ಎವಿಜಿ ಶಾಲೆಯಲ್ಲಿ ಶಾರದ ಪೂಜೆ, ಭಜನೋತ್ಸವ, ಅಕ್ಷರಾಭ್ಯಾಸ, ಆಯುಧ ಪೂಜೆ ಆಚರಣೆ

0

ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ ಸೆ.26ರಂದು ಶಾರದ ಪೂಜೆ ,ಭಜನೋತ್ಸವ, ಅಕ್ಷರಾಭ್ಯಾಸ ಮತ್ತು ಆಯುಧ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.


ಮಕ್ಕಳಿಂದ ದೀಪ ಬೆಳಗಿಸಿ, ಭಜನೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ಮುರಳಿ ಕೃಷ್ಣ ಹಸಂತಡ್ಕ ರವರು ಮಾತನಾಡಿ, ಶಿಕ್ಷಣದ ಮುಖ್ಯ ಗುರಿ ಜ್ಞಾನ ಸಂಪಾದನೆ, ಜ್ಞಾನದಿಂದ ಸಮಾಜದ ಪರಿವರ್ತನೆ ಕೆಲಸ ಸಾಧ್ಯ. ಜಗತ್ತಿನಲ್ಲಿ ದೈವಿ ಶಕ್ತಿಯ ಕಾರಣದಿಂದ ಪ್ರತಿಯೊಂದು ಅಣುರೇಣುಗಳು ಬದುಕಲು ಸಾಧ್ಯ. ಹಾಗಾಗಿ ಎಲ್ಲರೂ ಉತ್ತಮ ಪ್ರಜೆಗಳಾಗಿ ಬಾಳಿ ಎಲ್ಲರೂ ನಮ್ಮವರು ಎಂಬ ಯೋಚನೆ ನಮ್ಮಲ್ಲಿ ಬರಬೇಕು. ಮಕ್ಕಳಲ್ಲಿ ಸಂಸ್ಕೃತಿ ಭಜನೆ, ಪೂಜೆ ಮೂಲಕ ಬೆಳೆಯಲು ಸಾಧ್ಯ ಎನ್ನುವ ಅರಿವು ಮೂಡಿಸಿದರು. ಈ ನಿಟ್ಟಿನಲ್ಲಿ ಎವಿಜಿ ಸಂಸ್ಥೆಯು ಮಕ್ಕಳಿಗೆ ಜ್ಞಾನ ಸಂಪಾದನೆಯನ್ನು ಧಾರೆ ಎರೆಯುತ್ತಿದೆ ಎಂದರು.


ಶಾಲಾ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅಧ್ಯಕ್ಷೆ ವಹಿಸಿ ಮಾತನಾಡಿ ಸಂಸ್ಕೃತಿ, ಭಜನೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಸನ್ಮಾನ:
ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ವೇದಿಕೆಯ ಗಣ್ಯರಿಂದ ಎವಿಜಿ ಅಸೋಸಿಯಟ್ಸ್ ಸಂಸ್ಥೆಯ ಕಚೇರಿ ವ್ಯವಸ್ಥಾಪಕ ಚೇತನ್ ಕುಮಾರ್ ಮತ್ತು ಕಾರ್ಪೆಂಟರ್ ಎವಿಜಿ ಸಮೂಹ ಸಂಸ್ಥೆಯ ಉಮೇಶ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಚಾಲಕ ಎ. ವಿ ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಕ್ಷರ ಅಭ್ಯಾಸ, ಆಯುಧ ಪೂಜೆ ಹಾಗೂ ಶಾರದ ಪೂಜೆಯು ಧಾರ್ಮಿಕ ವಿಧಿ ವಿಧಾನದಲ್ಲಿ ನೆರವೇರಿತು. ವೇದಿಕೆಯಲ್ಲಿ ಶಾಲಾ ಆಡಳಿತ ಅಧಿಕಾರಿ ಗುಡ್ಡಪ್ಪಗೌಡ ಬಲ್ಯ, ಉಪಾಧ್ಯಕ್ಷರಾದ ಉಮೇಶ್ ಮಲುವೇಳು, ಶಾಲಾ ನಿರ್ದೇಶಕ ಕೊರಗಪ್ಪ ಗೌಡ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ ಮತ್ತು ಶಾಲಾ ಮುಖ್ಯೋಪಾಧ್ಯಾಯ ಅಮರ್‌ನಾಥ್ ಪಟ್ಟೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ , ಪ್ರತಿಭಾದೇವಿ, ದೀಕ್ಷಾ, ಗಂಗಾಧರ ಗೌಡ, ಸೀತಾರಾಮ ಕೇವಳ , ಶಿಕ್ಷಕರಕ್ಷಕ ಸಂಘದ ಪದಾಧಿಕಾರಿಗಳು,ಪೋಷಕರು ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here