ಉಪ್ಪಿನಂಗಡಿ: ಮೋಕ್ಷದಾಯಕ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ತಾಣವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಮಹಾಲಯ ಅಮವಾಸ್ಯೆಯ ಆದಿತ್ಯವಾರದಂದು ಅಸಂಖ್ಯಾತ ಭಕ್ತರು ಆಗಮಿಸಿ ಗತಿಸಿದ ತಮ್ಮ ಪಿತೃಗಳಿಗೆ ಪಿಂಡ ಪ್ರದಾನಾದಿ ತಿಲಹೋಮ ತರ್ಪಣ ಕಾರ್ಯಗಳನ್ನು ನಡೆಸಿದರು.

ಭಾರೀ ಸಂಖ್ಯೆಯಲ್ಲಿ ರಾಜ್ಯದೆಲ್ಲೆಡೆಯಿಂದ ಮಾತ್ರವಲ್ಲದೆ ದೂರದ ಒರಿಸ್ಸಾ, ಮುಂಬೈ ಪ್ರದೇಶದಿಂದಲೂ ಭಕ್ತರು ಆಗಮಿಸಿ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ತೀರ್ಥಸ್ನಾನವನ್ನು ಮಾಡಿ ತಮ್ಮ ಗತಿಸಿದ ಹಿರಿಯರಿಗೆ ಪಿಂಡ ಪ್ರಧಾನ, ತಿಲ ಹೋಮ, ತರ್ಪಣಗಳನ್ನು ನೆರವೇರಿಸಿದರು.
ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಭಕ್ತರ ಅನುಕೂಲತೆಗಾಗಿ ಹೆಚ್ಚುವರಿ ವಿಭಾಗಗಳನ್ನು ತೆರೆದು ಅಗತ್ಯಕ್ಕೆ ತಕ್ಕುದಾದ ಪುರೋಹಿತರನ್ನು ನಿಯುಕ್ತಿಗೊಳಿಸಿ ಸುಲಲಿತವಾಗಿ ವಿಧಿವಿಧಾನಗಳನ್ನು ನಡೆಸುವಂತಾಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರ ಹೊರತಾಗಿ ಅನೇಕ ಭಕ್ತರು ಸ್ವಯಂಪ್ರೇರಿತ ತರ್ಪಣಾದಿ ಕಾರ್ಯಗಳನ್ನು ಸಂಗಮ ಸ್ಥಳದಲ್ಲಿ ನಡೆಸಿ ಶ್ರೀ ದೇವರ ದರ್ಶನಗೈದರು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್, ಸದಸ್ಯರುಗಳಾದ ಸೋಮನಾಥ , ವೆಂಕಪ್ಪ ಪೂಜಾರಿ, ಅರ್ತಿಲ ಕೃಷ್ಣ ರಾವ್, ಡಾ. ರಮ್ಯ ರಾಜಾರಾಮ್, ಅನಿತಾ ಕೇಶವ ಗೌಡ , ಗೋಪಾಲಕೃಷ್ಣ ರೈ ಬೆಳ್ಳಿಪ್ಪಾಡಿ, ದೇವಿದಾಸ್ ರೈ ಅಡೆಕ್ಕಲ್, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಪದ್ಮನಾಭ, ದಿವಾಕರ, ಸುಧಾಕರ ಶೆಟ್ಟಿ ಉಪಸ್ಥಿತರಿದ್ದು, ಭಕ್ತಾದಿಗಳಿಗೆ ಅನುಕೂಲತೆಗಳನ್ನು ಕಲ್ಪಿಸುವಲ್ಲಿ ನೆರವಾದರು. ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯು ನೆರವೇರಿತು.