ನಿವೃತ್ತ ಶಿಕ್ಷಕರಿಗೆ ಗುರುವಂದನೆ, ಎಸ್ಎಸ್ಎಲ್ಸಿ ಸಾಧಕರಿಗೆ ಅಭಿನಂದನೆ
ಪುತ್ತೂರು: ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥಿರತೆ ಕಡಿಮೆಯಾಗಿದೆ. ಶಿಕ್ಷಣದಲ್ಲಿ ಕೌನ್ಸಿಲಿಂಗ್ ಬಹುಮುಖ್ಯವಾಗಿದ್ದು ಶಾಲೆಗಳಲ್ಲಿ ಪಾಠದ ಜೊತೆಗೆ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಬಹುಮುಖ್ಯವಾಗಿ ಮಾಡಬೇಕಿದೆ. ಇದರ ಮೂಲಕ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಪಾಡುವ ಕೆಲಸಬಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನದ ಅಂಗವಾಗಿ ಸೆ.5ರಂದು ಬ್ರಹ್ಮಶ್ರಿ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಕರು ಸಮಾಜವನ್ನು ತಿದ್ದುವವರು. ವಿದ್ಯಾರ್ಥಿಗಳಿಗೆ ರೂಪು-ರೇಖೆ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಹಿಂದಿನ ಶಿಕ್ಷಣ ಪದ್ದತಿ ಉತ್ತಮವಾಗಿತ್ತು. ಈಗಿನ ಶಿಕ್ಷಣ ಪದ್ದತಿ ಹಿಂದಿನಂತಿಲ್ಲ. ಆ ಸಮಯದಲ್ಲಿ ಏಟು ನೀಡಿ ತಿದ್ದಿದ ಫಲವಾಗಿ ನಾನು ಶಾಸಕನಾಗಲು ಸಾಧ್ಯವಾಗಿದೆ ಎಂದರು. ಶಿಕ್ಷಕರು ಮನೆಗಿಂತ ಹೆಚ್ಚು ಅವರ ಶಾಲೆಯನ್ನು ಪ್ರೀತಿಸುತ್ತಾರೆ. ಶಾಲೆ, ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ. ವಿದ್ಯಾರ್ಥಿಗಳನ್ನು ತಿದ್ದಿ ಉತ್ತಮ ವ್ಯಕ್ತಿಯನ್ನಾಗಿ ಸಮಾಜಕ್ಕೆ ಅರ್ಪಣೆ ಮಾಡುವವರು. ಮಕ್ಕಳನ್ನು ತಿದ್ದುವಲ್ಲಿ ಪೋಷಕರ ಪಾತ್ರವೂ ಬಹುಮುಖ್ಯವಾಗಿದ್ದು ಶೇ.40 ಶಾಲೆಯಲ್ಲಿ ತಿದ್ದಿದರೆ ಶೇ.60ಮನೆಯಲ್ಲಿ ಪೋಷಕರು ತಿದ್ದುವ ಕೆಲಸ ಮಾಡಬೇಕು ಎಂದರು.
ಶಿಕ್ಷಕರ ದಿನಾಚರಣೆ ಮೂಲಕ ಶಿಕ್ಷಕರು ಶಾಲೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು-ಭಾಗೀರಥಿ ಮುರುಳ್ಯ:
ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಮಾತನಾಡಿ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಸೀಮಿತವಾಗಿರದೇ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಶಾಲೆಗಳಲ್ಲಿಯೂ ಸಮಸ್ಯೆಗಳಿದ್ದು ಅವುಗಳ ಬಗ್ಗೆ ಪಟ್ಟಿಮಾಡಿ ಸರಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಕೆಲಸ ಶಿಕ್ಷಕರ ದಿನಾಚರಣೆಯ ಮೂಲಕವಾಗಬೇಕು. ಶಿಕ್ಷಣ ಇಲಾಖೆಯು ಭ್ರಷ್ಠಾಚಾರ ರಹಿತ ಇಲಾಖೆಯಾಗಿದೆ. ಅದನ್ನು ಉಳಿಸುವ ಕೆಲಸ ವಾಗಬೇಕು. ಅಂತಹ ಮಕ್ಕಳನ್ನು ಸೃಷ್ಠಿಸಿ ಸಮಾಜಕ್ಕೆ ಅರ್ಪಣೆ ಮಾಡಬೇಕು. ಗುರುವಿನ ಶಿಕ್ಷಣದಿಂದಾಗಿ ವ್ಯಕ್ತಿಯೊಬ್ಬ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದ್ದು ಶಿಕ್ಷಕ ಹುದ್ದೆಗೆ ವಿಶೇಷವಾದ ಗೌರವವಿದೆ ಎಂದರು.
ಸಮಾಜದ ಪರಿವರ್ತನೆಯ ಜೊತೆಗೆ ಶಿಕ್ಷಕರು ಬೆಳೆಯಬೇಕು-ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಮಾಜ ಪರಿವರ್ತಣೆಯ ಕಾಲಘಟ್ಟದಲ್ಲಿದೆ. ಜಗತ್ತು ವೈಜ್ಞಾನಿಕವಾಗಿ ಅತೀ ವೇಗವಾಗಿ ಬೆಳೆಯುತಿದೆ. ಅದಕ್ಕೆ ಪೂರಕವಾಗಿ ಶಿಕ್ಷಕರು ಬೆಳೆಯಬೇಕು. ಜ್ಞಾನ, ಸಂಸ್ಕಾರದಿಂದ ಕೂಡಿದ ಶಿಕ್ಷಣ ಬಹುಮುಖ್ಯವಾಗಿದ್ದು ಶಿಕ್ಷಕರು ಈ ದಿಸೆಯಲ್ಲಿ ಚಿಂತಿಸಬೇಕಾಗಿದೆ. ಜ್ಞಾನ ಮಂದಿರಗಳು ಬೆಳೆದಾಗ ಸಮಾಜ ಬೆಳೆಯಲು ಸಾಧ್ಯ ಎಂದ ಅವರು, ಕಳೆದ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ರೂ.5ಕೋಟಿ ವೆಚ್ಚದಲ್ಲಿ ಶಾಲೆಗಳಿಗೆ ಸ್ಮಾರ್ಟ್ಕ್ಲಾಸ್ ವಿತರಿಸಲಾಗಿದೆ. ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೊರತೆ ಮಧ್ಯೆ ಶ್ರೇಷ್ಠತೆ ಸಾಧಿಸುವವರು ಶಿಕ್ಷಕರು-ಅಮಳ ರಾಮಚಂದ್ರ:
ಪುತ್ತೂರು ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ಶಿಕ್ಷಕರು ಉತ್ತಮ ವ್ಯಕ್ತಿ, ಸಮುದಾಯ ಹಾಗೂ ಸಮಾಜವನ್ನು ರೂಪಿಸುವವರು. ಅದಕ್ಕಾಗಿ ಶಿಕ್ಷಕ ವೃತ್ತಿ ಜವಾಬ್ದಾರಿಯುತವಾದುದು. ನಾನು ಹವ್ಯಾಸಿ ಅಧ್ಯಾಪಕನಾಗಿ ಕೆಲಸ ಮಾಡಿದ್ದು ಶಾಲೆ ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಎಲ್ಲಾ ಕೊರತೆ ಮಧ್ಯೆ ಶಿಕ್ಷಕರು ಶ್ರೇಷ್ಠತೆ ಸಾಧಿಸುತ್ತಾರೆ ಎಂದರು.
ಭ್ರಷ್ಟಾಚಾರವಿಲ್ಲದ ಇಲಾಖೆ-ಕಾವು ಹೇಮನಾಥ ಶೆಟ್ಟಿ
ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸಮಾಜದ ವ್ಯವಸ್ಥೆಯಲ್ಲಿ ಶಿಕ್ಷಕರಿಗೂ ಇತರ ಅಧಿಕಾರಿಗಳು ವ್ಯತ್ಯಾಸವಿದೆ. ಇದನ್ನು ಯಾರಿಂದಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಪ್ರಶಸ್ತಿಗೆ ಅರ್ಹರೇ ಅಗಿದ್ದಾರೆ. ಸಮಾಜದ ಬದಲಾವಣೆಯೊಂದಿಗೆ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಬರುವುದಿಲ್ಲ. ಲೋಕಾಯುಕ್ತ ದಾಳಿಯಿಲ್ಲ ಎಂದರು.
ಶೈಕ್ಷಣಿಕವಾಗಿ ಪುತ್ತೂರು ರಾಜ್ಯದಲ್ಲಿ ಗುರುತಿಸಿಕೊಂಡಿದೆ-ನವೀನ್ ಭಂಡಾರಿ:
ಶಿಕ್ಷಕರ ದಿನಾಚರಣಾ ಸಮಿತಿ ಅಧ್ಯಕ್ಷರು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಸಮಾಜವನ್ನು ಬದಲಾವಣೆ ತರುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗುದೆ. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಪುತ್ತೂರು ತಾಲೂಕು ರಾಜ್ಯದಲ್ಲಿ ಗುರುತಿಸಿಕೊಂಡಿದೆ ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ನಗರ ಠಾಣಾ ನಿರೀಕ್ಷಕ ಜಾನ್ಸನ್ ಡಿ’ಸೋಜ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ., ರಾಮನಗರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸುಂದರ ಗೌಡ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಸಂತ ಮೂಲ್ಯ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕಡಬ ತಾಲೂಕು ಪ್ರೌಢಶಾಲಾ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲ, ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟಾಳಿ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷೆ ವಿಜಯ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಡಬ ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಾಂತಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕರಿಗೆ ಗುರುವಂದನೆ
ಸರಕಾರಿ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರಾದ ಯಶೋಧ ಎನ್.ಎಂ., ರಜಿನಾ ಡಿ’ಸೋಜ, ವೆಂಕಟರಮಣ ಭಟ್, ಜಯಶ್ರೀ ಎಸ್., ವಿಜಯ ಕುಮಾರ್ ಎನ್, ದಮಯಂತಿ ಬಿ., ಜಯಂತಿ ಎಸ್., ನೇತ್ರಾವತಿ ಎ., ಮುತ್ತಪ್ಪ ಪೂಜಾರಿ, ಇಂದಿರಾ ಪಿ., ಗಂಗಾವತಿ ಪಿ., ಪುಷ್ಪಾ ಕೆ.ಅರ್., ಕುಶಾಲಪ್ಪ ಪಿ., ಪದ್ಮನಾಭ ಪಿ.,ಪ್ರೇಮಾ,ಚಂದ್ರಕಲಾ, ಮೇಬಲ್ ಪಿ ಡಿ ಸೋಜ, ಚಂದ್ರಕಲಾ ಪಿ,ಜಾನಕಿ, ಹರಿಣಾಕ್ಷಿ, ಜೂಲಿಯಾನ ವಾಸ್, ನವೀನ್ ಕುಮಾರ್ ರೈ, ಸರಕಾರಿ ಪ್ರೌಢಶಾಲಾ ಶಿಕ್ಷಕರಾದ ಸಹದೇವ, ರೇವತಿ ಕೆ., ನಳಿನಿ ಕೆ., ಅನುದಾನಿ ಪ್ರೌಢಶಾಲಾ ಶಿಕ್ಷಕರಾದ ಐವಿ ಗ್ರೆಟ್ಟಾ ಪಾಯಸ್, ಸುಬ್ರಹ್ಮಣ್ಯ ಗೌಡ ಕೆ.ಜಿ., ಇನಾಸ್ ಗೊನ್ಸಾಲ್ವೀಸ್, ಶ್ರೀಪತಿ ಭಟ್, ಜಯಲಕ್ಷ್ಮೀ, ರೊನಾಲ್ಡ್ ಮೊನೀಸ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಾದ ಜಯಮಾಲ ಉಚ್ಚಿಲ್, ಸಾಂಡ್ರ ಪುಷ್ಪಲತಾ ಪಿಲೋಮಿನಾ ಪಾಯಸ್, ಹೆರಾಲ್ಡ್ ಡಿ ಸೋಜ, ಕಳೆದ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತು ಪುರಸ್ಕೃತರಾದ ಯಶೋಧ ಎಂ.ಎನ್., ರಾಮಣ್ಣ ರೈ, ಲಲಿತಾ, ಎಸ್ಎಸ್ಎಲ್ಸಿಯಲ್ಲಿ ತಾಲೂಕಿಗೆ ರಾಜ್ಯದಲ್ಲಿ ೩ನೇ ಸ್ಥಾನ ಬರುವಲ್ಲಿ ಸಹಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ರವರನ್ನು ಸನ್ಮಾನಿಸಲಾಯಿತು. ಪಿಎಂಶ್ರೀ ಪುಷ್ಟಿ ಪುರಸ್ಕೃತ ವೀರಮಂಗಲ ಹಿ.ಪ್ರಾ ಶಾಲಾ ಎಸ್.ಡಿಎಂಸಿ ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಕರಾಗಿ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟ ಶಿಕ್ಷಕರಾದ ಗೋಳಿತೊಟ್ಟು ಶಾಲಾ ಪ್ರದೀಪ್ ಬಿ.ಎಂ., ಹೊಸಮಜಲು ಶಾಲಾ ಆನಂದ ಗೌಡ, ಪಡುಮಲೆ ಶಾಲಾ ದೇವಿಪ್ರಸಾದ್ ಕೆ.ಸಿಯವರ ಪರವಾಗಿ ಅವರ ಮನೆಯವರನ್ನು ಗೌರವಿಸಲಾಯಿತು.
ದತ್ತಿನಿಧಿ ಪುರಸ್ಕಾರ, ಗೌರವಾರ್ಪಣೆ:
ನಿವೃತ್ತ ಶಾಲಾ ತಪಾಸಣಾಧಿಕಾರಿ ದಿ.ಡಿಂಬ್ರಿಗುತ್ತು ಸಾಂತಪ್ಪ ರೈರವರ ಸ್ಮರಣಾರ್ಥ ಸ್ಥಾಪಿಸಿದ ಪ್ರತಿಭಾ ಪುರಸ್ಕಾರವನ್ನು ಎಸ್ಎಸ್ಎಲ್ಸಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು. ಶಿಕ್ಷಕರ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ವಿಜೇತರಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿಜೇತ ಶಿಕ್ಷಕರನ್ನು ಅಭಿನಂದಿಸಲಾಯಿತು. 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಅತೀ ಹೆಚ್ಚು ಅಂಕ ಗಳಿಸಿದ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಲ್ಲದೆ 2024-25ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದ 46 ಶಾಲೆಗಳಿಗೆ ಹಾಗೂ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸ್ವಾಗತಿಸಿದರು. ಸಿಆರ್ಪಿಗಳಾದ ಪರಮೇಶ್ವರಿ ಮತ್ತು ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್ ವಂದಿಸಿದರು. ಸುಚಿತ್ರಾ ಹೊಳ್ಳ, ಶುಭಾ ರಾವ್, ಜಯಂತ ವೈ., ರಮೇಶ್ ನಡುವಾಲು ಪ್ರಾರ್ಥಿಸಿದರು. ಶಿಕ್ಷಣ ಸಂಯೋಕರಾದ ಹರಿಪ್ರಸಾದ್, ಅಮೃತಕಲಾ, ಬಿಆರ್ಪಿ ರತ್ನಕುಮಾರಿ, ಬಿಐಆರ್ಟಿ ತನುಜಾ, ನಾಗೇಶ್ ಪಾಟಾಳಿ, ವಿನೋದ್ ಕುಮಾರ್ ಕೆ.ಎಸ್., ಸಿಆರ್ಪಿಗಳಾದ ಶಶಿಕಲಾ, ಯಶೋಧ, ಮಹೇಶ್, ಶಶಿಕಲಾ, ಗಣೇಶ್ ನಡುವಾಲ್, ಶೈಲೇಶ್, ಹನುಮಂತ, ಜಯಂತಿ, ಬಿಐಆರ್ಟಿ ತನುಜ, ಗಣೇಶ್, ವಿಜಯಕುಮಾರ್, ಶಾಂತಿ ಮೊರಾಸ್, ವಿನೋದ್, ವಿಜಯ ಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಗಾನ ಲಹರಿ ಶಿರ್ಲಾಲು ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.
ಸರಕಾರ ಶಿಕ್ಷಕರ ದಿನಾಚರಣೆಗೆ ಒಂದು ದಿನ ಮುಂಚಿತವಾಗಿಯೇ ಸಿಎನ್ಆರ್ನ್ನು ಸಚಿವ ಸಂಪುಟದಲ್ಲಿ ಮಂಜೂರು ಮಾಡುವ ಮೂಲಕ ಶಿಕ್ಷಕರ ಕಳೆದ ಎಂಟು ವರ್ಷದ ಬೇಡಿಕೆಯನ್ನು ಸರಕಾರ ಈಡೇರಿಸಿದೆ. ಇದರಿಂದ ಸಾಕಷ್ಟು ಶಿಕ್ಷಕರ ಮುಂಭಡ್ತಿಗೆ ಸರಕಾರ ಅವಕಾಶ ಮಾಡಿದೆ. ಇದಕ್ಕೆ ಹಲವು ಮಂದಿ ಶಿಕ್ಷಕರು ಅಭಿನಂದನೆ ಸಲ್ಲಿಸಿದರು. ಶಿಕ್ಷಕರು ಅಭಿನಂದನೆಯಲ್ಲಿಯೇ ಸುಧಾರಿಸಬೇಡಿ. ಉತ್ತಮ ಕೆಲಸಗಳಿಗೆ ಓಟು ಹಾಕಿ. ಉತ್ತಮ ಕೆಲಸ ಆಶೀರ್ವಾದ ಮಾಡಿ, ತಪ್ಪು ಮಾಡಿದಾಗ ತಿದ್ದುವ ಕೆಲಸವಾಗಬೇಕು. ಪುತ್ತೂರಿನ ಅಭಿವೃದ್ಧಿಗೆ ಶಿಕ್ಷಕರ ಮಾರ್ಗದರ್ಶನ, ಸಹಕಾರ ನೀಡಬೇಕು.
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು
ಶಿಕ್ಷಕರಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ರವರು ದೇಶದ ಎರಡನೇ ರಾಷ್ಟ್ರಪತಿಯಾಗಿದ್ದಾರೆ. ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಶಿಕ್ಷಕರಾಗಿದ್ದವರು. ಇಲ್ಲಿನ ಶಿಕ್ಷಕರಲ್ಲಿಯೂ ಒಬ್ಬರು ರಾಷ್ಟ್ರಪತಿಯಾಗಬೇಕು. ದೇಶವನ್ನು ಮುನ್ನಡೆಸುವ ನಾಯಕರಾಗಿ ಬರಬೇಕು. ನಿಮ್ಮ ಮೂಲಕ ದಕ್ಷಿಣ ಭಾರತದದ ಸಮಸ್ಯೆಗಳಿಗೆ ಪರಿಹಾರವಾಗಬೇಕು. ಈಗ ದಂಡ ಪ್ರಯೋಗವಿಲ್ಲ. ದಂಡ ಶಿಕ್ಷಕರ ಮೇಲಿದೆ. ಇದು ಹೋಗಲಾಡಿಸಬೇಕು.
-ಭಾಗೀರಥಿ ಮುರಳ್ಯ, ಶಾಸಕರು ಸುಳ್ಯ