
ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2025-26 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ರಚನೆ ಕಾಲೇಜಿನ ಆಡಳಿತ ಮಂಡಳಿ ಸಮ್ಮುಖದಲ್ಲಿ ನಡೆಯಿತು. ಪ್ರಸ್ತುತ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ, ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿ, ಹರಿಣಾಕ್ಷಿ. ಜೆ. ಶೆಟ್ಟಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಂತ ಫಿಲೋಮಿನ ಕಾಲೇಜಿನ ಉಪನ್ಯಾಸಕಿ ಉಷಾ ಹಾಗೂ ಪುತ್ತೂರಿನ ವಾಸ್ತುಶಿಲ್ಪಿ ರಾಮಕೃಷ್ಣ ಭಟ್ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಅಧ್ಯಾಪಕ ಶ್ರೀಕೃಷ್ಣ ಪ್ರಸಾದ್, ಹಾಗೂ ಬ್ಯೂಟಿಷಿಯನ್ ಭವ್ಯ ಪಿ ರಾವ್ ಇವರು ನೇಮಕಗೊಂಡರು.

ಈ ಸಭೆಯಲ್ಲಿ ಹಿಂದಿನ ವರ್ಷದ ಆಯವ್ಯಯ ಹಾಗೂ 2025-26 ನೇ ಶೈಕ್ಷಣಿಕ ವರ್ಷದಲ್ಲಿ ನಡೆಸಬಹುದಾದ ಕಾರ್ಯಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯನಿರ್ವಹಣಾಧಿಕಾರಿಗಳಾದ ವೆಂಕಟರಮಣ ರಾವ್ ಮಂಕುಡೆ ಇವರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಾ ಕೆ ನಿರೂಪಿಸಿ, ವಂದಿಸಿದರು.