ದರ್ಬೆ ನಯಾ ಚಪ್ಪಲ್ ಬಜಾರ್‌ರವರಿಂದ ಶಿಕ್ಷಕರ ದಿನಾಚರಣೆ – ನಿವೃತ್ತ ಹಿರಿಯ ಶಿಕ್ಷಕ ಸುರೇಶ್ ಶೆಟ್ಟಿರವರಿಗೆ ಸನ್ಮಾನ

0

ಪುತ್ತೂರು: ಸೆ.5 ಶಿಕ್ಷಕರ ದಿನಾಚರಣೆ ದಿನದಂದು ದರ್ಬೆ ಬುಶ್ರಾ ಟವರ‍್ಸ್‌ನಲ್ಲಿ ವ್ಯವಹರಿಸುತ್ತಿರುವ ಪಾದರಕ್ಷೆಗಳ ಮಳಿಗೆ ನಯಾ ಚಪ್ಪಲ್ ಬಜಾರ್ ಮಳಿಗೆಯಿಂದ ನಿವೃತ್ತ ಹಿರಿಯ ಶಿಕ್ಷಕ ಸುರೇಶ್ ಶೆಟ್ಟಿರವರನ್ನು ಗೌರವಿಸಿ ಸನ್ಮಾನಿಸಲಾಯಿತು.


‘ನೀವು ನನ್ನ ಸರ್ ಆಗಿದ್ದೀರಿ’ ಶಿಕ್ಷಕನ ಫಲಾಪೇಕ್ಷೆ-ರೆ|ವಿಜಯ ಹಾರ್ವಿನ್:

ನೆಹರುನಗರದ ಸುದಾನ ಸಮೂಹ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ|ವಿಜಯ ಹಾರ್ವಿನ್‌ರವರು ಮಾತನಾಡಿ, ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರ. ಮಾನವ ಸಂಪತ್ತು ಅವನ್ನು ತಿದ್ದಿ, ತೀಡಿ ಬೆಳೆಸುವುದು ಶಿಕ್ಷಕರ ಜವಾಬ್ದಾರಿ. ಯಾವುದೇ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ ಸಂದರ್ಭದಲ್ಲಿ ತನಗೆ ಕಲಿಸಿದ ಶಿಕ್ಷಕರ ಕುರಿತು ‘ನೀವು ನನ್ನ ಸರ್ ಆಗಿದ್ದೀರಿ’ ಎಂಬುವುದೇ ಶಿಕ್ಷಕ ವೃತ್ತಿಯನ್ನು ನಿರ್ವಹಿಸುವವರ ಫಲಾಪೇಕ್ಷೆಯಾಗಿದೆ. ಇಂದು ಹಿರಿಯ ವಿದ್ಯಾರ್ಥಿಗಳು ಸುರೇಶ್ ಶೆಟ್ಟಿರವರಂತಹ ಹಿರಿಯ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿರುವುದು ಶಿಕ್ಷಕರ ದಿನಾಚರಣೆಗೆ ಅರ್ಥ ತಂದಿದೆ. ಯಾವುದೇ ವೃತ್ತಿಯಾಗಲಿ, ಆ ವೃತ್ತಿಯನ್ನು ಪ್ರೀತಿಸಬೇಕು, ತನ್ನನ್ನು ತಾನು ಅರ್ಪಿಸಿಕೊಂಡಾಗ ಒಳ್ಳೆಯ ಫಲ ದೊರಕುವುದು ಎಂದರು.


ಒಳ್ಳೆಯ ಶಿಕ್ಷಕರಿದ್ದರೆ ಒಳ್ಳೆಯ ಪ್ರಜೆಗಳು, ದೇಶ ಗಟ್ಟಿ-ಬಲರಾಂ ಆಚಾರ್ಯ:
ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಂ ಆಚಾರ್ಯ ಮಾತನಾಡಿ, 1997-98ರ ಅವಧಿಯಲ್ಲಿ ರೋಟರಿಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಅವರು ನನಗೆ ಕಾರ್ಯದರ್ಶಿಯಾಗಿದ್ದವರು. ಇಂದು ಓರ್ವ ಒಳ್ಳೆಯ ಶಿಕ್ಷಕನಾಗಬೇಕಾದರೆ ಆತ ಜೀವನಪೂರ್ತಿ ವಿದ್ಯಾರ್ಥಿಯಾಗಿರಬೇಕು. ಸುರೇಶ್ ಶೆಟ್ಟಿಯವರು ಇಂದಿಗೂ ವಿದ್ಯಾರ್ಥಿಯೇ. ಯಾಕೆಂದರೆ ಯಾವುದೇ ವಿಷಯವಾಗಲಿ ಆ ವಿಷಯವನ್ನು ಅವರು ಓದಿ ಮನದಟ್ಟು ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಹಿಂದಿನ ಮಕ್ಕಳು ಮುಂದಿನ ಪ್ರಜೆಗಳು. ನಮ್ಮ ದೇಶ ಗಟ್ಟಿಯಾಗಿರಬೇಕಾದರೆ ಪ್ರಜೆಗಳು ಒಳ್ಳೆದಿರಬೇಕು. ನಾಳೆ ಒಳ್ಳೆಯ ಪ್ರಜೆಗಳಾಗಬೇಕಾದರೆ ಸುರೇಶ್ ಶೆಟ್ಟಿಯವರಂತಹ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದರು.


ಸುರೇಶ್ ಶೆಟ್ಟಿಯವರದ್ದು ಜ್ಞಾನ ಭಂಡಾರ-ಡಾ.ಅಶೋಕ್ ಪಡಿವಾಳ್:
ಬೊಳ್ವಾರು ಮಹಾವೀರ ಮೆಡಿಕಲ್ ಸೆಂಟರ್ ಮುಖ್ಯಸ್ಥ ಡಾ.ಅಶೋಕ್ ಪಡಿವಾಳ್ ಮಾತನಾಡಿ, ಸುರೇಶ್ ಶೆಟ್ಟಿಯವರದ್ದು ಜ್ಞಾನ ಭಂಡಾರ. ಅವರಿಗೆ ಗೊತ್ತಿಲ್ಲದಿರುವುದು ಬಹಳ ಕಡಿಮೆ. ರೋಟರಿ ವಿಷಯದಲ್ಲಿ ಆದರೆ ರೋಟರಿ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಎಲ್ಲಾ ವಿಷಯಗಳು ಅವರಿಗೆ ಗೊತ್ತಿದೆ. ದೇವರಿಗೆ ಬಹಳ ಹತ್ತಿರದ ಸ್ಥಾನ ಉಪಾಧ್ಯಾಯರು. ವಯಸ್ಸು 60ರ ನಂತರ ಆರೋಗ್ಯ ಕೊಡು ಅಂತಲೇ ದೇವರಲ್ಲಿ ಬೇಡಿಕೊಳ್ಳುವುದು ಬೇರೇನೂ ಇಲ್ಲ ಎಂದರು.


ಶಿಕ್ಷಣದ ಮೌಲ್ಯ ಕುಸಿಯುತ್ತಿದ್ದಾಗ ಸುರೇಶ್ ಶೆಟ್ಟಿಯಂತಹ ಶಿಕ್ಷಕರು ಬೇಕಿತ್ತು-ಡಾ.ನಝೀರ್ ಅಹಮದ್:
ಕಲ್ಲಾರೆ ಡಾ.ನಝೀರ‍್ಸ್ ಡಯಾಬೆಟ್ಸ್ ಸೆಂಟರ್ ಮುಖ್ಯಸ್ಥ ಡಾ.ನಝೀರ್ ಅಹಮದ್ ಮಾತನಾಡಿ, ನನಗೆ ಸುರೇಶ್ ಶೆಟ್ಟಿ ಮಾಸ್ಟ್ರು ನೇರವಾಗಿ ಪಾಠ ಮಾಡಿದ ಗುರುಗಳಲ್ಲ. ನನ್ನ ತಂದೆಯವರು ಓದಿದ್ದು ಫಿಲೋಮಿನಾದಲ್ಲಿ. ಅವರು ಡೆನಿಸ್ ಸರ್‌ರಂತವರ ಕಥೆಗಳನ್ನು ಹೇಳುತ್ತಿದ್ದರು. ನನಗೆ ಸುರೇಶ್ ಶೆಟ್ಟಿಯವರು ರೋಟರಿ ಮುಖೇನ ಪರಿಚಿತರು. ಬೇರೆ ಶಿಕ್ಷಕರನ್ನು ನೋಡಿದಾಗ ಸುರೇಶ್ ಶೆಟ್ಟಿಯವರು ಕೂಡ ನಮ್ಮ ಶಿಕ್ಷಕರು ಎಂಬ ಭಾವನೆಯಾಗುತ್ತಿತ್ತು. ಇಂದಿನ ದಿನಗಳಲ್ಲಿ ಶಿಕ್ಷಣದ ಮೌಲ್ಯ ಕುಸಿಯುತ್ತಿದ್ದ ಸಂದರ್ಭದಲ್ಲಿ ಸುರೇಶ್ ಶೆಟ್ಟಿಯವರಂತಹ ಶಿಕ್ಷಕರು ಬೇಕಿತ್ತು ಸಮಾಜದಲ್ಲಿ. ಇಂತಹ ಶಿಕ್ಷಕರು ಸಮಾಜದಲ್ಲಿ ಮೂಡಿ ಬರಲಿ, ಶಿಕ್ಷಣದ ಮೌಲ್ಯ ವೃದ್ಧಿಸಲಿ ಎಂದರು.


ಎಂ.ಜಿ ರಫೀಕ್‌ಗೆ ಫೂಟ್‌ವೇರ್‌ಗೆ ನಾನು ಗುರು-ಎಂ.ಜಿ ರಝಾಕ್:
ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿರವರ ಹಿರಿಯ ಸಹೋದರ ಎಂ.ಜಿ ರಝಾಕ್ ಮಾತನಾಡಿ, ನನ್ನ ಸಹೋದರ ರಫೀಕ್ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ನಮೂದಿಸಿರುತ್ತಾರೆ. ಎಲ್ಲರಿಗೂ ಓರ್ವ ಗುರುಗಳಿರುತ್ತಾರೆ. ರಾಜಕೀಯ, ಶಿಕ್ಷಣಕ್ಕೆ ಹೀಗೆ ಗುರುಗಳಿದ್ದು ರಫೀಕ್‌ನ ಫೂಟ್‌ವೇರ್ ಉದ್ಯಮಕ್ಕೆನಾನು ಗುರುವಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಡಾ.ಗೋಪಿನಾಥ್ ಪೈ, ವಾಮನ್ ಪೈ, ಪ್ರಭಾಕರ್ ಎ.ಎಂ, ಶ್ರೀಕಾಂತ್ ಕೊಳತ್ತಾಯ, ಶ್ರೀಧರ್ ಗೌಡ ಕಣಜಾಲು, ಎ.ಜೆ ರೈ, ಪ್ರೊ|ದತ್ತಾತ್ರೇಯ ರಾವ್, ಡಾ.ಕೆ.ಎಸ್ ಭಟ್, ಸುಂದರ ಗೌಡ, ಪ್ರೇಮಾನಂದ ಬಿ, ಭುಜಂಗ ಆಚಾರ್ಯ, ಮನೋಜ್ ಟಿ.ವಿ, ಸುದರ್ಶನ್ ರಾವ್, ಕೆ.ವಿಶ್ವನಾಥ್, ರೋಟರಿ ಸಿಟಿ ಅಧ್ಯಕ್ಷ ಉಲ್ಲಾಸ್ ಪೈ ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಸದಸ್ಯ ಪರಮೇಶ್ವರ ಗೌಡ ವಂದಿಸಿದರು. ನ್ಯಾಯವಾದಿ ಚಿದಾನಂದ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು. ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಸಹಕರಿಸಿದರು.

ಸನ್ಮಾನಿಸಿರುವುದು ಜೀವನದ ಅವಿಷ್ಮರಣೀಯ ದಿನ..
ಸಮಾಜದಲ್ಲಿ ವಿದ್ಯೆ ಕಲಿಸುವ ಅಧ್ಯಾಪಕರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ರೋಟರಿ ಸಂಸ್ಥೆಯು ನನಗೆ ಕುಟುಂಬ ಇದ್ದಾಗೆ. ಇಲ್ಲಿ ಎಲ್ಲರೂ ನನ್ನವರೇ, ನನ್ನ ಸಹೋದರರೇ. ಪುತ್ತೂರಿನ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರೋರ್ವ ಗ್ರೇಟ್‌ಮ್ಯಾನ್. ಅವರ ಬಗ್ಗೆ ನನಗೆ ಬಹಳ ಅಭಿಮಾನವಿದೆ. ಒಮ್ಮೆ ಮೊ|ಪತ್ರಾವೋರವರಲ್ಲಿ ನೀವು ಯಾಕೆ ಹುಡುಗಿಯರ ಶಾಲೆಗೆ ಹುಡುಗನ ಹೆಸರು ‘ವಿಕ್ಟರ್’, ಹುಡುಗರ ಶಾಲೆಗೆ ಹುಡುಗಿಯ ಹೆಸರು ‘ಫಿಲೋಮಿನಾ’ ಅಂತ ಹೆಸರಿಟ್ಟಿರುವುದು ಅಂತ ಕೇಳಿದ್ದೆ. ಓ ಹೌದಲ್ಲ, ಇದು ನನಗೆ ಗೊತ್ತೇ ಆಗಲಿಲ್ಲ, ಆದರೆ ನಿನಗೆ ಗೊತ್ತಾಯಿತು ಅಂತ ಹೇಳಿದ್ದು ನನಗೆ ನೆನಪಾಗುತ್ತದೆ. ಶಿಕ್ಷಕ ವೃತ್ತಿಯ ಜೊತೆಗೆ ನಾನು ಕ್ರೀಡಾ ಮ್ಯಾಗಝಿನ್ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು ಶಿಕ್ಷಕರ ದಿನಾಚರಣೆ ಸಂದರ್ಭ ನನ್ನನ್ನು ನೀವು ಸನ್ಮಾನಿಸಿರುವುದು ನನ್ನ ಜೀವನದ ಅವಿಷ್ಮರಣೀಯ ದಿನವಾಗಿದೆ.
-ಸುರೇಶ್ ಶೆಟ್ಟಿ,
ಸನ್ಮಾನಿತ ನಿವೃತ್ತ ಹಿರಿಯ ಶಿಕ್ಷಕರು

LEAVE A REPLY

Please enter your comment!
Please enter your name here