ಗೋ ವಧೆಗೈದು ಮಾಂಸ ಮಾಡಿದ ಪ್ರಕರಣ: ಪೆರ್ನೆಯ ಕಡಂಬುವಿನಲ್ಲಿ ಪ್ರತಿಭಟನೆ

0

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ದೇಜಪ್ಪ ಮೂಲ್ಯ ಎಂಬವರ ದನದ ಹಟ್ಟಿಯಿಂದ ಗುರುವಾರದಂದು ನಸುಕಿನಲ್ಲಿ ಗಬ್ಬದ ದನವನ್ನು ಕದ್ದೊಯ್ದ ಅವರ ಜಮೀನಿನಲ್ಲೇ ವಧಿಸಿ ಮಾಂಸ ಸಾಗಿಸಿದ ಪ್ರಕರಣವನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಸೆ.6ರಂದು ಪೆರ್ನೆಯ ಕಡಂಬು ಎಂಬಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಈಗಾಗಲೇ ಬಂಟ್ವಾಳ ಪೊಲೀಸರು ಪತ್ತೆ ಹಚ್ಚಿದ ಗೋ ಹಂತಕರು ನಿಜವಾದ ಪೆರ್ನೆ ಪ್ರಕರಣದ ಆರೋಪಿಗಳು ಹೌದೆನ್ನುವುದಾದರೆ ಅವರಿಗೆ ಪೆರ್ನೆಯ ದೇಜಪ್ಪ ಮೂಲ್ಯ ರವರ ಹಟ್ಟಿಯಲ್ಲಿ ದನವಿರುವುದರ ಮಾಹಿತಿಯನ್ನು ನೀಡಿರುವವರು ಯಾರು ಎನ್ನುವುದನ್ನೂ ಪತ್ತೆ ಹಚ್ಚಬೇಕು. ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ನೈಜ ಆರೋಪಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದರು. ಗೋ ಹಂತಕರ ವಿರುದ್ದ ಪೊಲೀಸರು ಮೃದು ಧೋರಣೆ ಅನುಸರಿಸಿದ್ದೇ ಆದರೆ ಭವಿಷ್ಯದ ದಿನಗಳಲ್ಲಿ ಅತ್ಯುಗ್ರ ಹೋರಾಟ ಅನಿವಾರ್ಯವಾದೀತೆಂದು ಎಚ್ಚರಿಸಿದರು.


ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಪರ ಸಂಘಟನೆಯ ಮುಖಂಡ ನರಸಿಂಹ ಶೆಟ್ಟಿ ಮಾಣಿ, ಗಣರಾಜ ಭಟ್ ಕೆದಿಲ ಮತ್ತಿತರರು ಮಾತನಾಡಿ, ಮನೆಗೆ ನುಗ್ಗಿ ಗೋ ಅಪಹರಿಸಿ ಅವರ ಜಾಗದಲ್ಲೇ ಹತ್ಯೆ ಮಾಡುವಂತಹ ಭಯಾನಕ ವಿದ್ಯಾಮಾನಗಳ ವಿರುದ್ಧ ಪೊಲೀಸರಿಂದ ಪರಿಣಾಮಕಾರಿ ಕ್ರಮದ ನಿರೀಕ್ಷೆಯನ್ನು ಹಿಂದೂ ಸಮಾಜ ಹೊಂದಿದೆ. ಈಗ ಬಂಧನ ಆಗಿರುವ ಆರೋಪಿಗಳ ಹಿಂದಿರುವ ಸ್ಥಳೀಯರನ್ನು ಪತ್ತೆ ಹಚ್ಚಿ ಅವರ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ಸಂಧರ್ಭದಲ್ಲಿ ಪೆರ್ನೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸಂತ್ರಸ್ತ ದೇಜಪ್ಪ ಮೂಲ್ಯರವರಿಗೆ ಧನ ಸಹಾಯವನ್ನು ವಿತರಿಸಲಾಯಿತು.


ಪ್ರತಿಭಟನೆಯಲ್ಲಿ ಪ್ರಮುಖರಾದ ಕಿರಣ್ ಶೆಟ್ಟಿ ಪೆರ್ನೆ, ನವೀನ್ ಪದಬರಿ, , ಕೇಶವ ಸುಣ್ಣಾಣ, ಪ್ರಕಾಶ್ ನಾಯಕ್, ಉಷಾ ಮುಳಿಯ, ಧನಂಜಯ್ ನಟ್ಟಿಬೈಲು, ಆದೇಶ್ ಶೆಟ್ಟಿ, ಪ್ರಸನ್ನ ಕುಮಾರ್ ಮಾರ್ಥ , ಪ್ರಸಾದ್ ಬಂಡಾರಿ, ಮುತ್ತಪ್ಪ ಸಾಲಿಯಾನ್ , ಶಾರದಾ, ಸುಮತಿ, ಜಯಂತಿ, ಸುಜಾತ, ನರಸಿಂಹ ನಾಯಕ್, ಉಮೇಶ್ ಸಾಮಂತ್, ಶ್ರೀಕಾಂತ್ ಮಣಿಯಾಣಿ, ಶಿವಪ್ಪ ನಾಯ್ಕ್, ರಮೇಶ್ ನಾಯ್ಕ್, ದೀಪಕ್ ಶೆಟ್ಟಿ, ಶರೋನ್ ನೊರೋನ್ಹಾ, ರಾಬರ್ಟ್ ಫೆರ್ನಾಂಡೀಸ್, ರಕ್ಷಿತ್ ಮತ್ತಿತರರು ಭಾಗವಹಿಸಿದ್ದರು.


ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪೊಲಿಸ್ ಬಂದೋಬಸ್ತು ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿ ಬಳಿ ನಡೆದ ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರು ಕೃತ್ಯ ನಡೆದ ದೇಜಪ್ಪ ಮೂಲ್ಯ ರವರ ಮನೆಗೆ ತೆರಳೀ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

LEAVE A REPLY

Please enter your comment!
Please enter your name here