ಮೊದಲ ದಿನ ಫುಡ್ ಫೆಸ್ಟ್‌ಗೆ ಚಾಲನೆ
ದ.ಕ.ಜಿಲ್ಲೆಯ ಪ್ರಖ್ಯಾತ ಆಯ್ದ 8 ಹುಲಿ ವೇಷ ತಂಡಗಳು ಭಾಗಿ
ಸ್ಯಾಂಡಲ್ ವುಡ್ ನಟ-ನಟಿಯರ ಮೆರುಗು.
ಫುಡ್ ಫೆಸ್ಟ್ನಲ್ಲಿ 45ಕ್ಕೂ ಅಧಿಕ ಸ್ಟಾಲ್
ಪುತ್ತೂರು: ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಸಮಾಜಮುಖಿ ಸೇವೆ ಮಾಡುತ್ತಿರುವ ಪುತ್ತೂರಿನ ವಿಜಯ ಸಾಮ್ರಾಟ್ ನೇತೃತ್ವದದಲ್ಲಿ ಸೆ.28ರಂದು ಪುತ್ತೂರುದ ಪಿಲಿಗೊಬ್ಬು ಸೀಸನ್ -3 ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಸೆ.27ರಂದು ಫುಡ್ ಫೆಸ್ಟ್‌ಗೆ ಚಾಲನೆ ನೀಡಲಾಗುವುದು.
ಪತ್ರಿಕಾಗೋಷ್ಟಿಯಲ್ಲಿ ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರೂ ಮತ್ತು ಪುತ್ತೂರು ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷರಾಗಿರುವ ಸಹಜ್ ರೈ ಬಳಜ್ಜ ಅವರು ಮಾತನಾಡಿ, ಕಳೆದ ಎರಡು ವರ್ಷದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದೇವರ ಅಶೀರ್ವಾದ ಮತ್ತು ಜನರ ಆಶೀರ್ವಾದದಿಂದ ಬಹಳ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಕೂಡಾ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಪಿಲಿಗೊಬ್ಬು ಹಾಗು ಜೊತೆಗೆ ಜನರ ಸಂಭ್ರಮಕ್ಕಾಗಿ ಪುತ್ತೂರು ಫುಡ್ ಫೆಸ್ಟ್ ಅನ್ನು ಸೆ. 27 ಮತ್ತು 28ರಂದು ನಡೆಯಲಿದೆ.
ಸೆ.27ರಂದು ಸಂಜೆ ಗಂಟೆ 4 ರಿಂದ ಫುಡ್ ಫೆಸ್ಟ್ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಪುತ್ತೂರಿನ ಪ್ರತಿಷ್ಠಿತಿ ಮುಳಿಯ ಜ್ಯುವೆಲ್ಲರ‍್ಸ್‌ನ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಅವರು ಉದ್ಘಾಟಿಸಲಿದ್ದಾರೆ. ಭಟ್ ಆಂಡ್ ಭಟ್ ಯುಟ್ಯೂಬ್‌ನ ಸುದರ್ಶನ್ ಭಟ್ ಬೆದ್ರಾಡಿ ಅವರು ಆಹಾರ ಮಳಿಗೆಗೆ ಚಾಲನೆ ನೀಡಲಿದ್ದಾರೆ ಎಂದವರು ಹೇಳಿದರು.
ಪುತ್ತೂರುದ ಪಿಲಿಗೊಬ್ಬು -ಚಾಲನೆ
ಸೆ.28ರಂದು ಬೆಳಿಗ್ಗೆ ಗಂಟೆ ಗಂಟೆ 10.30ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಪಾದಂಗಳವರು ದೀಪ ಪ್ರಜ್ವಲನ ಮಾಡಿ ಆಶೀರ್ವಚನ ನೀಡಲಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ ಪಿಲಿಗೊಬ್ಬು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಿಲಿಗೊಬ್ಬು ವೇದಿಕೆಯ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಲಿದ್ದಾರೆ ಎಂದು ಸಹಜ್ ರೈ ಬಳಜ್ಜ ಅವರು ಹೇಳಿದರು.
ಸಭಾ ಕಾರ್ಯಕ್ರಮ:
ಸಂಜೆ ಗಂಟೆ 4.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಶಶಿಕ್ಯಾಟರಿಂಗ್ ಬರೋಡ ಇದರ ಮಾಲಕ ಶಶಿಧರ್ ಶೆಟ್ಟಿ ಬರೋಡಾ, ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್‌ಸ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಸಹಜ್ ರೈ ಬಳಜ್ಜ ಹೇಳಿದರು.
ತಾರಾ ಮೆರುಗು:
ಕಾರ್ಯಕ್ರಮದಲ್ಲಿ ತುಳುನಾಡಿನ ಹೆಸರಾಂತ ಕೋಸ್ಟಲ್‌ವುಡ್ ಮತ್ತು ರಾಜ್ಯದ ಹೆಸರಾಂತ ಸ್ಯಾಂಡಲ್ ವುಡ್ ನಟ, ನಟಿಯರು ಭಾಗವಹಿಸಲಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ತ್ರಿವಿಕ್ರಮ್, ಧನ್‌ರಾಜ್ ಆಚಾರ್ಯ, ಸೀರಿಯಲ್ ನಟಿ ವೈಷ್ಣವಿ, ಸೂ ಫ್ರಮ್ ಸೋ ಚಲನ ಚಿತ್ರದ ನಾಲ್ವರು ನಟರು ಸಹಿತ ಇನ್ನೂ ಹಲವಾರು ಮಂದಿ ಚಲನಚಿತ್ರ ನಟರು ಭಾಗವಹಿಸಲಿದ್ದಾರೆ ಎಂದು ಸಹಜ್ ರೈ ಬಳಜ್ಜ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೆಲು, ಉಪಾಧ್ಯಕ್ಷ ರತನ್ ರೈ ಕುಂಬ್ರ ಉಪಸ್ಥಿತರಿದ್ದರು.
45ಕ್ಕೂ ಮಿಕ್ಕಿ ವಿವಿಧ ಖಾದ್ಯಗಳ ಮಳಿಗೆ:
ವಿಶಿಷ್ಟ ಬಗೆಯ ತಿಂಡಿ ತಿನಿಸುಗಳು, ಖಾದ್ಯಗಳನ್ನು ಪುತ್ತೂರಿನ ಜನತೆಗೆ ಪರಿಚಯಿಸುವುದು ಫುಡ್ ಫೆಸ್ಟ್ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು, ಇದಕ್ಕಾಗಿ ಪಗೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್‌ವಿಚ್, ವಿವಿಧ ಬಗೆಯ ದೋಸೆಗಳು, ವಿವಿಧ ಬಗೆಯ ಐಸ್‌ಕ್ರೀಮ್‌ಗಳು, ಮೋಕ್ ಟೈಲ್ ಜ್ಯೂಸ್, ಮಟ್ಕಾ ಸೋಡಾ, ಕರಾವಳಿಯ ರುಚಿಕರ ಖಾದ್ಯಗಳ ಸಹಿತ 45ಕ್ಕೂ ವಿವಿಧ ಖಾದ್ಯಗಳ ಮಳಿಗೆಗಳು ವಿಜ್ರಂಭಿಸಲಿದೆ. ಕಳೆದ ವರ್ಷದಂತೆ ಅತ್ಯಂತ ಶ್ರದ್ದಾಪೂರ್ವಕವಾಗಿ 13 ಮಂದಿಯ ತಂಡ ಸ್ವಚ್ಛತಾ ಕಾರ್ಯ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಸಹಜ್ ರೈ ಬಳಜ್ಜ ಹೇಳಿದರು.
ಹಲವು ಸಮಾಜಮುಖಿ ಕಾರ್ಯ:
ಸಮಾಜಮುಖಿ ಚಿಂತನೆಯ ಮೂಲಕ ರೂಪತಾಳಿ 2020ರಲ್ಲಿ ಪ್ರಾರಂಭಗೊಂಡ ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಸಂಸ್ಥೆಯು ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಪುತ್ತೂರಿನಲ್ಲಿ ಚಿರಪರಿಚಿತವಾಗಿದೆ. ಸಮಾಜ ಸೇವೆ, ಸಾಮಾಜಿಕ ಕಾರ್ಯದ ಜೊತೆಗೆ ಕಲೆ, ಕ್ರೀಡಾ ಕ್ಷೇತ್ರದ ಜೊತೆಗೆ ಸಾಂಸ್ಕೃತಿಕವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಹುಟ್ಟಿದ ಸಂಸ್ಥೆ ಆಗಲೇ ಸುಮಾರು 5ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ, ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡುವ ಕೆಲಸವನ್ನೂ ಮಾಡಿದೆ. ಪ್ರತಿ ವರ್ಷ ಒಂದು ಮನೆ ನಿರ್ಮಾಣ ಮಾಡಿ ಆಯ್ದ ಬಡವರಿಗೆ ಹಸ್ತಾಂತರಿಸುತ್ತೆವೆ. ಈಗಾಗಲೇ 3 ಮನೆ ಹಸ್ತಾಂತರ ಆಗಿದೆ.
ಸಹಜ್ ರೈ ಬಳಜ್ಜ ಗೌರವಾಧ್ಯಕ್ಷರು
ಪುತ್ತೂರುದ ಪಿಲಿಗೊಬ್ಬು ಸಿಸನ್ -3
8 ಹುಲಿವೇಷ ತಂಡಗಳಿಂದ ಪ್ರದರ್ಶನ – ಗೌರವ ಸಂಭಾವನೆ
(ಪ್ರ) 3ಲಕ್ಷ, (ದ್ವಿ)2ಲಕ್ಷ, (ತೃ) 1ಲಕ್ಷ ರೂಪಾಯಿ ಬಹುಮಾನ
ಪುತ್ತೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 8 ಹುಲಿವೇಷ ತಂಡಗಳನ್ನು ಆಹ್ವಾನಿಸಿ ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನ ರೂ 3 ಲಕ್ಷ ದ್ವಿತೀಯ ಬಹುಮಾನ 2 ಲಕ್ಷ, ಹಾಗೂ ತೃತೀಯ ಬಹುಮಾನ 1 ಲಕ್ಷ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಗುವುದು ಮಾತ್ರವಲ್ಲದೆ ಭಾಗಿಯಾದ ತಂಡಗಳಿಗೆ ತಲಾ 5೦,೦೦೦ ಗೌರವ ಸಂಭಾವನೆಯನ್ನು ನೀಡಿ ಗೌರವಿಸಲಾಗುವುದು. ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಗುಂಪು ಪ್ರಶಸ್ತಿ ವಿಭಾಗ ದಲ್ಲಿ ಉತ್ತಮ ತಾಸೆ, ಉತ್ತಮ ಬಣ್ಣ, ಉತ್ತಮ ಧರಣಿ ಮಂಡಲ ಕುಣಿತ, ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ ಬಹುಮಾನವಿದೆ. ಪಂದ್ಯಶ್ರೇಷ್ಠದಲ್ಲಿ ಪುತ್ತೂರುದ ಪಿಲಿ ಮತ್ತು ಕಪ್ಪು ಹುಲಿಗೆ ನಗದು ಬಹುಮಾನ ರೂ. 10 ಸಾವಿರ ಮತ್ತು ಎಲ್‌ಇಡಿ ಟಿವಿ ನೀಡಲಾಗುವುದು.
ಪ್ರತಿ ತಂಡದಲ್ಲಿ 15 ಹುಲಿವೇಷ ಹಾಗೂ ಪ್ರತಿ ತಂಡಕ್ಕೆ ಹುಲಿ ವೇಷ ಕುಣಿತದ ಕಲಾ ಪ್ರದರ್ಶನ ನೀಡಲು 22 ಪ್ಲಸ್ 1 ನಿಮಿಷದ ಕಾಲಾವಕಾಶವಿರುತ್ತದೆ. ಈ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ ಜಿಲ್ಲೆಯ ಖ್ಯಾತ ತೀರ್ಪುಗಾರರು ಭಾಗವಹಿಸಲಿದ್ದಾರೆ. ಪ್ರತಿ ತಂಡಕ್ಕೂ ರೂ. 50 ಸಾವಿರ ನೀಡಿ ಗೌರವಿಸಲಾಗುವುದು ಎಂದು ಸಹಜ್ ರೈ ಹೇಳಿದರು.