ʼಸುವರ್ಣಗಡ್ಡೆʼ ಆರೋಗ್ಯಗ್‌ ಬಾರೀ ಎಡ್ಡೆ

0

ನಮ್ಮ ಊಟದ ತಟ್ಟೆಯಲ್ಲಿ ಪಲ್ಯ, ಸಾಂಬಾರ್, ಹುಳಿ, ಗೊಜ್ಜು, ಕಬಾಬ್ ರೂಪದಲ್ಲಿ ಕಾಣಸಿಗುವ ರುಚಿಕರ ತರಕಾರಿ. ಆದರೆ ಚೆನ್ನಾಗಿ ಬೆಳೆದಿರಬೇಕು. ಕೆಲವು ಕಾಯಿಲೆಗಳಿಗೆ ಔಷಧಿಯೂ ಹೌದು. ಆಫ್ರಿಕದಲ್ಲಿ ಇದಕ್ಕೆ ಧಾರ್ಮಿಕ ಸ್ಥಾನವಿದೆ.


ಚೆನ್ನಾಗಿ ಮಳೆ ಬಿದ್ದ ಆರಂಭದಲ್ಲಿ ದೇವಸ್ಥಾನದ ಮುಗುಳಿಯಂತೆ ಭೂಮಿಯಿಂದ ಹೊರಬರುವುದು. ಮುಗುಳಿ ಆಕಾರದ ಭಾಗ ಹೊರ ಬಂದಂತೆ ಅದನ್ನು ಕತ್ತರಿಸಿ ಮಸಾಲೆ ಸೇರಿಸಿ ಪಲ್ಯ ಮಾಡಿದರೆ ಬಹಳ ರುಚಿಯಾಗಿರುತ್ತದೆ. ನಿದಾನವಾಗಿ ಭೂಮಿಯಿಂದ ಮೇಲೆ ಬಂದಂತೆ ಮುಗುಳಿಯನ್ನು ಹೊತ್ತು ತಂದ ದಂಡ ಗೋಚರವಾಗುತ್ತದೆ. ದಂಡದ ಸುತ್ತ ಈಚಲ ಕಾಯಿಯಂತೆ ಆವರಿಸಿ ಕೊಂಡಿರುತ್ತದೆ. ಮೇಲಿನ ಮುಗುಳಿ ಮುಂದೆ ಮುದುಡಿ ಮೆದುಳಿನ ಆಕಾರದಂತೆ ಕಂಡುಬರುತ್ತದೆ. ನಂತರ ಬೇರೆ ಬೇರೆ ಬಣ್ಣಗಳಿಂದ ವಿಚಿತ್ರ ಆಕಾರದ ದಳಗಳು ಭೂಮಿಯಿಂದ ಹೊರಬರುತ್ತದೆ. ಸ್ವಲ್ಪ ಸಮಯದ ನಂತರ ಪ್ರಾಣಿ ಸತ್ತು ಕೊಳೆತ ವಾಸನೆ ಹೂವಿನಿಂದ ಹೊರಬರುವುದು. ನೊಣ ಕೀಟಗಳನ್ನು ವಾಸನೆ ಆಕರ್ಷಿಸುತ್ತದೆ. ಮನುಷ್ಯರನ್ನು ದೂರ ಓಡಿಸುತ್ತದೆ. ಹೂವಿನ ಸುತ್ತಮುತ್ತ ಗಿಡಗಳು ಮೇಲೇಳುತ್ತದೆ. ಇದು 2-4 ಅಡಿ ಎತ್ತರ ಬೆಳೆಯುತ್ತದೆ. ಅಂಕುಡೊಂಕು ವಿನ್ಯಾಸದ ಎಲೆಗಳು ಬೆಳೆದಂತೆ ಕೊಡೆ ಬಿಡಿಸಿದಂತೆ ಕಂಡು ಬರುತ್ತದೆ. ಗಿಡ ಕಿತ್ತರೆ ಗಡ್ಡೆ ಸಿಗುತ್ತದೆ. ಗಡ್ಡೆ ಬೆಳೆಯದಿದ್ದರೆ ಚರ್ಮಕ್ಕೆ ತಾಗಿದರೆ ತುರಿಸುತ್ತದೆ.


ತುಂಬಾ ಪೌಷ್ಠಿಕ ಆಹಾರ. ಇದರಲ್ಲಿ ಕಾರ್ಬೋಹೈಡ್ರೆಟ್, ಗ್ಲುಕೋಸ್, ಗ್ಯಾಲೆಕ್ಟೊಸ್, ಪ್ರೋಟೀನ್ ಅಧಿಕ ಫೈಬರ್ ಇದೆ. vit B1, B6, C ಗಳು ಇದೆ. ಅಧಿಕ ಪೊಟಾಸಿಯಂ ಹಾಗೂ ಪಾಸ್ಪರಸ್, ಮೆಗ್ನೇಷಿಯಂ, ಕ್ಯಾಲ್ಸಿಯಂ, ಝಿಂಕ್‌ಗಳು ಇವೆ. ಇದರಲ್ಲಿರುವ Calcium oxalate ನಿಂದಾಗಿ ತಿಂದರೆ ಗಂಟಲು ನಾಲಗೆ ತುರಿಸುತ್ತದೆ. ಅದನ್ನು ತಡೆಗಟ್ಟಲು ಹುಳಿ ಮೊಸರು, ಹುಣಸೆ ಹುಳಿ ಉಪಯೋಗಿಸಿದರೆ ತುರಿಕೆಯನ್ನು ತಡೆಗಟ್ಟಲಾಗುವುದು.


ಗಡ್ಡೆಯನ್ನು ಅರೆದು ಜೇನು ಅಥವಾ ತುಪ್ಪ ಮಿಶ್ರ ಮಾಡಿ ಆನೆಕಾಲು ರೋಗದಿಂದ ದಪ್ಪವಾದ ಕಾಲಿಗೆ ಹಚ್ಚುವುದರಿಂದ ಬಾವು ಸ್ವಲ್ಪ ಕಡಿಮೆಯಾಗುವುದು. ಗಡ್ಡೆಯನ್ನು ಹಬೆಯಲ್ಲಿ ಬೇಯಿಸಿ ಒಣಗಿಸಿ ಪುಡಿಮಾಡಿಟ್ಟು 5-10ಗ್ರಾಂ ನಷ್ಟು ಮಜ್ಜಿಗೆಯಲ್ಲಿ ಮಿಶ್ರಮಾಡಿ ಸೇವಿಸುತ್ತಿದ್ದರೆ ಮೂಲವ್ಯಾಧಿಯ ತೊಂದರೆ ಕಡಿಮೆ ಮಾಡುವುದು. ಬೇಯಿಸಿ ಒಣಗಿಸಿದ ಪುಡಿ ಮತ್ತು ಕುಟಜ(ಕೊಡಂಚಿ)ದ ತೊಗಟೆ ಪುಡಿ 5 ಗ್ರಾಂ ಮಜ್ಜಿಗೆಯಲ್ಲಿ ಮಿಶ್ರಮಾಡಿ ಕುಡಿದರೂ ಮೂಲವ್ಯಾಧಿ ಲಕ್ಷಣಗಳು ಕಡಿಮೆಯಾಗುವುದು.


ಸುವರ್ಣ ಗಡ್ಡೆಯ ಹೊರಗಿನ ಸಿಪ್ಪೆ ತೆಗೆದು ಸುತ್ತಲು ಮಣ್ಣು ಸವರಿ ಒಣಗಿಸಿ ಅದನ್ನು ಕೆಂಡದಲ್ಲಿ ಹುದುಗಿ ಇಡಬೇಕು. ಗಡ್ಡೆ ಒಳಗೇ ಬೇಯುತ್ತದೆ. ನಂತರ ಹೊರಗಿನ ಮಣ್ಣನ್ನು ತೆಗೆದು ಸ್ವಚ್ಚಗೊಳಿಸಿ ತುಂಡು ಮಾಡಿ ಒಣಗಿಸಿ ಇಟ್ಟುಕೊಳ್ಳಬಹುದು. ಇಲ್ಲವೇ ಅದನ್ನು ಬೆಲ್ಲ ಮತ್ತು ತುಪ್ಪದೊಂದಿಗೆ ಮಿಶ್ರಮಾಡಿ ಸ್ವಲ್ಪ ದಿನ ಸೇವಿಸಿದರೆ ಶರೀರದೊಳಗಿನ ಕೆಲವು ಗಡ್ಡೆಗಳು ಕರಗುವುದು. ಕೆಂಡದಲ್ಲಿ ಬೇಯಿಸಿದ ಸುವರ್ಣ ಗಡ್ಡೆಯನ್ನು ಶುದ್ಧ ಎಳ್ಳೆಣ್ಣೆ ಮತ್ತು ಉಪ್ಪು ಸೇರಿಸಿ ತಿಂದರೆ ಮೂಲವ್ಯಾದಿ ಕಡಿಮೆಯಾಗುವುದು.


ಹಬೆಯಲ್ಲಿ ಅಥವಾ ಕೆಂಡದಲ್ಲಿ ಬೇಯಿಸಿದ ಸುವರ್ಣ ಗಡ್ಡೆ (10- 20 ಗ್ರಾಂ)ಯನ್ನು ಬೆಲ್ಲದೊಂದಿಗೆ 1-2 ತಿಂಗಳು ತಿಂದರೆ ಗಂಟು ನೋವು ಕಡಿಮೆಯಾಗುತ್ತದೆ. ಮಜ್ಜಿಗೆಯಲ್ಲಿ ಅರೆದು ನೋವಿರುವ ಭಾಗಕ್ಕೆ ಹಚ್ಚುವುದರಿಂದಲೂ ನೋವು ಕಡಿಮೆಯಾಗುವುದು. ಉತ್ತಮ ಆಹಾರ ಹಾಗೂ ಉತ್ತಮ ಔಷಧಿಯಾಗಿ ಉಪಯೋಗಿಸಲ್ಪಡುವ ಬಂಗಾರದ ಗಡ್ಡೆ (ಸುವರ್ಣ ಗಡ್ಡೆ)ಇದಾಗಿದೆ.

ಲೇಖಕರು: ಹರಿಕೃಷ್ಣ ಪಾಣಾಜೆ

LEAVE A REPLY

Please enter your comment!
Please enter your name here