ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ಆಶ್ರಯದಲ್ಲಿ ಉದ್ಯಮಿ ದರ್ಬೆ ಬೈಪಾಸ್ ಅಶ್ವಿನಿ ರೆಸ್ಟೋರೆಂಟ್ ಆಂಡ್ ಬಾರ್ ಮಾಲಕರಾದ ಕರುಣಾಕರ್ ರೈ ದೇರ್ಲ ಹಾಗೂ ಕೃಷ್ಣವೇಣಿ ಕರುಣಾಕರ್ ರೈ ದಂಪತಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎರಡು ಸಾವಿರ ಲೀಟರಿನ ನೀರಿನ ಟ್ಯಾಂಕ್ ಅನ್ನು ಸೆ. 8 ರಂದು ಕೊಡುಗೆಯಾಗಿ ನೀಡಿರುತ್ತಾರೆ.

ಸುಮಾರು 120 ವಿದ್ಯಾರ್ಥಿಗಳಿರುವ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜಿಗೆ ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬರವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಗಾಗಲೇ ದಾನಿಗಳ ನೆರವಿನಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆಯು ಸಂಸ್ಥೆ ಹೊಂದಿರುತ್ತದೆ. ಪ್ರಾಂಶುಪಾಲ ಪ್ರೊ|ಸುಬ್ಬಪ್ಪ ಕೈಕಂಬ ಮಾತನಾಡಿ, ಕಾಲೇಜಿನಲ್ಲಿ ಐದು ಸಾವಿರ ಲೀಟರಿನ ಟ್ಯಾಂಕ್ ಒಡೆದು ಹೋಗಿತ್ತು. ದರ್ಬೆ ಅಶ್ವಿನಿ ಹೊಟೇಲ್ ಮಾಲಕರಾದ ಕರುಣಾಕರ್ ರೈರವರು ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಭರಿಸಲು ಸಿದ್ದರಾಗಿದ್ದರು. ಇದೀಗ ಕಾಲೇಜಿಗೆ ಎರಡು ಸಾವಿರ ಲೀಟರಿನ ಟ್ಯಾಂಕ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ. ಸಮಾಜದಲ್ಲಿ ಅದೆಷ್ಟೋ ಶ್ರೀಮಂತರಿದ್ದಾರೆ ಆದರೆ ಕೊಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ. ಕರುಣಾಕರ್ ರೈರವರು ಕೊಡುವ ಮನಸ್ಸು ಮಾಡಿರುವುದು ನಮಗೆ ಖುಷಿ ತಂದಿದೆ ಎಂದರು.
ಉದ್ಯಮಿ, ಅಶ್ವಿನಿ ಹೊಟೇಲ್ ಮಾಲಕ ಕರುಣಾಕರ್ ರೈ ದೇರ್ಲರವರು ಮಾತನಾಡಿ, ಗ್ರಾಮೀಣ ಭಾಗವಾಗಿರುವ ಈ ಪ್ರದೇಶದಲ್ಲಿನ ಕಾಲೇಜಿಗೆ ವಿದ್ಯಾರ್ಥಿಗಳು ಬರಲಾರರು ಎನ್ನುವ ಆತಂಕವಿತ್ತು. ಆದರೆ ಸುಬ್ಬಪ್ಪ ಕೈಕಂಬರವರು ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಇದು ಮುಂದಿನ ವರ್ಷದಲ್ಲಿ ಮತ್ತಷ್ಟು ದ್ವಿಗುಣಗೊಳ್ಳಲಿ ಮಾತ್ರವಲ್ಲ ಕಾಲೇಜು ಅಭಿವೃದ್ಧಿ ನಿಟ್ಟಿನಲ್ಲಿ ಮತ್ತಷ್ಟು ದಾನಿಗಳು ಮುಂದೆ ಬರಲಿ ಎಂದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ ಮಾತನಾಡಿ, ಉದ್ಯಮಿ ಕರುಣಾಕರ್ ರೈ ದೇರ್ಲ ದಂಪತಿ ತಮ್ಮ ಕೊಡುಗೆಯನ್ನು ಕ್ಲಬ್ ಮುಖೇನ ನೀಡಿರುವುದು ಹೆಮ್ಮೆ ತಂದಿದ್ದು ಕೊಡುಗೆಯು ಕಾಲೇಜಿಗೆ ಸದುಪಯೋಗವಾಗಲಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡುಗೆಯನ್ನು ನೀಡುವ ಭರವಸೆಯನ್ನು ಉದ್ಯಮಿ ಕರುಣಾಕರ್ ರೈರವರು ವ್ಯಕ್ತಪಡಿಸಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಕರುಣಾಕರ್ ರೈ ದೇರ್ಲರವರ ಪತ್ನಿ ಶ್ರೀಮತಿ ಕೃಷ್ಣವೇಣಿ ಕರುಣಾಕರ್ ರೈ, ರೋಟರಿ ಸಿಟಿ ಸದಸ್ಯರಾದ ಜಯಕುಮಾರ್ ರೈ ಎಂ.ಆರ್, ರವಿಕುಮಾರ್ ಕಲ್ಕಾರು, ರಾಮಚಂದ್ರ ಬನ್ನೂರು ಉಪಸ್ಥಿತರಿದ್ದರು.