ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಲಲಿತಾ ಇವರ ಅಧ್ಯಕ್ಷತೆಯಲ್ಲಿ ಸೆ.4ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರವರು ಮಾದಕ ವ್ಯಸನ ಮುಕ್ತ ಕರ್ನಾಟಕದ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕರಾದ ನಳಿನಾಕ್ಷಿ ಎನ್.ಆರ್.ಎಲ್.ಎಂ ಯೋಜನೆ, ಸ್ವ ಉದ್ಯೋಗ ಚಟುವಟಿಕೆ,ವಿ.ಪಿ.ಅರ್.ಪಿ ತರಬೇತಿ, ಘನತ್ಯಾಜ್ಯ ಘಟಕ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಂಜೀವಿನಿ ಒಂದು ಒಳ್ಳೆಯ ಕಾರ್ಯಕ್ರಮ ಎಂದು ಹೇಳುತ್ತಾ ಶುಭ ಹಾರೈಸಿದರು. ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ಮಾತನಾಡಿ ಸಂಜೀವಿನಿ ಒಕ್ಕೂಟದಿಂದ ಸರಕಾರದ ಸೌಲಭ್ಯ ಜನರಿಗೆ ಸಿಗುವಂತಾಗಲೆಂದು ಹೇಳಿದರು. ಆರೋಗ್ಯ ಅಧಿಕಾರಿಗಳಾದ ಲಕ್ಷ್ಮಿ ಮತ್ತು ಕುಸುಮಾವತಿ ಹಾಗೂ ಆಶಾ ಕಾರ್ಯಕರ್ತೆಯವರು ಆರೋಗ್ಯ ತಪಾಸಣೆ ನಡೆಸಿಕೊಟ್ಟರು. 2024-25ನೇ ಸಾಲಿನ ಗ್ರಾಮ ಮಟ್ಟದಲ್ಲಿ ಅತ್ಯುತ್ತಮ ಸಂಘವನ್ನು ಆಯ್ಕೆ ಮಾಡಿ ಸ್ಮರಣಿಕೆ ಹಾಗೂ ಸಂಘದ ಸದಸ್ಯರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಭವ್ಯ, ಶಾಲಿನಿ ಪ್ರಾರ್ಥಿಸಿ, ಚಿತ್ರಕಲಾ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಸೌಮ್ಯ ಜೆ ರೈ 2024-25ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರ ವರದಿ ಮಂಡಿಸಿದರು. ಪವಿತ್ರ ಕಾರ್ಯಕ್ರಮದ ನಿರೂಪಣೆ ಮಾಡಿದರು. ತೇಜಸ್ವಿನಿ ವಂದಿಸಿದರು. ಒಕ್ಕೂಟದ ಮಹಾಸಭೆ ನಡೆದ ನಂತರ ಕೃಷಿ ಇಲಾಖೆಯಿಂದ ಜೇನು ಕೃಷಿ ತರಬೇತಿಯನ್ನು ನಡೆಸಲಾಯಿತು.