ಪುತ್ತೂರು: ರಾಷ್ಟ್ರಕವಿ ಕುವೆಂಪು ಅವರು ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಘನತೆ ಗೌರವವನ್ನು ತರುವ ಸಾಹಿತ್ಯವನ್ನು ಸೃಷ್ಟಿ ಮಾಡಿದರು. ಸರ್ವರಿಗೆ ಸಮಬಾಳು, ಸಮಪಾಲು ಎಂಬುದು ಅವರ ಮುಖ್ಯ ತತ್ವವಾಗಿತ್ತು. ಈ ನೆಲೆಯಲ್ಲಿ ಅವರು ಸರ್ವೋದಯ ಸಮನ್ವಯ ಪೂರ್ಣದೃಷ್ಟಿ ಎಂಬ ತತ್ವಗಳನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದವರು. ಅವರ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಯಬೇಕೆಂದು ನಿವೃತ್ತ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿರವರು ಹೇಳಿದರು.
ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುತ್ತೂರಿನ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಹಾಗೂ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನʼ ವಿಶೇಷೋಪನ್ಯಾಸದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕುವೆಂಪು ಅವರ ಜೀವನ ತತ್ವಗಳ ಕುರಿತು ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ಯಕ್ರಮ ಸಂಯೋಜಕ, ಶ್ರೀ ಧ.ಮಂ.ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆರವರು, ಮತ ಮತ್ತು ಮತೀಯ ರಾಜಕಾರಣವನ್ನು ಕುವೆಂಪು ಅವರು ತಿರಸ್ಕರಿಸಿದ್ದರು. ಅದರ ಅಪಾಯಗಳನ್ನು ಅರಿತಿದ್ದರು. ಮತ ಮತ್ತು ಮತೀಯ ರಾಜಕಾರಣದಿಂದ ಜನರು ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಮತ ಮತ್ತು ಮತೀಯ ರಾಜಕಾರಣದಿಂದ ಯುವ ಸಮೂಹ ಹೊರಬರಬೇಕು ಎಂದು ಹೇಳಿದರು .
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬರವರು, ಕುವೆಂಪು ಸಾಹಿತ್ಯದ ಓದಿನಿಂದ ಪ್ರತಿಯೊಬ್ಬರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಯುತ್ತದೆ ಹೇಳಿದರು.
ವಾಣಿಜ್ಯಶಾಸ್ತ್ರ ಉಪನ್ಯಾಸಕ ಪುಷ್ಪರಾಜ ಕೆ. ಸ್ವಾಗತಿಸಿ, ಕನ್ನಡ ಉಪನ್ಯಾಸಕ ಡಾ. ಹರಿಣಾಕ್ಷಿ ವಂದಿಸಿದರು. ಕುಮಾರಿ ಸೌಜನ್ಯ ಪ್ರಾರ್ಥಿಸಿದರು. ಕು.ವೈಷ್ಣವಿ ಅತಿಥಿಗಳ ಪರಿಚಯ ಮಾಡಿದರು. ಕುಮಾರಿ ಆಯಿಷತುಲ್ ಮಿಶ್ರಿಯ ಕಾರ್ಯಕ್ರಮ ನಿರೂಪಿಸಿದರು.