ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ರೂ.631 ಕೋಟಿ ವ್ಯವಹಾರ ನಡೆಸಿ ರೂ.7.18 ಲಕ್ಷ ನಿವ್ವಳ ಲಾಭಗಳಿಸಿದೆ. ಶೇ.99.74 ಸಾಲ ವಸೂಲಾತಿಯಾಗಿದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು ಸತತ 14 ವರ್ಷಗಳಿಂದ ಎ ಶ್ರೇಣಿ ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡ ಅವರು ಸಂಘದ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಬೆಳಿಯೂರುಕಟ್ಟೆಯಲ್ಲಿರುವ ಸಂಘದ ಕೇಂದ್ರ ಕಚೇರಿ ಕಟ್ಟಡದ ಸಭಾಂಗಣದಲ್ಲಿ ನಡೆಯಿತು. ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷರು, ಸಂಘವು ವರ್ಷಾಂತ್ಯದಲ್ಲಿ ಒಟ್ಟು 2170 ಸದಸ್ಯರಿಂದ ರೂ. 2,37,07,230 ಪಾಲು ಬಂಡವಾಳ ಹೊಂದಿದೆ. ರೂ.8,98,03,904.53 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ಡಿಸಿಸಿ ಬ್ಯಾಂಕ್‌ನಿಂದ 17,50,97,110 ಸಾಲ ಪಡೆದುಕೊಂಡಿದೆ. ವರದಿ ವರ್ಷದಲ್ಲಿ ಸಂಘವು ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.20,49,53,694 ಸಾಲ ವಿತರಿಸಿದ್ದು ರೂ.6,75,975 ಸಾಲ ಸುಸ್ತಿಯಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.74 ಸಾಧನೆ ಮಾಡಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘವು ಗಳಿಸಿದ ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ. ಕಳೆದ ಬಾರಿ ಸಂಘದ ಕೇಂದ್ರ ಕಚೇರಿಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು ಅದರ ಖರ್ಚು ವೆಚ್ಚಗಳಿಂದಾಗಿ ಲಾಭಾಂಶ ಗಳಿಕೆಯಲ್ಲಿ ಇಳಿಕೆಯಾಗಿದೆ. ಮುಂದಿನ ವರ್ಷದಿಂದ ಲಾಭಾಂಶ ಗಳಿಕೆಯಲ್ಲಿ ಏರಿಕೆಯಾಗಲಿದೆ ಎಂದರು.
ಸದಸ್ಯರಿಗೆ ಪ್ರಯೋಜನವಿಲ್ಲದ ಯಶಸ್ವಿನಿ ಕಡ್ಡಾಯಕ್ಕೆ ಸದಸ್ಯರಿಂದ ಆಕ್ಷೇಪ;
ಸರಕಾರದ ಯಶಸ್ವಿನಿ ವಿಮಾ ಯೋಜನೆಗೆ ಪುತ್ತೂರಿನ ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವುದಿಲ್ಲ. ಇದರಿಂದ ಸದಸ್ಯರಿಗೆ ಪ್ರಯೋಜನ ಇಲ್ಲ. ಹೀಗಾಗಿ ಸಹಕಾರ ಸಂಘಗಳ ಸದಸ್ಯರಿಗೆ ಕನಿಷ್ಠ ರೂ.1ಲಕ್ಷದ ತನಕದ ಪರಿಹಾರ ದೊರೆಯುವ ಇತರ ಯಾವುದೇ ವಿಮಾ ಸೌಲಭ್ಯವನ್ನು ಸಂಘದ ಮುಖಾಂತರ ಮಾಡಬೇಕು. ಈ ವಿಮಾ ಮೊತ್ತದಲ್ಲಿ 50:50ರ ಅನುಪಾತದಲ್ಲಿ ಸಂಘ ವಿಮಾ ಸೌಲಭ್ಯವನ್ನು ನೀಡುವಂಯೆ ಸದಸ್ಯ ಮುರಳಿಕೃಷ್ನ ಹಸಂತಡ್ಕ ಮನವಿ ಮಾಡಿದರು. ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಯಶಸ್ವಿನಿ ಕಡ್ಡಾಯಗೊಳಿಸಿರುವ ಬಗ್ಗೆ ಸುತ್ತೋಲೆ ಬಂದಿದೆಯಾ ಎಂದು ಪ್ರಶ್ನಿಸಿದಾಗ ಸುತ್ತೋಲೆ ಬಂದಿರುವುದಾಗಿ ಆಡಳಿತ ಮಂಡಳಿಯವರು ತಿಳಿಸಿದರು. ಯಶಸ್ವಿನಿ ಯೋಜನೆಗೆ ಸದಸ್ಯರು ವಿಮಾ ಮೊತ್ತ ಪಾವತಿಸುದರಿಂದ ಸದಸ್ಯರಿಗೆ ಒಂದು ರೂಪಾಯಿ ಪ್ರಯೋಜನವಿಲ್ಲ. ಪಾವತಿಸುವ ಹಣಗಳು ವಿಮಾ ಕಂಪನಿಗಳಿಗೆ ಲಾಭ ಮಾತ್ರ. ಹೀಗಾಗಿ ಸದಸ್ಯರಿಗೆ ಯಶಸ್ವಿನಿ ವಿಮೆಯನ್ನು ಕಡ್ಡಾಯಗೊಳಿಸಬಾರದು. ಸದಸ್ಯರಿಗೆ ಕಡ್ಡಾಯಗೊಳಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಚನಿಲ ತಿಮ್ಮಪ್ಪ ಶೆಟ್ಟಿ ಮತ್ತಿತರ ಸದಸ್ಯರು ತಿಳಿಸಿದರು. ಸಹಕಾರಿ ಸಂಘದ ಸದಸ್ಯರು ಹಾಗೂ ಅವರ ಕುಟುಂಬಕ್ಕೆ ಅನುಕೂಲವಾಗುವಂತಹ ಇತರ ಆರೋಗ್ಯ ವಿಮೆಯ ಆವಶ್ಯಕತೆಯಿದ್ದು ಅದನ್ನು ಜನರಿಗೆ ಪ್ರಯೋಜವಾಗುವ ರೀತಿಯಲ್ಲಿ ಅನುಷ್ಠಾನ ಮಾಡುವಂತೆ ಸದಸ್ಯರು ಮುರಳಿಕೃಷ್ಣ ಹಸಂತಡ್ಕ ಆಗ್ರಹಿಸಿದರು.
ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು:
ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಈ ವರ್ಷದ ಅಧಿಕ ಮಳೆಯಿಂದಾಗಿ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದರೆ. ಶೇ.75 ಅಡಿಕೆ ಬೆಳೆ ನಷ್ಟವಾಘಿದೆ. ಜೊತೆಗೆ ತೆಂಗು, ಕಾಳು ಮೆನಸು, ಕೊಕ್ಕೋಗಳಿಗೆ ಕೊಳೆ ರೀಗದ ಪರಿಣಾಮ ಬಾಧಿಸಿದೆ. ಇದರ ಬಗ್ಗೆ ಸರಕಾರ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಾಲ ಮನ್ನಾ ಮಾಡಿ:
ಈ ವರ್ಷದ ಅಧಿಕ ಮಳೆಯಿಂದಾಗಿ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದು ರೈತರ ಸಾಲ ಮನ್ನಾ ಮಾಡುವಂತೆ ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.
ಚಿನ್ನಾಭರಣ ಸಾಲದ ಮೊತ್ತ ಏರಿಕೆ ಮಾಡಬೇಕು. ಸಾಲಗಾರ ಸದಸ್ಯರಿಗೆ ವಿಮೆ ಮಾಡಬೇಕು, ಸಂಘದ ವ್ಯವಹಾರ ವೃದ್ಧಿಸುವ ನಿಟ್ಟಿನಲ್ಲಿ ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡಬೇಕು. ಉಜ್ರುಪಾದೆ ಶಾಖೆಯಲ್ಲಿ ಸಂಪೂರ್ಣ ಬ್ಯಾಂಕಿಂಗ್ ಸೇವೆ ಪ್ರಾರಂಭಿಸಬೇಕು. ಪಿಗ್ಮಿ ಸಂಗ್ರಹ ಪ್ರಾರಂಭಿಸಬೇಕು, ರಾಸಾಯನಿಕ ಗೊಬ್ಬರ, ಕೃಷಿ ಸಲಕರಣೆಗಳ ಮಾರಾಟ ಪ್ರಾರಂಭಿಸಬೇಕು ನೀಡಬೇಕು, ಗೃಹ ನಿರ್ಮಾಣ ಸಾಲ ನೀಡುವಂತೆ ಸದಸ್ಯರು ಸಲಹೆ ನೀಡಿದರು. ಸಂಘದ ಆಡಳಿತ ಮಂಡಳಿಯು ವಿಶೇಷ ಸಭೆ ನಡೆಸಿ ಇವುಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿರ್ದೇಶಕ ಪ್ರಕಾಶ್ಚಂದ್ರ ಆಳ್ವ ಎ.ಎಂ ತಿಳಿಸಿದರು.
ಸದಸ್ಯರಾದ ರಾಮಚಂದ್ರ ರೈ, ಜಯರಾಮ ಶೆಟ್ಟಿ, ಬಾಲಕೃಷ್ಣ ರೈ ಕೆಳಗಿನಮನೆ, ಸೀತಾರಾಮ ಗೌಡ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಉಪಾಧ್ಯಕ್ಷ ಅಂಬ್ರೋಸ್ ಡಿ ಸೋಜ, ನಿರ್ದೇಶಕರಾದ ಪ್ರವೀಣಚಂದ್ರ ಆಳ್ವ ಎ.ಎಂ., ನವೀನ್ ಕರ್ಕೇರಾ, ಸುರೇಶ್ ಎನ್, ನಾರಾಯಣ ಬಿ., ದಿನೇಶ, ಸುಜಾತ ರಂಜನ್ ರೈ, ಪ್ರಮೀಳಾ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರತಿನಿಧಿ ವಸಂತ ಎಸ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶುಭ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಸತೀಶ್ ಗೌಡ ಸ್ವಾಗತಿಸಿದರು. ಸಿಬಂದಿ ಕೀರ್ತನ್ ಶೆಟ್ಟಿ ಡಿ. ವಾರ್ಷಿಕ ವರದಿ, ಆಯ-ವ್ಯಯಗಳನ್ನು ಮಂಡಿಸಿದರು. ನಿರ್ದೇಶಕ ಕೆ.ಚಂದಪ್ಪ ಪೂಜಾರಿ ವಂದಿಸಿದರು. ಸದಸ್ಯ ನಾಗೇಶ್ ನಾಯ್ಕ ಪ್ರಾರ್ಥಿಸಿದರು. ಸಿಬ್ಬಂದಿಗಳಾದ ಪುಷ್ಪಾ ಎಂ., ಬಿಂದಿಯಾ ಹಾಗೂ ವಿನೋದ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನಡೆಯಿತು.