗಳು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗ್ಬೇಕು. ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಅವರನ್ನು ಇಂದು ಸಂಜೆ ವೇಳೆಗೆ ಬಂಧಿಸುವ ಕೆಲಸವಾಗಲಿದೆ. ತನಿಖಾ ದೃಷ್ಟಿ ಹಿನ್ನಲೆ ಎಲ್ಲ ಮಾಹಿತಿ ನೀಡಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಇಂತಹ ಘಟನೆಗಳಿಗೆಲ್ಲ ಸರಿಯಾದ ಶಿಕ್ಷೆಗಳಿಲ್ಲ, ನನ್ನ ಪ್ರಕಾರ ಅವರ ಕೈಯನ್ನೇ ಕಡಿಯಬೇಕು. ಇಂತಹ ದುಷ್ಟ ಕೃತ್ಯವನ್ನು ಯಾರೆಲ್ಲ ಮಾಡ್ತಾರೆ ಅವರಿಗೆ ತಕ್ಕ ಶಿಕ್ಷೆಯಾಗ್ಬೇಕು. ಇನ್ನೊಮ್ಮೆ ಮತ್ತೊಬ್ಬರು ಆ ತಪ್ಪನ್ನು ಮಾಡ್ಬಾರ್ದು. ಇಂತಹ ಕೆಲಸವನ್ನು ಮಾಡಿ ಒಂದು ಸಮುದಾಯದ ಮೇಲೆ ಗೂಬೆ ಕೂರಿಸುವಂತಹ ಕೃತ್ಯಗಳು ನಡೆಯಬಾರದು, ಪೊಲೀಸ್ ಭಾಷೆಯಲ್ಲಿ ಈ ಕೃತ್ಯಕ್ಕೆ ತಕ್ಕ ರೀತಿಯಲ್ಲಿ ಉತ್ತರವನ್ನು ನೀಡಲಾಗುತ್ತದೆ. ಇಂತಹ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಕೆಟ್ಟ ವಾತಾವರಣ ಸೃಷ್ಟಿ ಮಾಡುವುದು ಸರಿಯಲ್ಲ’ ಎಂದರು.

ಕುಟುಂಬದ ಪರವಾಗಿ ನಾವೆಲ್ಲ ಇದ್ದೇವೆ. ಘಟನೆಯಿಂದ ಕುಟುಂಬಕ್ಕೆ ತುಂಬಾ ನೋವಾಗಿದೆ. ನೀವು ದನ ಸಾಕುವುದಾದರೆ ನಾನು ಹಣ ನೀಡುತ್ತೇನೆ ಎಂದ ಶಾಸಕರು ಮನೆಯವರ ಫೋನ್ ನಂಬರ್ ಹಾಗೂ ಅಕೌಂಟ್ ನಂಬರ್ ತೆಗೆದುಕೊಳ್ಳುವಂತೆ ಜೊತೆಗಿದ್ದವರಲ್ಲಿ ತಿಳಿಸಿದರು.

ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ನೀಡುವ ಕೆಲಸವನ್ನು ಸರಕಾರ ಮಾಡಲಿದೆ ಎಂದರು.

LEAVE A REPLY

Please enter your comment!
Please enter your name here