ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾವು ತ್ರಿಗುಣಾತ್ಮಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಹಾದ್ವಾರದ ಶಿಲಾನ್ಯಾಸ ಕಾರ್ಯಕ್ರಮ ಸೆ.28ರಂದು ಬೆಳಿಗ್ಗೆ ನಡೆಯಿತು.

ದೇವಸ್ಥಾನದ ಅರ್ಚಕ ಮಂಜುನಾಥ ಭಟ್ ಹಾಗೂ ತಂಡದವರ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಧಾರ್ಮಿಕ ಮುಖಂಡ, ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಬೆಂಗಳೂರು ಸೈಂಟ್ ಜೋನ್ಸ್ ಮೆಡಿಕಲ್ ಕಾಲೇಜ್ ನ ಸೀನಿಯರ್ ಸೋಶಿಯಲ್ ಸೈಂಟಿಸ್ಟ್ ರತ್ನಕುಮಾರಿ ಎಸ್. ಉಪಸ್ಥಿತರಿದ್ದರು. ದೇವಸ್ಥಾನ ಆಡಳಿತ ಟ್ರಸ್ಟ್ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಟ್ರಸ್ಟ್‌ನ ಕೋಶಾಧಿಕಾರಿ ಡಾ. ಗಣೇಶ್ ಪ್ರಸಾದ್ ವಂದಿಸಿದರು. ಸದಸ್ಯರಾದ ಜನಾರ್ದನ ಮೂಡುಬೈಲು, ಜಿನ್ನಪ್ಪ ಗೌಡ ಸಹಕರಿಸಿದರು. ದೇವಸ್ಥಾನದ ಪವಿತ್ರಪಾಣಿ ಸೂರ್ಯನಾರಾಯಣ ಯಡಪಡಿತ್ತಾಯ, ನವರಾತ್ರಿ ನಿರ್ವಹಣಾ ಸಮಿತಿ ಅಧ್ಯಕ್ಷ ದೇವರಾಜ್ ಹೊಸವಕ್ಲು, ದುರ್ಗಾವಾಹಿನಿ ಮಹಿಳಾ ತಂಡದ ಅಧ್ಯಕ್ಷೆ ಶಶಿಕಲಾ, ಕಾವು ಯುವಕೇಸರಿ ಅಧ್ಯಕ್ಷ ರಘು ಗೌಡ, ದೇವಸ್ಥಾನದ ಆಡಳಿತ ಟ್ರಸ್ಟ್ ಸದಸ್ಯರು. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನೇತ್ರ ತಪಾಸಣಾ/ರಕ್ತದಾನ ಶಿಬಿರ:
ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ರಕ್ತದಾನ ಶಿಬಿರ ನಡೆಯಿತು. ಪುತ್ತೂರು ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆ, ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್, ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂದತ್ವ ನಿವಾರಣ ವಿಭಾಗ), ಬೆಂಗಳೂರು ಡಾ.ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಸೆಂಚುರಿ ಗ್ರೂಪ್ ಇವರ ಸಹಕಾರದೊಂದಿಗೆ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಸುಮಾರು 35 ಯೂನಿಟ್ ರಕ್ತ ಸಂಗ್ರಹವಾಗಿದೆ. ನೂರಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.
