ಪುತ್ತೂರು: ಎ ಗ್ರೇಡ್ ದೇವಸ್ಥಾನಗಳಲ್ಲಿ ಸೇವೆಗಳ ಶುಲ್ಕ ಪರಿಷ್ಕರಣೆಯನ್ನು ಅಲ್ಲಿನ ಆಡಳಿತ ಸಮಿತಿಯವರು ಮಾಡಿದ್ದಾರೆ. ಇದರಲ್ಲಿ ಸರಕಾರದ ಪಾತ್ರವಿಲ್ಲ. ದೇವಸ್ಥಾನದ ಹಣ ಮುಸ್ಲಿಂಮರ ಕಲ್ಯಾಣ ನಿಧಿಗೆ ಹೋಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರಲ್ಲಿ ದೇವಸ್ಥಾನದ ಹಣ ಸರಕಾರಕ್ಕೆ ಹೋಗುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಅವರು ದಾಖಲೆ ಸಹಿತ ಸಾಬೀತು ಮಾಡಲಿ. ಚರ್ಚೆಗೆ ನಾವು ಸಿದ್ದ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಥ ರೈ ಮೇಗಿನಗುತ್ತು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ ಗ್ರೇಡ್ ದೇವಸ್ಥಾನಗಲ್ಲಿ ಸೇವೆಗಳ ಧರ ಏರಿಕೆಯಾಗಿದೆ. ದೇವಸ್ಥಾನದ ಹಣ ಮುಸ್ಲಿಮರ ಕಲ್ಯಾಣ ನಿಧಿಗೆ ಹೋಗುತ್ತಿದೆ ಎಂಬ ಅಪಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಕಟೀಲು ಮತ್ತು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸಿದ್ದರಾಮಯ್ಯ ಸರಕಾರ ಏರಿಕೆ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕಟೀಲು ದೇವಸ್ಥಾನ ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನವಲ್ಲ. ಅಲ್ಲಿ ಅಸ್ರಣ್ಣರವರ ಆಡಳಿತ ಸಮಿತಿಯಿದೆ. ಅಲ್ಲಿನ ದರ ಏರಿಕೆ ಅವರು ತೆಗೆದುಕೊಂಡ ನಿರ್ಣಯವಾಗಿದೆ. ಅದು 15 ವರ್ಷಗಳ ಹಿಂದಿನ ದರವನ್ನು ಈಗ ಪರಿಷ್ಕರಣೆ ಮಾಡಲಾಗಿದೆ. ಅದೇ ರೀತಿ ಸುಬ್ರಹ್ಮಣ್ಯದಲ್ಲಿಯೂ 15 ವರ್ಷದ ಬಳಿಕ ದರ ಏರಿಕೆ ಮಾಡಿದ್ದು ಅದು ಆಡಳಿತ ಸಮಿತಿಯ ನಿರ್ದಾರವಾಗಿದೆ. ಇದರಲ್ಲಿ ಸರಕಾರದ ಪಾತ್ರವಿಲ್ಲ. 15 ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದ್ದು ದೇವಸ್ಥಾನದ ನಿರ್ವಹಣೆಗೆ ಪೂರಕವಾಗಿ ಸೇವೆಗಳ ದರ ಏರಿಕೆ ಮಾಡಲಾಗಿದೆ. ಹುಂಡಿಗೆ ಕಾಣಿಕೆ ಹಾಕಬೇಡಿ. ಅರ್ಚಕರ ತಟ್ಟೆಗೆ ಹಾಕಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಸೇವೆ ಮಾಡಿಸುವಂತೆ ಯಾರಿಗೂ ಒತ್ತಡ ಹೇರುತ್ತಿಲ್ಲ. ಭಕ್ತಾದಿಗಳು ಅವರಾಗಿಯೇ ಸೇವೆ ಮಾಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅಪಪ್ರಚಾರ ನಡೆಸುವುದು ಹಿಂದು ಧರ್ಮಕ್ಕೆ ಅವಹೇಳನ ಮಾಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದ ಅವರು ಅಪಪ್ರಚಾರ ಮಾಡುವವರು ಬೆಲೆ ಏರಿಕೆಯ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾಸಿಕವಾಗಿ ರೂ.55-45ಲಕ್ಷ ಖರ್ಚಿದೆ. ಬರುವ ಆದಾಯ 30ಲಕ್ಷ ಮಾತ್ರ 10 ಲಕ್ಷ ಕೊರತೆಯಿದೆ. ನಿರ್ವಹಣೆಗೆ ಸಾಕಾಗುವುದಿಲ್ಲ. ಹೀಗಾಗಿ ವ್ಯವಸ್ಥಾಪನಾ ಸಮಿತಿಯವರು ಅಕ್ಕಿ ಜೋಡಣೆಗೆ ಪ್ರಾರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಹಕರಿಸಿಬೇಕೇ ಹೊರತು ಅಪಪ್ರಚಾರ ಮಾಡುವುದಲ್ಲ ಎಂದರು.
ದೇವಸ್ಥಾನದ ಹಣ ಸರಕಾರಕ್ಕೆ ಹೋಗುವುದಿಲ್ಲ:
ದೇವಸ್ಥಾನದ ಸರಕಾರಕ್ಕೆ ಹೋಗುತ್ತಿದೆ ಎಂಬ ಅಪ ಪ್ರಚಾರವಿದೆ. ಆದರೆ ಎಲ್ಲಾ ಹಣ ಸರಕಾರಕ್ಕೆ ಹೋಗುವುದಿಲ್ಲ. ದೇವಸ್ಥಾನಗಳಲ್ಲಿ ಸಂಗ್ರಹವಾದ ಹಣದಲ್ಲಿ ದೇವಸ್ಥಾನದ ಖರ್ಚಗಳು ಕಳೆದು ಉಳಿಕೆ ಹಣದಲ್ಲಿ ಅಂದರೆ ರೂ.5-10ಲಕ್ಷ ತನಕ ಉಳಿಕೆಯಾದರೆ ಅದರ ಶೇ.5 ಹಾಗೂ ರೂ.10ಲಕ್ಷಕ್ಕಿಂತ ಅಧಿಕ ಉಳಿತಾಯವಾದರೆ ಅದರಲ್ಲಿ ಶೇ.10ರಷ್ಟು ಮೊತ್ತ ಮಾತ್ರ ಧಾರ್ಮಿಕ ಪರಿಷತ್ ಆಯುಕ್ತರ ಹೆಸರಿನಲ್ಲಿರುವ ಸಾಮಾನ್ಯ ಸಂಗ್ರಹಣಾ ನಿಧಿಗೆ ಜಮೆಯಾಗುತ್ತಿದೆ. ಸರಕಾರಕ್ಕೆ ಸಂದಾಯವಾಗುತ್ತಿಲ್ಲ. ಹೀಗೆ ಜಮೆಯಾಗುವ ಹಣದಲ್ಲಿ ಗೋಶಾಲೆ, ಅನಾಥಾಶ್ರಮ. ಅರ್ಚಕರ ಸಮಸ್ಯೆಗಳಿಗೆ, ದೇವಸ್ಥಾನಗಳ ಜೀರ್ಣೋದ್ಧಾರ ಸಮಯದಲ್ಲಿ ಬಳಕೆ ಮಾಡಲಾಗುತ್ತದೆ. ಯಾವುದನ್ನು ಅರಿಯದೇ ಅಪ್ರಚಾರ ಮಾಡುವುದು ಸರಿಯಲ್ಲ ಶಿವನಥ ರೈ ಮೇಗಿನಗುತ್ತು ಹೇಳಿದರು.
ಸಿದ್ದರಾಮಯ್ಯನವರು ಹಿಂದೂ ವಿರೋಧಿಯಾಗಲು ಹೇಗೆ ಸಾಧ್ಯ?:
2006ರಲ್ಲಿ ದೇವಸ್ಥಾನಗಳಿಗೆ ವಾರ್ಷಿಕ ರು.6,೦೦೦ ತಸ್ತೀಕು ಬರುತ್ತಿತ್ತು. 2012ರಲ್ಲಿ ಯಡಿಯೂಪ್ಪ ಮುಖ್ಯಮಂತ್ರಿಯಾಗಿದ್ದಾಗ ರೂ.12,೦೦೦ಕ್ಕೆ ಏರಿಕೆಯಾಗಿದೆ. 2013-18ರ ತನಕ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮೂರು ಬಾರಿ ಏರಿಕೆ ಮಾಡಿದ್ದು ರೂ.34,೦೦೦, 36,೦೦೦ ಹಾಗೂ 48,೦೦೦ ಏರಿಕೆಯಾಗಿದೆ. ಪ್ರಸ್ತುತ ಅವಧಿಯಲ್ಲಿ ಅವರು ತಸ್ತೀಕನ್ನು 60,೦೦೦ಕ್ಕೆ ಏರಿಕೆಯಾಗಿದೆ. ಹಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ.
ಪ್ರಸ್ತುತ ತಸ್ತೀಕು ವಾರ್ಷಿಕ ರೂ.6೦,೦೦೦ ಬರುತ್ತಿದೆ. ಅರ್ಚಕರ ವೇತನ, ಸಿಬ್ಬಂದಿ ವೇತನ ದೇವಸ್ಥಾನದ ನಿರ್ವಹಣೆ ಸೇರಿದಂತೆ ಮಾಸಿಕವಾಗಿ ದೇವಸ್ಥಾನಗಳಲ್ಲಿ ರೂ.60,೦೦೦ ಖರ್ಚಿದೆ. ತಸ್ತೀಕು ಮೊತ್ತ ದೇವಸ್ಥಾನದ ನಿರ್ವಹಣೆಗೆ ಸಾಕಾಗುವುದಿಲ್ಲ. ಆಡಳಿತ ಸಮಿತಿಯವರು ಹೊಂದಿಸಬೇಕಾಗಿದೆ. ದೇವಸ್ಥಾನ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸೇವೆಗಳ ದರ ಏರಿಕೆ ಮಾಡಬೇಕಾಗುತ್ತದೆ. ಇದಕ್ಕೆ ಧಾರ್ಮಿಕ ಪರಿಷತ್‌ನ ಸಚಿವಾಲಯದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಅಪಪ್ರಚಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರೇ ಅಪಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯವಿರಬಹುದು. ಇದರ ಬಗ್ಗೆ ನಳಿನ್ ಕುಮಾರ್ ಕಟೀಲು, ಕಿಶೋರ್ ಬೊಟ್ಯಾಡಿ ಪತ್ರಿಕಾ ಗೋಷ್ಠಿ ಮಾಡಿ ತಿಳಿಸಲಿ ಎಂದರು.
ರಾಜ್ಯ ಧಾರ್ಮಿಕ ಪರಿಷತ್‌ಗೆ ಈ ತನಕ ಸ್ವಂತ ಕಟ್ಟಡವಿರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಧಾರ್ಮಿಕ ಪರಿಷತ್‌ಗೆ ಕಟ್ಟಡ ಮಾಡಿಲ್ಲ. ಅವರು ಹಜ್ ಭವನ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಅವರನ್ನು ಹಿಂದು ವಿರೋಧಿಯಂತೆ ಹೇಳಿಲ್ಲ. ಬೆಂಗಳೂರಿನ ರಾಜ್ಯ ಧಾರ್ಮಿಕ ಪರಿಷತ್‌ನ ಕಚೇರಿ ಕಟ್ಟಡಕ್ಕೆ ಪ್ರತಿ ತಿಂಗಳು ರೂ.7ಲಕ್ಷ ಬಾಡಿಗೆ ಪಾವಿತಿಸಲಾಗುತ್ತಿತ್ತು. ಅದನ್ನು ಉಳಿಕೆ ಮಾಡಲು ಈಗಿನ ಸರಕಾರ ರೂ.10ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸುತ್ತಿದೆ ಎಂದರು.
ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧಕ್ಷ ಬಾಲಕೃಷ್ಣ ಕಣ್ಣಾರಾಯ ಮಾತನಾಡಿ, ದರ ಏರಿಕೆ ಮಾಡಿರುವುದು ಸರಕಾರ ಅಥವಾ ಸಿದ್ದರಾಮಯ್ಯ ಅಲ್ಲ. ಅಪ ಪ್ರಚಾರ ಪಟ್ಟಭದ್ರ ಹಿತಾಶಕ್ತಿಗಳ ಕೆಲಸ. ಈ ಹಿಂದೆ ಚುನಾವಣೆ ಬರುವಾಗ ಕೋಮು ಧ್ವೇಷ ಹರಡುವ ಕೆಲಸವಾಗುತ್ತಿತ್ತು. ಈಗ ಇದಕ್ಕೆಲ್ಲಾ ಕಡಿವಾಣ ಬಿದ್ದಿದೆ. ಈಗ ಪಟ್ಟಭದ್ರ ಹಿತಾಶಕ್ತಿಗಳಿಗೆ ವಿಷಯವೇ ಇಲ್ಲ. ಹೀಗಾಗಿ ದೇವಸ್ಥಾನದ ದರ ಏರಿಕೆ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅದರೆ ಅಪಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೇ ಭಕ್ತಾದಿಗಳು ಸರಿಯಾದ ಉತ್ತರ ನೀಡಿದ್ದಾರೆ. ದೇವಸ್ಥಾನದ ಸೇವೆಗಳ ದರ ಏರಿಕೆ ಮಾಡುವುದು ಅಲ್ಲಿನ ಆಡಳಿತ ಮಂಡಳಿಯವರು. ಮಾರುಕಟ್ಟೆಯ ಬೆಲೆ ಏರಿಕೆಯ ಜೊತೆಗೆ ದೇವಸ್ಥಾನದ ನಿರ್ವಹಣೆ ಸರಿದೂಗಿಸಲು ಆಡಳಿತ ಸಮಿತಿಯವರು ನಿರ್ಧರಿಸಿ ಧರ ಪರಿಸ್ಕರಣೆ ಮಾಡಲಾಗುತ್ತಿದೆ ಎಂದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ಬೆಳ್ಳಿಪ್ಪಾಡಿ, ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಬ್ರಹ್ಮಣ್ಯ ಗೌಡ ಹನಿಯೂರು, ಕೆಯ್ಯೂರು ಶ್ರೀದುರ್ಗಾಪರಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.