ರಾಜ್ಯದಲ್ಲೇ ಪ್ರಪ್ರಥಮ ಬಾರಿ ಕಡತ ವಿಲೇವಾರಿ ಕಾರ್ಯಾಗಾರ-ಅಶೋಕ್ ಕುಮಾರ್ ರೈ
6 ತಿಂಗಳಿಗೊಮ್ಮೆ ಅದಾಲತ್ ಮಾಡುವ ಯೋಚನೆ ಇದೆ-ಅಮಲ ರಾಮಚಂದ್ರ
ಅಂತಿಮ ಆದೇಶ: ಪುತ್ತೂರು-64, ಕಡಬ-1
ಡಿಮಾಕ್ರೇಶನ್: ಪುತ್ತೂರು-02, ಕಡಬ-1
ಡ್ರಾ- ಲೇಔಟ್: ಪುತ್ತೂರು-02, ಕಡಬ-4
ಶುಲ್ಕ ಪಾವತಿಗೆ ಬಾಕಿ: ಪುತ್ತೂರು-52, ಕಡಬ-25
ಪುತ್ತೂರು:ಪುತ್ತೂರು ಮತ್ತು ಕಡಬ ಗ್ರಾಮಾಂತರ ಪ್ರದೇಶದ ಗ್ರಾಮ ಪಂಚಾಯತ್‌ಗಳಲ್ಲಿ ಸಲ್ಲಿಸುವ ಏಕ ನಿವೇಶನ ವಿನ್ಯಾಸ ಅನುಮೋದನೆ ಕುರಿತ ಅರ್ಜಿಗಳಿಗೆ ಸಂಬಂಧಿಸಿ 4ಕೆ ನಿಯಮಾವಳಿಗಳು ಜಾರಿಯಾಗಿರುವ ಮೊದಲು ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ನಿಟ್ಟಿನಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ)ದ ಅದಾಲತ್ ಸೆ.30ರಂದು ಶಾಸಕರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲಿಸಿ ಅದಾಲತ್ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಯೋಜನಾ ಪ್ರಾಧಿಕಾರದಿಂದ ಕಡತ ವಿಲೇವಾರಿ ಕಾರ್ಯಾಗಾರ ಆಯೋಜಿಸಲಾಗಿದೆ.ಏಕ ನಿವೇಶನ ನಕ್ಷೆ ಈ ಮೊದಲು ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುತ್ತಿತ್ತು.ಅಲ್ಲಿ ಇದು ರಾಜಕೀಯವಾಗಿ ದುರ್ಬಳಕೆ ಆಗುತ್ತಿತ್ತು.ಬಳಿಕ ಕೋರ್ಟ್ ಆದೇಶದ ಪ್ರಕಾರ ಪ್ರಸ್ತುತ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಕಾರ್ಯ ನಡೆಯುತ್ತದೆ.ದಕ್ಷಿಣ ಕನ್ನಡ ಭೌಗೋಳಿಕವಾಗಿ ವಿಭಿನ್ನವಾಗಿ ಇರುವ ಪ್ರದೇಶ.ಲೇಔಟ್ ಮಾಡುವಾಗ, ಮನೆ ಕಟ್ಟುವ ಸಂದರ್ಭದಲ್ಲಿ ಸರಿಯಾದ ಪ್ಲ್ಯಾನಿಂಗ್ ಮಾಡದ ಕಾರಣ ಈ ಕಾನೂನು ಬಂದಿದೆ.ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಇದು ಸಹಾಯವಾಗಲಿದೆ.ಕನ್ವರ್ಷನ್, ಸಿಂಗಲ್ ಸೈಟ್ ಮಾಡದಿದ್ದರೆ ಮನೆ ಕಟ್ಟಲು ಸಾಧ್ಯವಿಲ್ಲ.ಆದುದರಿಂದ ಇದು ನೀವು ಮಕ್ಕಳಿಗೆ ಮಾಡಿದ ಆಸ್ತಿಯಾಗದೆ ಅದು ಮಕ್ಕಳಿಗೆ ಹೊರೆಯಾಗುತ್ತದೆ ಎಂದರು.ಪುಡಾದಿಂದ ಮಾಡಿದ ಇಂದಿನ ಅದಾಲತ್‌ನಲ್ಲಿ, ಪುತ್ತೂರು ಮತ್ತು ಕಡಬ ಸೇರಿ ಬಾಕಿಯಿದ್ದ ಸುಮಾರು 556 ಫೈಲುಗಳಿಗೆ ಸಂಬಂಧಿಸಿದವರನ್ನು ಸಂಪರ್ಕಿಸಿದಾಗ ಇದರಲ್ಲಿ 256 ಕಡತಗಳ ದಾಖಲೆಗಳು ಬಂದಿದ್ದು ಅದನ್ನು ಇಂದು ವಿಲೇವಾರಿ ಮಾಡಲಾಗುತ್ತದೆ.ಸದಸ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳು ವಿಲೇವಾರಿ ಮಾಡಿ ಆದೇಶ ಪಡೆದುಕೊಂಡು ಹೋಗಬಹುದು ಎಂದು ಹೇಳಿದ ಶಾಸಕರು,ಅದಾಲತ್ ಕೈಗೊಂಡ ನಗರ ಯೋಜನಾ ಪ್ರಾಽಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರ ಮಾತನಾಡಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸಿಂಗಲ್ ಸೈಟ್, 9/11 ಅರ್ಜಿಗಳು ಬಹಳಷ್ಟು ಬಾಕಿಯಾಗಿತ್ತು.ಏಕವಿನ್ಯಾಸ ನಕ್ಷೆ ಅನುಮೋದನೆಗೆ ಸರಕಾರ ಕೆಲವು ಬದಲಾವಣೆ ತಂದಿತ್ತು.ಇದರಿಂದ ಗೊಂದಲ ಉಂಟಾಯಿತು.ಕಳೆದ 2 ತಿಂಗಳ ಹಿಂದೆ 800ಕ್ಕೂ ಹೆಚ್ಚಿನ ಕಡತಗಳಲ್ಲಿ ಸುಮಾರು 400ರಷ್ಟು ಕಡತಗಳಿಗೆ ಅನುಮೋದನೆ ಕೊಡಲಾಗಿತ್ತು.556 ಕಡತಗಳಿಗೆ ದಾಖಲೆಗಳನ್ನು ನೀಡುವಂತೆ ಹಿಂಬರಹ ಕೊಟ್ಟಿದೆ.ಇದನ್ನು ವಿಲೇವಾರಿ ಮಾಡುವ ಉದ್ದೇಶದಿಂದ ನಮ್ಮ ಸದಸ್ಯ ಕಾರ್ಯದರ್ಶಿಯವರ ಸೂಚನೆಯಂತೆ ಕಡತ ವಿಲೇವಾರಿಗೆ ಅದಾಲತ್ ಮಾಡುವ ಯೋಜನೆ ಹಾಕಿಕೊಂಡೆವು.ಬಳಿಕ ಶಾಸಕರ ಸಲಹೆ ಸೂಚನೆಯಂತೆ ಇಂದು ಅದಾಲತ್ ಮಾಡುತ್ತಿದ್ದೇವೆ.ಮುಂದಿನ ದಿನಗಳಲ್ಲಿ ಪ್ರತೀ 6 ತಿಂಗಳಿಗೊಮ್ಮೆ ಅದಾಲತ್ ನಡೆಸುವ ಯೋಜನೆ ಇದೆ ಎಂದರು.

ವಿಲೇವಾರಿಯಾದ 3 ಕಡತಗಳನ್ನು ಶಾಸಕರು ಸಾಂಕೇತಿಕವಾಗಿ ಹಸ್ತಾಂತರಿಸಿದರು.ನಗರ ಯೋಜನಾ ಪ್ರಾಽಕಾರದ ಸದಸ್ಯರಾದ ಅನ್ವರ್ ಖಾಸಿಂ,ನಿಹಾಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್ ವಂದಿಸಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಲೇವಾರಿಯಾದ ಕಡತಗಳು
ಪುತ್ತೂರು, ಕಡಬ ಸೇರಿದಂತೆ ಒಟ್ಟು 151 ಕಡತಗಳನ್ನು ಅದಾಲತ್‌ನಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ತಿಳಿಸಿದ್ದಾರೆ.
ಗ್ರಾಮವಾಸ್ತವ್ಯದ ಚಿಂತನೆ ಇದೆ
ಯೋಜನಾ ಪ್ರಾಧಿಕಾರದ ಬಳಿಕ ಬೇರೆ ಬೇರೆ ಇಲಾಖೆಗೆ ಸಂಬಂಧಿಸಿದ ಕಡತಗಳ ವಿಲೇವಾರಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.ಅಲ್ಲದೆ ಗ್ರಾಮದಲ್ಲಿ ಒಂದು ದಿವಸ ವಾಸ್ತವ್ಯ ಮಾಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಬೇಕೆಂಬ ಚಿಂತನೆಯಿದೆ.ಪುಡಾಕ್ಕೆ 2 ಸಿಬ್ಬಂದಿಗಳ ನೇಮಕಾತಿಗೆ ಆದೇಶ ಬಂದಿದೆ.ಪುಡಾದಲ್ಲಿರುವ 6 ಕೋಟಿ ರೂ. ಅನುದಾನದಲ್ಲಿ ಪುಡಾ ಕಛೇರಿಗೆ ನೂತನ ಕಟ್ಟಡ ನಿರ್ಮಾಣ ಮಾಡುವ ಯೋಜನೆ ಇದೆ.ರಾಷ್ಟ್ರಧ್ವಜ, ಕೆರೆ ಅಭಿವೃದ್ಧಿ, ಬೊಳುವಾರು, ಅರುಣಾ ಕಲಾಮಂದಿರದ ಬಳಿ ಸರ್ಕಲ್ ನಿರ್ಮಾಣ, ಕೊಂಬೆಟ್ಟು ಕ್ರೀಡಾಂಗಣದಲ್ಲಿ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗುವುದು-
ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು