ಪಶುಸಂಗೋಪನಾ ಇಲಾಖೆಯಿಂದ ಸಾಕು ನಾಯಿಗಳಿಗೆ ಉಚಿತ ರೇಬೀಸ್ ನಿರೋಧಕ ಲಸಿಕೆ ವಿತರಣೆ, ಮಾಹಿತಿ ಶಿಬಿರ ಚಾಲನೆ

0

ಪುತ್ತೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ ಒಂದು ತಿಂಗಳ ಕಾಲ ನಡೆಯಲಿರುವ ಸಾಕು ನಾಯಿಗಳಿಗೆ ಉಚಿತ ರೇಬೀಸ್ ನಿರೋಧಕ ಲಸಿಕೆ ವಿತರಣೆ ಹಾಗೂ ಮಾಹಿತಿ ಶಿಬಿರಕ್ಕೆ ಸೆ.28ರಿಂದ ಚಾಲನೆ ದೊರೆತಿದೆ.


ಪುತ್ತೂರು ಪಶು ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡಿದ ಬಳಿಕ ರೇಬಿಸ್ ರೋಗದ ಬಗ್ಗೆ ಜನಜಾಗ್ರತಿ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಗೌಡ ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈ ಅವರ ಸಲಹೆಯಂತೆ ಗ್ರಾಮ ಮಟ್ಟದಲ್ಲಿ ಸಾಕು ನಾಯಿಗಳಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.


ನಗರಸಭಾ ಸದಸ್ಯ ದಿನೇಶ್ ಶೇವಿರೆ, ಪಶು ಇಲಾಖೆಯ ಜಾನುವಾರು ಅಧಿಕಾರಿ ಪುಷ್ಪರಾಜ್ ಶೆಟ್ಟಿ, ನವೀನ್ ಆಚಾರ್ಯ ಸಿದ್ಯಾಳ, ಸಿಬ್ಬಂದಿಗಳಾದ ಅರುಣಾ, ರವಿ ಕುಮಾರ್ ಪೋಳ್ಯ, ಕೀರ್ತನ್ ಆಚಾರ್ಯ. ಅಕ್ಷಯ್ ಗೌಡ, ಶಶಿಧರ್ ನಾಯ್ಕ್ ಕೃಷ್ಣಗರ ಉಪಸ್ಥಿತರಿದ್ದರು.

ಪಶು ಆಸ್ಪತ್ರೆಗಳಾದ ಪುತ್ತೂರು, ಪಾಣಾಜೆ, ಉಪ್ಪಿನಂಗಡಿ, ಪಶು ಚಿಕಿತ್ಸಾಲಯಗಳಾದ ಕೊಳ್ತಿಗೆ, ನರಿಮೊಗರು, ಪ್ರಾಥಮಿಕ ಪಶು ಚಿಕಿತ್ಸಾಲಯಗಳಾದ ಕೋಡಿಂಬಾಡಿ, ಬಲ್ನಾಡು, ಈಶ್ವರಮಂಗಲ, ಕೆದಂಬಾಡಿಯಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಇದರ ಜೊತೆಗೆ ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಶಿಬಿರಗಳ ಮೂಲಕ ಉಚಿತ ಲಸಿಕೆ ವಿತರಿಸಲಾಗುವುದು. ಶ್ವಾನಗಳ ಮಾಲಕರು ಶ್ವಾನಗಳನ್ನು ಸಮೀಪದ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯಗಳು ಅಥವಾ ಪಂಚಾಯತ್ ಸಹಯೋಗದಲ್ಲಿ ನಡೆಯುವ ಶಿಬಿರಗಳಿಗೆ ಕರೆತಂದು ಲಸಿಕೆ ವಿತರಣೆಯಲ್ಲಿ ಸಹಕರಿಸುವಂತೆ ಪಶು ಸಂಗೋಪನಾ ಇಲಾಖೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here