ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇವುಗಳ ಆಶ್ರಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಸೆ.8ರಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ನಡೆಯಿತು.

ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಬದುಕಿನ ಮೌಲ್ಯವನ್ನು ಅರಿತು ವ್ಯಾಸಂಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಸಮಾಜದಲ್ಲಿ ಇರುವ ಮಾದಕ ವ್ಯಸನ ಇನ್ನಿತರ ಚಟಗಳಿಂದ ದೂರವಿದ್ದು ಉತ್ತಮ ಜೀವನ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ಇದರ ಅಧ್ಯಕ್ಷ ಮಹೇಶ್ ಕೆ ಸವಣೂರು ಮಾತನಾಡಿ ವಿದ್ಯಾರ್ಥಿಗಳು ತಂದೆ ತಾಯಿಯವರು ನಿಮ್ಮ ಮೇಲೆ ಇಟ್ಟ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕು. ಆಗ ಮಾತ್ರ ನೀವು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮೂಡಿಬರಲು ಸಾಧ್ಯವಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿರುವ ಪುತ್ತೂರು ನೆಹರುನಗರ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ, ವಕೀಲರಾದ ಮನೋಹರ ಎ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯಕರ ಸಮಾಜದ ನಿರ್ಮಾಣದ ಕಡೆ ಒತ್ತನ್ನು ನೀಡಬೇಕು ಆಗ ಮಾತ್ರ ಸಮಾಜ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಮಕ್ಕಳು ಮಾದಕ ವ್ಯಸನ ಮತ್ತು ದುಶ್ಚಟಗಳಿಂದ ದೂರವಿದು ಸದೃಢ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಶಿಕ್ಷಣದ ಜೊತೆಗೆ ನಮ್ಮಲ್ಲಿರುವ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವ ಪ್ರಯತ್ನ ನಡೆಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ, ಸವಣೂರು ಸರಕಾರಿ ಪ್ರೌಢಶಾಲೆಯ ಮುಖ್ಯಗುರು ರಘು ಬಿ. ಆರ್, ಮಂಗಳೂರು ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷಸುರೇಶ್ ರೈ ಸೂಡಿಮುಳ್ಳು, ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕಿಶನ್ ಬಿ.ವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸವಣೂರು ವಲಯ ಮೇಲ್ವಿಚಾರಕಿ ವೀಣಾ ಕೆ ವಂದಿಸಿದರು. ಮೀನಾಕ್ಷಿ ದೇವಸ್ಯ, ಅಮಿತಾ ದೇವಸ್ಯ ಸಹಕರಿಸಿದರು.