ಸೇರಾಜೆ ಬೈಲಿನಲ್ಲಿ ಮಲತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ – ಸ್ಥಳಾಂತರಕ್ಕೆ ಮನವಿ

0

ವಿಟ್ಲ: ವಿಟ್ಲ ಕಸಬ ಗ್ರಾಮದ ಸೇರಾಜೆ ಎಂಬಲ್ಲಿ ಪಟ್ಟಣ ಫಂಚಾಯತ್ ನಿಂದ ನಿರ್ಮಿಸಲು ಉದ್ದೇಶಿಸಿರುವ ಮಲತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಸೇರಾಜೆ ರಸ್ತೆ, ಸೇರಾಜೆ ಬೈಲು ನಿವಾಸಿಗಳು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಮನವಿ ಮಾಡಿದರು.

ವಿಟ್ಲ ಕಸಬ ಗ್ರಾಮ ಮತ್ತು ವಿಟ್ಲ ಪಟ್ಟಣ ಪಂಚಾಯತ್‌ನ 10ನೇ ವಾರ್ಡ್‌ನ ಸೇರಾಜೆ ರಸ್ತೆಯ ಕೊನೆಯಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಸರ್ವೆ ನಂಬ್ರ 552-1 ರಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ನಿರ್ಧರಿಸಿದೆ. ಮಲ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಉದ್ದೇಶಿಸಿದ ಸ್ಥಳದ ಅಸುಪಾಸು ತುಂಬಾ ಮನೆಗಳಿದ್ದು, ತುಂಬಾ ಜನರು ವಾಸ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಪ್ರದೇಶದ ಕೃಷಿಗೂ ಹಾನಿಯಾಗುವ ಸಂಭವವಿದೆ. ಕೆರೆ, ಬಾವಿ, ಕೊಳವೆ ಬಾವಿಗಳಿಗೆ ಇದರ ಮಲಿನ ನೀರು ಸೇರುವ ಆತಂಕವಿದೆ. ಇಷ್ಟು ಮಾತ್ರವಲ್ಲದೆ ಮಲ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಉದ್ದೇಶಿಸಿದ ಸ್ಥಳಕ್ಕೆ ಹೋಗುವ ರಸ್ತೆಯು ತುಂಬಾ ಕಿರಿದಾದ ರಸ್ತೆಯಾಗಿದೆ. ಮಲತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಉದ್ದೇಶಿಸಿದ ಸರ್ವೆ ನಂಬ್ರ 552-1 ರಲ್ಲಿ ಕೆಲವರು (ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತ) ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಈ ಪ್ರದೇಶದಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ವಿರೂಧವಿದ್ದು, ಆ ಯೋಜನೆಯನ್ನು ಬೇರೆಕಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ‌‌ ವಿ.ರವರಿಗೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಕೆ ಕೇಶವ ಪ್ರಸಾದ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಪದ್ಮಿನಿ, ಸ್ಥಳೀಯ ನಿವಾಸಿಗಳಾದ ಪರಮೇಶ್ವರ ಗೌಡ, ಯೂಸುಪ್ ಮುಸ್ಲಿಯಾರ್, ಮಂಜುನಾಥ, ಗುರುಪ್ರಸಾದ್ ಕೂಡೂರು, ಸೋಮಪ್ಪ ನಾಯ್ಕ, ಹರೀಶ್ ನಾಯಕ್ ಸೇರಾಜೆ, ಕೊರಗಪ್ಪ ಗೌಡ, ವಿನ್ಸಿ ಲೋಬೊ, ರಾಧಾಕೃಷ್ಣ ಕೂಡೂರು, ಶಾಫಿ ಗಮಿ, ಗಣೇಶ್ ರೈ ಗಮಿ, ಶರೀಫ್ ಸೇರಾಜೆ,ಶೇಖ್ ಅಲಿ ಸೇರಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಲಾಗಿದೆ ಸಾಧಕ – ಭಾದಕದ ಕುರಿತು ಅರಿವು ಮೂಡಿಸಲಾಗುವುದು

ಮಲತ್ಯಾಜ್ಯ ವಿಲೇವಾರಿ ಘಟಕ ಸಾರ್ವಜನಿಕರ ಉಪಯೋಗಕ್ಕೆ ಮಾಡುವಂತಹ ವ್ಯವಸ್ಥೆಯಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಅದರ ವ್ಯವಸ್ಥೆ ಇಲ್ಲ. ಆದ್ದರಿಂದ ನಾವು ಈಗ ಪುತ್ತೂರು ಅಥವಾ ಬಂಟ್ವಾಳ ದವರನ್ನು ಅವಲಂಭಿಸಬೇಕಾದ ಪರಿಸ್ಥಿತಿ ಇದೆ. ಮುಂದಿ‌ನ‌ ದಿನಗಳಲ್ಲಿ ಅಲ್ಲಿಯವರು ಹೊರಗಡೆಯಿಂದ ತರುವುದನ್ನು ನಿಲ್ಲಿಸಿದರೆ ನಾವೇನು ಮಾಡುವುದು. ಈಗಾಗಲೇ ಆಯಾಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಲತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುವಂತೆ ಸರಕಾರ‌ ಆದೇಶ ಮಾಡಿದೆ.
ಈ ಹಿಂದೆ ಕೆಲವೊಂದು ಜಾಗಗಳನ್ನು ಗುರುತಿಸಲಾಗಿದ್ದು, ಅವುಗಳು ತಾಂತ್ರಿಕ ದೋಷಗಳಿಂದ ರದ್ದಾಗಿದ್ದು, ಇದೀಗ ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಈ ಯೋಜನೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ. ವೈಜ್ಞಾನಿಕ ರೀತಿಯಲ್ಲಿ ಅವುಗಳನ್ನು ವಿಲೇವಾರಿ ಮಾಡಲಾಗುವುದು. ಈಗಾಗಲೇ ಹಲವಾರು ಕಡೆಗಳಲ್ಲಿ ಇಂತಹ ಘಟಕಗಳು ತೆರೆದು ಕಾರ್ಯಾಚರಿಸುತ್ತಿದೆ. ಅಲ್ಲಿಗೆ ತೆರಳಿ ಅದರ ಸಾಧಕ – ಭಾದಕಗಳ ಬಗ್ಗೆ ತಿಳಿಸುವ ಕೆಲಸ ಮಾಡಲಾಗುವುದು.

ಕರುಣಾಕರ ವಿ. ಮುಖ್ಯಾಧಿಕಾರಿ, ವಿಟ್ಲ ಪಟ್ಟಣ ಪಂಚಾಯತ್

LEAVE A REPLY

Please enter your comment!
Please enter your name here