





ಪುತ್ತೂರು: ಶರನ್ನವರಾತ್ರಿಯ ವಿಶೇಷ ಮಹತ್ವ ಶಕ್ತಿಯ ಉಪಾಸನೆ. ಪ್ರಥಮವಾಗಿ ಮಹಾಕಾಳಿ, ಮಧ್ಯದಲ್ಲಿ ಮಹಾಲಕ್ಷ್ಮಿಯನ್ನು ಕೊನೆಯಲ್ಲಿ ಮಹಾಸರಸ್ವತಿಯನ್ನು ಸ್ತುತಿ ಮಾಡುತ್ತೇವೆ. ಈ ಮೂರು ಭಾಗದ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿ ನಮ್ಮೊಳಗೆ ಇದೆ ಅದನ್ನು ಜಾಗೃತಿಗೊಳಿಸವ ಶಕ್ತಿ ಶಾರದಾ ಮಾತೆ ನೀಡಲಿ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ನುಡಿದರು.



ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲೇ ಇದ್ದು ಹಲವು ಇತಿಹಾಸಕ್ಕೆ ಕಾರಣವಾಗಿರುವ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 91ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವದ ಪ್ರಯುಕ್ತ ನವರಾತ್ರಿ ಪೂಜೆ ಮೊದಲನೇ ದಿನ ಸೆ.22ರಂದು ನಡೆದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.





ನಮ್ಮೊಳಗಿರುವ ಅಹಂ, ಮದ ಮುಂತಾದವುಗಳನ್ನು ದಮನವಾಗಬೇಕೆಂದು ಇಂತಹ ಒಂದು ಪುಣ್ಯ ಮಣ್ಣಿನಲ್ಲಿ, ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಾನದಲ್ಲಿ ಶ್ರೀ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಿ ಪ್ರಕೃತಿಯನ್ನೂ ಕೂಡ ಆರಾಧನೆ ಮಾಡುವಂತಹ ದಿವ್ಯದೃಷ್ಠಿಯಿಂದ ಶಾರದಾ ಮಂದಿರ ನಿರ್ಮಾಣ ಮಾಡಿದ್ದಾರೆ. ಈ ವರ್ಷ 10 ನವರಾತ್ರಿ ಬಂದಿದೆ, ಇಂತಹ ದಶನವರಾತ್ರಿ ಬರುವುದು ಬಲೂ ಅಪರೂಪ. ನವರಾತ್ರಿಯಲ್ಲಿ ಮಹತ್ವ ಇರುವ ವಿಶೇಷ ಗ್ರಂಥ ಅದು ಸಪ್ತಶತಿ. ಮಾರ್ಕಾಂಡೇಯ ಮಹಾಮುನಿಗಳು ರಚಿಸಿದ ದೊಡ್ಡ ಗ್ರಂಥ ಇದಾಗಿದೆ. ಶರನ್ನವರಾತ್ರಿಯಲ್ಲಿ ನಮ್ಮೊಳಗಿರುವ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿ ಜಾಗೃತಿಗೊಳಿಸಬೇಕು. ಶಾರದೆ ಜ್ಞಾನ, ಸಂಪತ್ತಿನ ಪ್ರತೀಕ. ಅಂಧಾಕಾರ ಅಳಿದು ಹೋಗಲಿ, ಜ್ಞಾನ ವೃದ್ಧಿಸಲಿ ಎಂದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯ ಮಹಾಬಲ ರೈ, ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಖಜಾಂಜಿ ನವೀನ್ ಕುಲಾಲ್, ಉಪಾಧ್ಯಕ್ಷ ದಯಾನಂದ ಆದರ್ಶ, ನಿವೃತ್ತ ಎ.ಎಸ್.ಐ. ರಘುರಾಮ ಹೆಗ್ಡೆ, ಸುದೇಶ್ ಚಿಕ್ಕಪುತ್ತೂರು, ನವನೀತ್ ಬಜಾಜ್, ಕಿರಣ್ ಉರ್ಲಾಂಡಿ, ಕೃಷ್ಣ ಮಚ್ಚಿಮಲೆ, ಯೋಗಾನಂದ ರಾವ್ ಉರ್ಲಾಂಡಿ, ಗಿರೀಶ್, ತಾರನಾಥ್, ವಸಂತ್, ಪುರುಷೋತ್ತಮ ಕೋಲ್ಪೆ, ಗೋಪಾಲ ಆಚಾರ್ಯ, ರಾಜೇಶ್ ರೈ ಸಂಪ್ಯ, ಮಂದಿರದ ಮಾತೃ ಮಂಡಳಿ ಸಮಿತಿ ಸದಸ್ಯರು ಉಪಸಿತರಿದ್ದರು.
ಸೆ.30ರಂದು ಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಸಾರ್ವಜನಿಕ ಚಂಡಿಕಾಹೋಮಕ್ಕೆ ಸಮರ್ಪಣೆಯಾಗಲಿರುವ ಚಿನ್ನವನ್ನು ಸ್ಮಿತಾ ಸುಜಿತ್ ಕುಮಾರ್ ಕೊಡಿಪಾಡಿ ದಂಪತಿಗಳು ಇದೇ ಸಂದರ್ಭದಲ್ಲಿ ಮಂದಿರಕ್ಕೆ ಹಸ್ತಾಂತರಿಸಿದರು.
ರಾತ್ರಿಯ ಕರೆಗೆ ಪ್ರೀತಿಯಿಂದ ಬಂದೆ:
91ನೇ ವರ್ಷದ ಶಾರದೋತ್ಸವಕ್ಕೆ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ನನ್ನನ್ನು ಆಹ್ವಾನಿಸಿದ್ದಾರೆ, ನಿನ್ನೆ ರಾತ್ರಿ ಕರೆ ಮಾಡಿದ್ದಾರೆ. ಅವರೊಳಗಿನ ಒಡನಾಟ ಪ್ರೀತಿಯಿಂದ ಬಂದಿದ್ದೇನೆ. ಸೀತಾರಾಮ ರೈ ಅವರು ಬಹಳ ಶೃದ್ಧೆಯಿಂದ ಕರ್ತವ್ಯ ಮಾಡುತ್ತಿದ್ದಾರೆ. ಶಾರದೆ ಇಡೀ ಜಗತ್ತನ್ನ ಕಾಪಾಡಲಿ ಎಂದು ಆಶೀರ್ವದಿಸಿದರು.









