ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಸಹಿತ ಸುತ್ತಮುತ್ತಲಿನ ಅಭಿವೃದ್ದಿ ರೂ.3.20 ಕೋಟಿಯಲ್ಲಿ ನಡೆಯಲಿದ್ದು ಅದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಮಾಡಿ, ಟೆಂಡರ್ ಕರೆಯುವ ಕೆಲಸ 45 ದಿನದೊಳಗೆ ಆಗಬೇಕೆಂದು ಶಾಸಕ ಅಶೋಕ್ ಕುಮಾರ್ ರೈ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪುತ್ತೂರು ನಗರಸಭೆ ನಗರೋತ್ಥಾನ ಅಮೃತಯೋಜನೆಯಲ್ಲಿ ಬಂದಿರುವ ಅನುದಾನ ರೂ.3.20 ಕೋಟಿಯಲ್ಲಿ ನಡೆಯಲಿರುವ ದೇವಸ್ಥಾನದ ಕೆರೆಯ ಅಭಿವೃದ್ಧಿಯ ಕುರಿತು ಸೆ.6ರಂದು ಶಾಸಕರ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಗೆ ಬಂದಿದ್ದ ರಾಜ್ಯ ಸರಕಾರದ ಹಂತದ ಅಧಿಕಾರಿಗಳೊಂದಿಗೆ ಶಾಸಕರು ಚರ್ಚಿಸಿದರು.ದೇವಸ್ಥಾನದ ಅಭಿವೃದ್ಧಿಯ ಚಿತ್ರಣದ ಕುರಿತು ತಮ್ಮ ದೂರಾಲೋಚನೆ, ಚಿಂತನೆಗಳನ್ನು ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.ಮೈಸೂರು ವಲಯದ ಪಿಡಿಎಂಸಿ ಟೀಮ್ ಲೀಡರ್ ನಟರಾಜ್ ಮತ್ತು ಮಂಗಳೂರಿನ ಹೇಮಂತ್ ಅವರು ಯೋಜನೆಯ ವಿವರನ್ನು ಶಾಸಕರಿಂದ ಪಡೆದುಕೊಂಡು ಇಲಾಖೆಯ ಮೂಲಕ ಕೆಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಿದ ಕೆರೆಯ ನಿರ್ಮಾಣದ ಕುರಿತು ಮಾಹಿತಿ ನೀಡಿದರು.ಕೆರೆಯ ನಡುವಿನ ಕಟ್ಟೆಯನ್ನು ಏರಿಸುವುದು, ಕೆರೆಯ ನೀರಿನ ಮಟ್ಟ ಏರಿಸುವುದು,ಸುತ್ತ ಗ್ರೆನೈಟ್ ಹಾಸು ಹಾಕಬೇಕು.ಕೆರೆಯ ಬಳಿಯ ಎರಡು ಕಟ್ಟೆಗಳನ್ನು ನವೀಕರಣಗೊಳಿಸುವುದು. ಕೆರೆಗೆ ನೀಲಿ ಬಣ್ಣದ ಕಲ್ಲನ್ನು ಬಳಸುವುದು. ಆ ಭಾಗದಲ್ಲಿ ಹರಿಕಥೆ ಮಂಟಪ ಮಾಡುವುದು.ದಾರಿ ದೀಪದ ವ್ಯವಸ್ಥೆ ಮಾಡುವುದು ಇತ್ಯಾದಿ ವಿಚಾರವನ್ನು ಶಾಸಕರು ತಿಳಿಸಿದರು.ಈ ಯೋಜನೆಯಲ್ಲಿ ಇದನ್ನು ಮಾಡಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದರು.ಈ ಯೋಜನೆಗೆ 45 ದಿನದ ಗಡು ನೀಡುತ್ತಿದ್ದೇನೆ.ಅದರೊಳಗೆ ಡಿಪಿಆರ್ ಆಗಿ ಟೆಂಡರ್ ಕೂಡಾ ಆಗಬೇಕೆಂದು ಶಾಸಕರು ತಿಳಿಸಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ಈಶ್ವರ ಬೆಡೇಕರ್, ನಳಿನಿ ಪಿ ಶೆಟ್ಟಿ, ವಿನಯ ಸುವರ್ಣ, ನಗರಸಭೆ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ಇಂಜಿನಿಯರ್ ಕೃಷ್ಣ ರೆಡ್ಡಿ, ನಗರಯೋಜನಾ ಪ್ರಾಧಿಕಾರದ ಸದಸ್ಯ ನಿಹಾಲ್ ಪಿ ಶೆಟ್ಟಿ ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಹೊಸ ರೂಪ ಕೊಡುವ ಕಲ್ಪನೆ
ಪುತ್ತೂರು ನಗರಸಭೆ ನಗರೋತ್ಥಾನ ಅಮೃತ 2 ನಲ್ಲಿ ರೂ. 3.20 ಕೋಟಿ ಅನುದಾನ ಬಂದಿದೆ. ಇದರಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯನ್ನು ಅಭಿವೃದ್ಧಿ ಮಾಡುವ ಕುರಿತು ನಗರಸಭೆಯ ಸದಸ್ಯರು ಕೂಡಾ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.ಕೆರೆಯ ಸುತ್ತ ಪರಿಶೀಲನೆ ಮಾಡಿದ್ದಾರೆ.ಕೆರೆಯನ್ನು ಯಾವ ರೀತಿ ನಿರ್ಮಾಣ ಮಾಡಬೇಕು ಮತ್ತು ಅದರ ಸುತ್ತಮುತ್ತ ಗ್ರಾನೈಟ್ ಹಾಕುವ ಕೆಲಸ, ಕಟ್ಟೆಗಳ ನವೀಕರಣ, ಕೆರೆಯ ಮಧ್ಯೆ ಇರುವ ದೇವರ ಕಟ್ಟೆಯನ್ನು ಎತ್ತರ ಮಾಡಿ ಕೆರೆಯ ನೀರನ್ನು ಇನ್ನಷ್ಟು ಮೇಲಕ್ಕೆ ಏರಿಸುವುದು ಒಂದು ಕಡೆಯಲ್ಲಿ ಆಗುತ್ತದೆ. ಮತ್ತೊಂದು ಕಡೆಯಲ್ಲಿ ದೇವಸ್ಥಾನದ ಮಾಸ್ಟರ್ ಪ್ಲ್ಯಾನ್ ಪ್ರಕಾರ ಸಾರ್ವಜನಿಕರಿಗೆ ವ್ಯಾಯಾಮಕ್ಕೆ ವ್ಯವಸ್ಥೆ, ಮಕ್ಕಳಿಗೆ ಆಡಲು ಪಾರ್ಕ್ ನಿರ್ಮಾಣ ಕೂಡಾ ಆಗಲಿದೆ. ಜೊತೆಗೆ ಕಂಬಳದ ಕರೆಯನ್ನು ಬದಿಗೆ ಸರಿಸುವ ಕೆಲಸವೂ ನಡೆಯಲಿದೆ.ಇದಕ್ಕೆಲ್ಲ ಡಿಪಿಆರ್ ಮಾಡಿ ಸರಕಾರಕ್ಕೆ ಕಳುಹಿಸುವ ಕುರಿತು ಚರ್ಚಿಸಲಾಗಿದೆ.ಮುಂದಿನ 45 ದಿನದ ಗಡು ನೀಡಿದ್ದೇನೆ. ಆ ಸಮಯದಲ್ಲಿ ಡಿಪಿಆರ್ ಮಾಡಿ ಟೆಂಡರ್ ಕರೆಯುವ ಕೆಲಸ ಆಗಬೇಕು. ಒಟ್ಟಿನಲ್ಲಿ ದೇವಸ್ಥಾನಕ್ಕೆ ಹೊಸ ರೂಪ ಕೊಡುವ ಕಲ್ಪನೆ ಆಗಲಿದೆ.ಜೊತೆಗೆ ರೂ.80 ಲಕ್ಷದಲ್ಲಿ ಬಿರುಮಲೆ ಬೆಟ್ಟದಲ್ಲಿ ಸುಂದರ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, 3 ದಿವಸದಲ್ಲಿ ಟೆಂಡರ್ ಕರೆಯುವ ಕೆಲಸ ಆಗಲಿದೆ. 2 ತಿಂಗಳೊಳಗೆ ಒಳ್ಳೆಯ ರೀತಿಯ ಪಾರ್ಕ್ ನಿರ್ಮಾಣ ಆಗಲಿದೆ
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು
ಪ್ರಶ್ನಾ ಚಿಂತನೆ
ದೇವರ ಒಪ್ಪಿಗೆಯಿಂದ ಅಭಿವೃದ್ದಿದೇವಳದ ವಿಚಾರದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕೆಲಸ ಕಾರ್ಯ ನಡೆಯುತ್ತದೆ.ಶಾಸಕರ ಯೋಜನೆಯು ದೇವಳದ ಸಂಪ್ರದಾಯಕ್ಕೆ ಪೂರಕವಾಗಿ ನಡೆಯುತ್ತಿದೆ.ಆದರೂ ಕೆಲವೊಂದು ಕೆಲಸ ಮಾಡುವಾಗ ಶಾಸಕರ ಸೂಚನೆಯಂತೆ ಪ್ರಶ್ನಾಚಿಂತನೆಯನ್ನು ಮಾಡಿಯೇ ದೇವರ ಒಪ್ಪಿಗೆ ಪಡೆದು ಕೆಲಸ ಮುಂದುವರಿಸುತ್ತಿದ್ದೇವೆ
-ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು