ಪಟ್ಟೆ ಬಡಗನ್ನೂರು: ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಮಹಿಳೆಯರ ವಿಭಾಗದ ಈಶ ಗ್ರಾಮೋತ್ಸವದ ವಿಜೇತ ತಂಡವಾದ ಪಡುಮಲೆ ಶಾಸ್ತಾರ ಇದರ ಎಲ್ಲಾ ಸ್ಪರ್ಧಾಳುಗಳಿಗೆ ಸನ್ಮಾನ ಸಮಾರಂಭ ಹಾಗೂ ಬೃಹತ್ ವಾಹನ ಜಾಥಾ ಗುರುವಾರದಂದು ನಡೆಯಿತು.
ವಿಜಯದಶಮಿಯ ಪ್ರಯುಕ್ತ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಶಾರದಾ ಪೂಜೆ ಹಾಗೂ ಭಜನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡು ತತ್ಸಮಯದಲ್ಲಿ ಕೌಡಿಚ್ಚಾರಿನಿಂದ ಶಾಲೆಯ ಆವರಣದವರೆಗೆ ತೆರೆದ ಜೀಪಿನಲ್ಲಿ ವಿಜೇತ ತಂಡದ ಮೆರವಣಿಗೆಯು ನಡೆಯಿತು. ದ್ವಾರಕಾ ಪ್ರತಿಷ್ಥಾನ ಹಾಗೂ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ವಿಜೇತರನ್ನು ತೆರೆದ ವಾಹನಕ್ಕೆ ಆಹ್ವಾನಿಸಿ ಪುಷ್ಪಾರ್ಚನೆಯ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ವಾಹನ ಜಾಥಾವು ಪಾಪೆಮಜಲು-ಪೆರಿಗೇರಿ ಮಾರ್ಗವಾಗಿ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಆವರಣಕ್ಕೆ ಪ್ರವೇಶಿಸಿತು. ಶಾಲೆಯ ವಿದ್ಯಾರ್ಥಿಗಳು ಪುಷ್ಪವೃಷ್ಠಿಯೊಂದಿಗೆ ವಿಜೇತ ತಂಡವನ್ನು ಬರಮಾಡಿಕೊಂಡರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ, ದ್ವಾರಕಾ ಪ್ರತಿಷ್ಠಾನದ ವತಿಯಿಂದ ನಡೆದ ರಾಮಾಯಣ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು. ತದನಂತರ ಇದೇ ವೇದಿಕೆಯಲ್ಲಿ ರಾಷ್ಟ್ರಮಟ್ಟದ ಈಶ ಗ್ರಾಮೋತ್ಸವದ ವಿಜೇತ ತಂಡದ ಆಟಗಾರ್ತಿಯರಾದ ದೀಕ್ಷಾ ರೈ ಎ, ಪ್ರಿಯಾ ಬಿ, ಸಾಕ್ಷಿ ರೈ, ಶ್ವೇತಾ ಎಸ್ ರೈ, ರೇಖಾ ರೈ ಪಿಎಸ್, ರಮಾಕಾಂತಿ ರೈ ಬಿ, ಹೇಮಾವತಿ ಸಿಎಚ್, ಆಶಾಲತಾ ಕೆ ಹಾಗೂ ತರಬೇತುದಾರರಾದ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮಾನ್ ಮೋನಪ್ಪ ಎಂ ಇವರಿಗೆ ಶಾಲು, ಹಾರ, ಸನ್ಮಾನ ಪತ್ರ ಹಾಗೂ ಫಲ-ಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಾಲಿಬಾಲ್ ತಂಡದ ಮಾಜಿ ಕಪ್ತಾನರಾದ ಗಣೇಶ್ ರೈ ಮುಂಡಾಸು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಮಾರಂಭದ ಅಧ್ಯಕ್ತೆಯನ್ನು ವಹಿಸಿದ ಗೋಪಾಲಕೃಷ್ಣ ಭಟ್ ಇವರು ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಅವಕಾಶ ನೀಡಿದ ಈಶ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿ, ಈ ಯಶಸ್ಸು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು. ಸಮಾರಂಭದಲ್ಲಿ ಈಶ ಸಂಸ್ಥೆಯ ಸ್ವಾಮಿ ಪುಲಕ, ಸ್ವಾಮಿ ಬೇಕುರ, ಪ್ರೀತೇಶ್ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಿಘ್ನೇಶ್ ಹಿರಣ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಾಜಗೋಪಾಲ್ ಅಭಿನಂದನಾ ಮಾತುಗಳನ್ನಾಡಿದರು. ಪ್ರೌಢ ಶಾಲಾ ವಿಭಾಗದ ಮುಖ್ಯಗುರು ಸುಮನಾ ಬಿ ಮಾತಾಜಿ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಜ್ಯೋತಿ ಮಾತಾಜಿ ಇವರು ವಂದಿಸಿದರು. ಪ್ರೌಢ ಶಾಲಾ ವಿಭಾಗದ ವಿಶ್ವನಾಥ ಬಿ ಕಾರ್ಯಕ್ರಮವನ್ನು ನಿರೂಪಿಸಿದರು.