ರೂ.15,25,686.94 ಲಾಭ, ಶೇ.16 ಡಿವಿಡೆಂಡ್
ಪುತ್ತೂರು: ದರ್ಬೆಯಲ್ಲಿ ವ್ಯವಹರಿಸುತ್ತಿರುವ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘ(ಸಿಡ್ಕೋ)ದ 2024-25ನೇ ಸಾಲಿನ 38ನೇ ವರ್ಷದ ಸರ್ವಸದಸ್ಯರ ಮಹಾಸಭೆ ಸೆ.12ರಂದು ಸಂಘದ ಕಛೇರಿಯ ಎ.ಪಿ.ರೈ ಸ್ಮಾರಕ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಟಿ.ವಿ.ರವೀಂದ್ರನ್ 2024-25ನೇ ಸಾಲಿನ ಕಾರ್ಯಕಲಾಪಗಳ ವರದಿ ವಾಚಿಸಿ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಕೈಗಾರಿಕೋದ್ಯಮಿಗಳು ಒಟ್ಟು ಸೇರಿ ಪುತ್ತೂರು ಕೈಗಾರಿಕಾ ಸಂಘದ ಮೂಲಕ ಸ್ಥಾಪಿಸಲ್ಪಟ್ಟ ಈ ಸಂಘವು 1988ರಿಂದ ಕಾರ್ಯಾರಂಭ ಮಾಡಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕುಗಳ ಕಾರ್ಯಕ್ಷೇತ್ರ ಹೊಂದಿದೆ. ಸಂಘದ ಸದಸ್ಯರಿಗೆ, ಕೈಗಾರಿಕೋದ್ಯಮಿಗಳಿಗೆ, ಸಣ್ಣ ಕೈಗಾರಿಕೆ ಸ್ಥಾಪಿಸಲು, ನಡೆಸಲು ಅಭಿವೃದ್ಧಿ ಪಡಿಸಲು ಆರ್ಥಿಕ ಸಹಾಯ ಒದಗಿಸಲಾಗುತ್ತದೆ ಎಂದರು.
ಸಂಘವು ವರ್ಷಾಂತ್ಯಕ್ಕೆ 488 “ಎ” ತರಗತಿ ಸದಸ್ಯರು ಇದ್ದು ಸದಸ್ಯರ ಹಾಗೂ ಸರಕಾರದ ಒಟ್ಟು ರೂ.38,73,084 ಪಾಲು ಬಂಡವಾಳವಿರುತ್ತದೆ. ವರ್ಷಾಂತ್ಯಕ್ಕೆ ಸಂಘವು ರೂ 6,46,21,093.36 ಠೇವಣಿ ಹೊಂದಿದೆ. ಒಟ್ಟು ರೂ. 2,58,73,552 ವಿವಿಧ ಬ್ಯಾಂಕುಗಳಲ್ಲಿ ವಿನಿಯೋಗಿಸಿದೆ. ಸಂಘದಿಂದ ವಿವಿಧ ರೀತಿಯ ಸಾಲ ನೀಡಲಾಗಿದ್ದು ವರ್ಷದ ಕೊನೆಗೆ ರೂ.5,22,28,340 ಹೊರ ಬಾಕಿ ಸಾಲ ಇದ್ದು ಶೇ. 98.16 ಸಾಲ ವಸೂಲಾತಿಯಾಗಿ 2024-25ನೇ ಸಾಲಿನ ಲೆಕ್ಕಪರಿಶೋಧನೆ ಪ್ರಕಾರ ರೂ. 15,25,686.94 ಲಾಭಾಂಶ ಬಂದಿರುತ್ತದೆ ಎಂದು ಹೇಳಿ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಈಶ್ವರ ಭಟ್ ಎಂ. ನೋಟೀಸು ಓದಿ ದಾಖಲಿಸಿದರು. 2024-25ನೇ ಸಾಲಿನ ಮಹಾಸಭೆಯ ವರದಿ ಮಂಡನೆ ಮಾಡಿದರು. 2024-25ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಹಾಗೂ ಅನುಪಾಲನಾ ವರದಿಯನ್ನು ಮಂಡನೆ ಮಾಡಿದರು. 2025-26ನೇ ಸಾಲಿನ ಅಂದಾಜು ಆಯವ್ಯಯ ಹಾಗೂ ಕಾರ್ಯಯೋಜನೆಗಳನ್ನು ತಿಳಿಸಿದರು. 2024-25ನೇ ಸಾಲಿನ ಲಾಭಾಂಶ ವಿಂಗಡನೆ ಮಾಡಿ ಸದಸ್ಯರಿಗೆ ಶೇ.16 ಡಿವಿಡೆಂಡು ನೀಡುವುದಾಗಿ ತಿಳಿಸಿದರು.
ಸಲಹೆ ಸೂಚನೆ:
ಸಂಘದ ಸದಸ್ಯರು ವಿವಿಧ ಸಲಹೆ ಸೂಚನೆ ನೀಡಿದರು. ಸದಸ್ಯರಾದ ರವೀಂದ್ರರವರು ಕೆಂಪು ಕಲ್ಲು ಹಾಗೂ ಹೊಯಿಗೆಯ ಅಭಾವದಿಂದ ಮನೆ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಬರೆಯುವಂತೆ ತಿಳಿಸಿದರು. ಸದಸ್ಯ ಉದಯ ಕುಮಾರ್ರವರು ಸಂಘದಿಂದ ಆಭರಣ ಸಾಲ ನೀಡುವುದನ್ನು ಹೆಚ್ಚಿಸಬೇಕು. ಹೊಸ ಕೈಗಾರಿಕೆ ಆರಂಭಿಸುವವರಿಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಬೇಕು ಎಂದರು. ನಿರ್ದೇಶಕರಾದ ಗಿರೀಶ್ ಭಾರದ್ವಾಜ್ರವರು ಸಂಘದ ಕಛೇರಿಯ ಮೆಟ್ಟಿಲು ಹತ್ತಲು ಕಷ್ಟವಾಗುತ್ತಿದ್ದು ಮೆಟ್ಟಿಲು ಸರಿಪಡಿಸುವಂತೆ ವಿನಂತಿಸಿದರು. ಪುತ್ತೂರು ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ ಭಟ್ ಹೊಸ ಆಡಳಿತ ಮಂಡಳಿಗೆ ಅಭಿನಂದಿಸಿದರು. ಅಧ್ಯಕ್ಷ ಟಿ.ವಿ.ರವೀಂದ್ರನ್ ಮಾತನಾಡಿ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಸುದ್ದಿ ಅರಿವು ಕೃಷಿ ಕೇಂದ್ರದ ಭರತ್ ಶಾಂತಿನಗರ ಸೆ.20ರಂದು ಮಂಗಳೂರಿನಲ್ಲಿ ನಡೆಯುವ ಎಂಎಸ್ಎಂಇನ ಸಣ್ಣ ಪ್ರಮಾಣದ ಉದ್ಯಮದಾರರ ಕಾರ್ಯಕ್ರಮದ ಮಾಹಿತಿ ನೀಡಿದರು. ವಿಶ್ವಪ್ರಸಾದ್ ಸೇಡಿಯಾಪುರವರು ಎಂಎಸ್ಎಂಇ ಬಗ್ಗೆ ವಿವರ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು. ಇತ್ತೀಚೆಗೆ ನಿಧನರಾದ ಸಂಘದ ಮಾಜಿ ನಿರ್ದೇಶಕ ಪ್ರೇಮಾನಂದ ಡಿ. ಹಾಗೂ ಸಂಘದ ಸದಸ್ಯ ಶೀನ ನಾಯ್ಕರವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಉಪಾಧ್ಯಕ್ಷ ಪ್ರಸನ್ನ ಕುಮಾರ್ ರೈ, ನಿರ್ದೇಶಕರಾದ ಪದ್ಮಶ್ರೀ ಡಾ|ಗಿರೀಶ್ ಭಾರದ್ವಾಜ್, ರವಿರಾಜ ಭಟ್, ಮೀನಾಕ್ಷಿ ಮಂಜುನಾಥ್, ಮೋಹನ್ ಕುಮಾರ್ ಬೊಳ್ಳಾಡಿ, ಪಿ.ಎಸ್.ಕೃಷ್ಣಮೋಹನ, ಸುಧೀರ್ ಶೆಟ್ಟಿ ಪಿ., ಕೇಶವ ಬಿ., ಮಹಾಲಕ್ಷ್ಮಿ, ಸುರೇಖಾ ಡಿ. ಶೆಟ್ಟಿ, ರಾಜೇಶ್ ಕೃಷ್ಣಪ್ರಸಾದ್ ಬಿ.ಎಸ್., ಡೆನ್ನಿಸ್ ಮಸ್ಕರೇನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಮೀನಾಕ್ಷಿ ಮಂಜುನಾಥ್ ಪ್ರಾರ್ಥಿಸಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ರೈ ಸ್ವಾಗತಿಸಿದರು. ನಿರ್ದೇಶಕ ರಾಜೇಶ್ ಕೃಷ್ಣಪ್ರಸಾದ್ ವಂದಿಸಿ ಸಂಘದ ಲೆಕ್ಕಿಗ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ ಭಟ್ ಸೇರಿದಂತೆ ಸಂಘದ ಸದಸ್ಯರು, ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.
ನಿಧನರಾದ ಸದಸ್ಯ ಶೀನ ನಾಯ್ಕರವರಿಗೆ ಸಹಾಯಧನ ವಿತರಣೆ
ಇತ್ತೀಚೆಗೆ ನಿಧನರಾದ ಸಂಘದ ಸದಸ್ಯ ಶೀನನಾಯ್ಕರವರಿಗೆ ಸಂಘದ ವತಿಯಿಂದ ರೂ.15 ಸಾವಿರ ಸಹಾಯಧನ ನೀಡಲಾಯಿತು. ಸಂಘದ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ನಿರ್ದೇಶಕರಾದ ಸುಧೀರ್ ಶೆಟ್ಟಿ, ಡೆನ್ನಿಸ್ ಮಸ್ಕರೇನಸ್ ಹಾಗೂ ಕಾರ್ಯದರ್ಶಿ ಈಶ್ವರ ಭಟ್ರವರು ಶೀನ ನಾಯ್ಕರವರ ಮನೆಯವರಿಗೆ ನೀಡಿದರು.
