ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ಸಮೀಪ ಗ್ರಾ.ಪಂನಿಂದ ಕಾಯ್ದಿರಿಸಿದ್ದ ರುದ್ರ ಭೂಮಿ ವಿವಾದ ಕೊನೆಗೂ ಬಗೆಹರಿದಿದೆ. ಈ ಬಗ್ಗೆ ಸೆ.16ರಂದು ನಡೆದ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ ಮಾಹಿತಿ ನೀಡಿದ್ದು ರುದ್ರ ಭೂಮಿ ವಿವಾದ ಕೊನೆಗೊಂಡಿದೆ. ಈ ಮೊದಲು ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಬಂದಿತ್ತು, ಪ್ರಸ್ತುತ ರುದ್ರಭೂಮಿಯನ್ನು ಬಳಕೆ ಮಾಡುವ ವಿಚಾರವಾಗಿ ನ್ಯಾಯಾಲಯದಿಂದ ಆರ್ಡರ್ ಬಂದಿದೆ ಎಂದು ತಿಳಿಸಿದರು. ಪಿಡಿಓ ಮನ್ಮಥ ಅಜಿರಂಗಳ ಮಾತನಾಡಿ ರುದ್ರಭೂಮಿಯನ್ನು ಅಗತ್ಯ ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು. ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ಅಲ್ಲಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. ರುದ್ರಭೂಮಿ ವಿಚಾರವಾಗಿ ಮಹಮ್ಮದ್ ಆಲಿ, ಕರುಣಾಕರ ಗೌಡ ಎಲಿಯ, ದುಗ್ಗಪ್ಪ ಕಡ್ಯ, ಬಾಬು ಕಲ್ಲಗುಡ್ಡೆ ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಡಬ ಮೂಲದವರ ಅರ್ಜಿಗೆ ಆಕ್ಷೇಪ:
ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಕಡಬದಿಂದ ಅರ್ಜಿಯೊಂದು ಬಂದ ಬಗ್ಗೆ ಪ್ರಸ್ತಾಪಗೊಂಡಿತು. ಸದಸ್ಯ ಕರುಣಾಕರ ಗೌಡ ಎಲಿಯ ಮಾತನಾಡಿ ಇಲ್ಲಿನವರಿಗೇ ಕೊಡಲು ಸರಿಯಾದ ನಿವೇಶನ ಇಲ್ಲದಿರುವಾಗ ಕಡಬದವರಿಗೆ ಇಲ್ಲಿ ನೀಡುವುದು ಸರಿಯಾ ಎಂದು ಪ್ರಶ್ನಿಸಿದರು.
ಕಮಲೇಶ್ ಎಸ್.ವಿ ಮಾತನಾಡಿ ಕೆಲವು ಗ್ರಾ.ಪಂ ವ್ಯಾಪ್ತಿಯಲ್ಲಿ ಈಗಾಗಲೇ 5-10 ಎಕ್ರೆ ಸ್ಥಳ ಕಾಯ್ದಿರಿಸುವ ಪ್ರಕ್ರಿಯೆ ಆಗಿದ್ದು ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳ ಇಲ್ಲದ ಕಾರಣಕ್ಕೆ ಬೇರೆ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಅಲ್ಲಿನ ಪಂಚಾಯತ್ಗೆ ಅರ್ಜಿ ಕೊಡಬಹುದು, ಇದು ಶಾಸಕರ ಬಡವರ ಪರವಾದ ಕಾಳಜಿಯಾಗಿದೆ, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಕರುಣಾಕರ ಗೌಡ ಮಾತನಾಡಿ ಕೆಲವರಿಗೆ ಜಾಗವಿದ್ದು ಅಲ್ಲಿ ಅವರಿಗೆ ಪಾಲು ಸಿಗುತ್ತದೆ, ಅದಕ್ಕಿಂತ ಮೊದಲೇ ಬೇರೊಂದು ಪಂಚಾಯತ್ನಲ್ಲಿ ಅರ್ಜಿ ಕೊಡುವವರಿದ್ದಾರೆ, ಈ ಬಗ್ಗೆ ಪರಿಶೀಲನೆ ಆಗಬೇಕು ಎಂದರು.
ಕಮಲೇಶ್ ಎಸ್.ವಿ ಮಾತನಾಡಿ ಜಾಗ ಇದ್ದವರು ನಿವೇಶನಕ್ಕೆ ಅರ್ಜಿ ಕೊಡುವುದಿಲ್ಲ, ಅಕ್ರಮ ಸಕ್ರಮದಲ್ಲಿ ಅನೇಕರು ಎಕರೆಗಟ್ಟಲೆ ಜಾಗ ಮಾಡಿಸಿಕೊಳ್ಳುತ್ತಾರೆ, ಜಾಗ ಇಲ್ಲದೇ ಕಷ್ಟಪಡುವ ಬಾಡಿಗೆ ಮನೆಯಲ್ಲಿರುವ ಬಡ ಕುಟುಂಬದವರು 3.75 ಸೆಂಟ್ಸ್ ಜಾಗಕ್ಕೆ ಅರ್ಜಿ ಕೊಟ್ಟರೆ ಅದನ್ನು ನಾವು ಕೇವಲವಾಗಿ ನೋಡುವುದು ಸರಿಯಲ್ಲ, ಅವರ ಕಷ್ಟ ಅರಿತು ಸ್ಪಂದಿಸುವ ಕಾರ್ಯ ಆಗಬೇಕು ಎಂದರು.
ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ ಮಾತನಾಡಿ ಇಲ್ಲಿ ಕಡಬದವರು ಮಾತ್ರವಲ್ಲ ಪುತ್ತೂರಿನವರೂ ನಿವೇಶನಕ್ಕೆ ಅರ್ಜಿ ಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಅದನ್ನು ಪರಿಶೀಲಿಸುವ ಪ್ರಕ್ರಿಯೆ ಆಗಲಿದೆ ಎಂದು ತಿಳಿಸಿದರು.
ದಂಡ್ಯನಕುಕ್ಕುವಿನಲ್ಲಿ ಕಸದ ಸಮಸ್ಯೆ:
ಬಾಬು ಕಲ್ಲಗುಡ್ಡೆ ಮಾತನಾಡಿ ದಂಡ್ಯನಕುಕ್ಕು ಎಂಬಲ್ಲಿ ಸಾರ್ವಜನಿಕರು ಕಸ ತ್ಯಾಜ್ಯಗಳನ್ನು ಬಿಸಾಡುವುದರಿಂದ ಸಮಸ್ಯೆ ಆಗಿದ್ದು ಈ ಬಗ್ಗೆ ಏನಾದರೂ ಕ್ರಮ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಸಿಬ್ಬಂದಿಗಳ ಖರ್ಚುವೆಚ್ಚ ಭರಿಸಲು ಆಗ್ರಹ:
ಸಿಬ್ಬಂದಿಗಳು ಫೀಲ್ಡ್ಗೆ ಹೋದ ಸಂದರ್ಭದಲ್ಲಿ ಅವರ ಖರ್ಚುವೆಚ್ಚವನ್ನು ಭರಿಸುವ ಕೆಲಸ ಪಂಚಾಯತ್ನಿಂದ ಆಗಬೇಕು ಎಂದು ಕಮಲೇಶ್ ಎಸ್.ವಿ ಹೇಳಿದರು. ಮುಖ್ಯವಾಗಿ ಕುಡಿಯುವ ನೀರಿನ ನಿರ್ವಹಣೆ ಮಾಡುವ ಪಂಪು ಚಾಲಕ ಗ್ರಾಮದ ವಿವಿಧ ಕಡೆಗಳಿಗೆ ಹೋಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಾಕಷ್ಟು ಖರ್ಚುವೆಚ್ಚಗಳು ತಗಲುತ್ತಿದ್ದು ಅದನ್ನು ಭರಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.
ಬೀದಿ ನಾಯಿಗಳ ಹಾವಳಿ:
ಸದಸ್ಯ ಉಮೇಶ್ ಅಂಬಟ ಮಾತನಾಡಿ ಮುಂಡೂರು ಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಮಕ್ಕಳು ಶಾಲೆಗೆ ಹೋಗಲು ಹೆದರುವ ಸನ್ನಿವೇಶ ಉಂಟಾಗಿದೆ, ಇತ್ತೀಚೆಗೆ ಬೀದಿ ನಾಯಿಯೊಂದು ವಿದ್ಯಾರ್ಥಿನಿ ಮೇಲೆ ದಾಳಿ ಮಾಡಿದೆ, ಬೀದಿ ನಾಯಿಗಳನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡುವ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಎಸ್.ಐ.ಟಿ ತಂಡಕ್ಕೆ..!
ಮುಂಡೂರು ಗ್ರಾ.ಪಂ ಕಾರ್ಯದರ್ಶಿ ಸೂರಪ್ಪ ಅವರು ಧರ್ಮಸ್ಥಳದಲ್ಲಿ ಎಸ್ಐಟಿ ತಂಡದಲ್ಲಿ ಮಹಜರು ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವಿಚಾರ ಪ್ರಸ್ತಾಪಗೊಂಡಿತು. ಮಹಮ್ಮದ್ ಆಲಿ ಮಾತನಾಡಿ ಕಾರ್ಯದರ್ಶಿ ಎಸ್ಐಟಿ ಜೊತೆ ಇರುವುದರಿಂದ ಇಲ್ಲಿ ಸಮಸ್ಯೆ ಆಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಪಿಡಿಓ ಮನ್ಮಥ ಅಜಿರಂಗಳ ಉತ್ತರಿಸಿ ಅದು ಇಲಾಖೆಯಿಂದ ಆಗಿರುವ ತೀರ್ಮಾನವಾಗಿದ್ದು ನಮ್ಮ ತಾಲೂಕಿನಿಂದ ಇಬ್ಬರನ್ನು ಎಸ್ಐಟಿ ಜೊತೆ ಕರ್ತವ್ಯಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಹೇಳಿದರು.
ಉಪಾಧ್ಯಕ್ಷೆ ಯಶೊಧ, ಸದಸ್ಯರಾದ ಪುಷ್ಪಾ ಎನ್, ಪ್ರೇಮಾ, ಅರುಣಾ ಎ.ಕೆ, ಕಾವ್ಯ ಕಡ್ಯ, ರಸಿಕಾ ರೈ ಮೇಗಿನಗುತ್ತು, ಕಮಲಾ, ಸುನಂದ ಬೊಳ್ಳಗುಡ್ಡೆ, ವಿಜಯ ಕರ್ಮಿನಡ್ಕ ಉಪಸ್ಥಿತರಿದ್ದರು. ಪಿಡಿಓ ಮನ್ಮಥ ಅಜಿರಂಗಳ ಸ್ವಾಗತಿಸಿ ಸಭೆ ನಿರ್ವಹಿಸಿದರು. ಸಿಬ್ಬಂದಿಗಳಾದ ಶಶಿಧರ ಕೆ ಮಾವಿನಕಟ್ಟೆ, ಸತೀಶ, ಚಂದ್ರಶೇಖರ, ಕವಿತಾ, ಮೋಕ್ಷಾ, ಶ್ರದ್ಧಾ ಸಹಕರಿಸಿದರು.