ಗೆಳೆತನ, ಬಾಂಧವ್ಯ, ಸೇವೆ ರೋಟರಿ ಮೂಲ ಉದ್ಧೇಶ-ಪ್ರಕಾಶ್ ಕಾರಂತ್
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಈಸ್ಟ್ ಆಶ್ರಯದಲ್ಲಿ ರೋಟರಿ ಸದಸ್ಯರ ಕುಟುಂಬ ಸಮ್ಮಿಲನ ಹಾಗೂ ಗೀತ ಸಾಹಿತ್ಯದಲ್ಲಿ ಪ್ರಖ್ಯಾತಿ ಹೊಂದಿದ ವಿಠಲ ನಾಯಕ್ ಕಲ್ಲಡ್ಕರವರಿಂದ ಸಂಸಾರ-ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸೆ.6 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.
ರೋಟರಿ ಪಿಡಿಜಿ ಪ್ರಕಾಶ್ ಕಾರಂತ್ ಮಾತನಾಡಿ, ರೋಟರಿ ಸಂಸ್ಥೆಯ ಮೂಲ ಉದ್ಧೇಶ ಅದು ಗೆಳೆತನ, ಬಾಂಧವ್ಯ ಹಾಗೂ ಸೇವೆಯಾಗಿದ್ದು ರೋಟರಿ ಬಂಧುಗಳು ಇದರಲ್ಲಿ ನೈತಿಕವಾಗಿ ಹಾಗೂ ಭೌತಿಕವಾಗಿ ತೊಡಗಿಸಿಕೊಂಡಿದ್ದಾರೆ. ರೋಟರಿ ಸಹಭಾಗಿತ್ವದಲ್ಲಿ ರೋಟರಿ ಬಂಧುಗಳು ಮತ್ತೊಬ್ಬರ ಕಣ್ಣೀರೊರೆಸುವ ಕೈಂಕರ್ಯಯನ್ನು ಮಾಡಿದಾಗ ರೋಟರಿಯ ಮೂಲ ಉದ್ಧೇಶ ಈಡೇರುತ್ತದೆ. ರೋಟರಿಯ ಆಶಯವಾದ ಸ್ನೇಹತ್ವ ಹಾಗೂ ಒಡನಾಟ ಎಂಬುದು ಜೀವನ ಪರಿವರ್ತಿಸಬಲ್ಲ ಶಕ್ತಿಯಾಗಿದೆ ಎಂದರು.

ಸಂಸಾರದಲ್ಲಿ ಹೊಂದಾಣಿಕೆ, ವಿಶ್ವಾಸವಿರಲಿ, ಸ್ಪರ್ಧೆ, ಹೋಲಿಕೆ ಬೇಡ-ವಿಠಲ ನಾಯಕ್:
ಗೀತ ಸಾಹಿತ್ಯದಲ್ಲಿ ಪ್ರಖ್ಯಾತಿ ಹೊಂದಿದ ವಿಠಲ ನಾಯಕ್ ಕಲ್ಲಡ್ಕರವರು ಸಂಸಾರ-ಸಾಹಿತ್ಯ ಸಂಭ್ರಮದ ಕುರಿತು ಮಾತನಾಡಿ, ಸಂಸಾರದಲ್ಲಿ ಸಾಹಿತ್ಯ ಕೆಲಸ ಮಾಡುತ್ತದೆ. ಸಂಸಾರ ಅನ್ನುವುದು ಒಬ್ಬರನೊಬ್ಬರು ಅರಿತು, ತಿಳಿದುಕೊಂಡು ಹೋಗುವುದಾಗಿದೆ. ತಂತ್ರಜ್ಞಾನದಲ್ಲಿ ಎತ್ತರಕ್ಕೆ ಹೋಗುವುದು ಮುಖ್ಯವಲ್ಲ, ಅದರಲ್ಲಿ ನಮಗೆ ನಂಬಿಕೆ ಇರಿಸುವುದು ಮುಖ್ಯವಾಗಿದೆ. ಕುಟುಂಬದಲ್ಲಿ ಪರಸ್ಪರ ಗ್ರಹಿಸಿಕೊಳ್ಳುವುದು ದೂರ ಮಾಡಿ. ಲೆಕ್ಕಕ್ಕಿಂತ ಹೆಚ್ಚು ಗ್ರಹಿಸಿಕೊಳ್ಳಲು ಹೋಗಬೇಡಿ. ಸಂಸಾರವು ಸುಖೀ ಸಂಸಾರವನ್ನು ಕಾಣಬೇಕಾದರೆ ಸಂಸಾದಲ್ಲಿ ಪರಸ್ಪರ ಹೊಂದಾಣಿಕೆ ಹಾಗೂ ವಿಶ್ವಾಸವಿರಲಿ, ಸ್ಪರ್ಧೆ, ಹೋಲಿಕೆ ಬೇಡ ಎಂದರು.
ರೋಟರಿ ಸಂಸ್ಥೆಯು ಸಮಾಜಸೇವೆಗೆ ಹೆಸರುವಾಸಿ-ಶಶಿಧರ್ ಕಿನ್ನಿಮಜಲು:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಸೇವೆಗೆ ಹೆಸರುವಾಸಿಯಾಗಿದೆ. ಸಮಾಜದಲ್ಲಿನ ನಿರ್ಗತಿಕರ, ಅಶಕ್ತರ ಕಣ್ಣೀರೊರೆಸುವ ಕಾರ್ಯ ರೋಟರಿ ಸಂಸ್ಥೆಯಿಂದ ಆಗಿದೆ. ಮುಂದಿನ ದಿನಗಳಲ್ಲಿ ಸಮಾಜಸೇವೆ ಕಾರ್ಯ ಮತ್ತಷ್ಟು ಮುಂದುವರೆಯಲಿದೆ ಎಂದರು.
ಪಿ.ಎಚ್.ಎಫ್ ಗೌರವ:
ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್ ಗೆ ಟಿ.ಆರ್.ಎಫ್ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿ ಪಡೆದ ಡಾ.ರವಿಪ್ರಕಾಶ್ ರವರಿಗೆ ಪಿ.ಎಚ್.ಎಫ್ ಪ್ರಮಾಣಪತ್ರವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಸದಸ್ಯ ನಿಶಾಂತ್ ರೈ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಸ್ವಾಗತಿಸಿ, ಕಾರ್ಯದರ್ಶಿ ನವೀನ್ ರೈ ಪಂಜಳ ವಂದಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ನವೀನ್ ಶೆಟ್ಟಿ, ಕ್ಲಬ್ ನಿಯೋಜಿತ ಅಧ್ಯಕ್ಷ ರವಿಕುಮಾರ್ ರೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಪೂರ್ವಾಧ್ಯಕ್ಷ ಶರತ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
ವಿಠಲ ನಾಯಕ್ ರವರ ಮಾತಿನಲ್ಲಿನ ಸಂಸಾರದ ಝಲಕ್..
-ವೇದಿಕೆ ಮೇಲೆ ಮಾತನಾಡುವಾಗ ವೇದಿಕೆ ಕೆಳಗೆ ಇರುವವರು ಸುಮ್ಮನಿದ್ದರೆ ಅದು ಶೋಕಸಭೆ ಹಾಗೆಯೇ ವೇದಿಕೆ ಮೇಲೆ ಸುಮ್ಮನಿದ್ದು ವೇದಿಕೆ ಕೆಳಗೆ ಮಾತನಾಡುವವರು ಅದು ಲೋಕಸಭೆ..
-ಸಂಸಾರ ಜೀವನವು ಮೊದಲ ಸ್ಥಾನ ಸಿಗಬೇಕೆಂಬ 1500ಮೀ. ರೇಸ್ ಆಗದೆ ಅದು ಕೊನೆಯವರಾಗಿ ಬರಬೇಕೆಂಬ ಲಿಂಬೆ ಚಮಚ ಓಟ ಆಗಿರಲಿ…
-ತನಗೆ ಸಿಗುತ್ತದೆ ಅಂತ ಲೆಕ್ಕಕ್ಕಿಂತ ಹೆಚ್ಚು ಗ್ರಹಿಸಲು ಹೋಗಬೇಡಿ, ಹೋದರೆ ಗ್ರಹಚಾರ..
-ಸಂಸಾರದಲ್ಲಿ ಹೊಂದಾಣಿಕೆ, ವಿಶ್ವಾಸವಿರಲಿ, ಅಲ್ಲಿ ಸ್ಪರ್ಧೆ, ಹೋಲಿಕೆ ಬೇಡ..
ಸನ್ಮಾನ..
ಶಿಕ್ಷಕರ ದಿನಾಚರಣೆ ಅಂಗವಾಗಿ ತನಗೆ ವಿದ್ಯೆ ಬೋಧಿಸಿದ ಗುರುಗಳಾದ ಪ್ರಸ್ತುತ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾಗಿರುವ ಚಂದ್ರಹಾಸ ರೈ ಬಿ.ರವರನ್ನು ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಕ್ಲಬ್ ನೆಲೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಮಾಜಮುಖಿ ಸೇವೆ..
ರೋಟರಿ ಭೀಷ್ಮ ಖ್ಯಾತಿಯ ಕೆ.ಆರ್ ಶೆಣೈರವರ ಪ್ರಾಯೋಜಕತ್ವದಲ್ಲಿ ರೂ.17 ಸಾವಿರ ಮೊತ್ತದ ಬೆಡ್ ಅನ್ನು ಆನಂದ ಬೋಳಂತಿಮಾರುರವರಿಗೆ, ನಿಕಟಪೂರ್ವ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆರವರ ಪ್ರಾಯೋಜಕತ್ವದಲ್ಲಿ ಫಲಾನುಭವಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ವಸ್ತಿಕಾರವರಿಗೆ ಲ್ಯಾಪ್ ಟಾಪ್, ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ಹಾಗೂ ಪ್ರದೀಪ್ ರಾವ್ ರವರ ಪ್ರಾಯೋಜಕತ್ವದಲ್ಲಿ ತೆಂಕಿಲ ಶಾಲೆಗೆ ಹತ್ತು ಚೇರ್ ಗಳನ್ನು, ಕಣಿಯಾರು ಅಂಗನವಾಡಿ ಶಾಲೆಗೆ ಕ್ಲಬ್ ನೂತನ ಸದಸ್ಯ ಮನಮೋಹನ್ ರವರ ಪ್ರಾಯೋಜಕತ್ವದಲ್ಲಿ ಕಬಾಟ್ ನ ಮೊತ್ತದ ಚೆಕ್, ಕಾರ್ಯದರ್ಶಿ ನವೀನ್ ರೈ ಪಂಜಳರವರ ಮೂಲಕ ಕ್ಲಬ್ ವತಿಯಿಂದ ಸಂಪ್ಯದಮೂಲೆ ವೈಶಾಲಿರವರ ಮನೆಗೆ ನೀರಿನ ಟ್ಯಾಂಕ್ ಅನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.