ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂಭ್ರಮಕ್ಕೆ ತೆರೆ

0

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 10 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ, ಸಂಭ್ರಮದಿಂದ ನಡೆದ ನವರಾತ್ರಿ ಉತ್ಸವ ಅ.1ರಂದು ತೆರೆಕಂಡಿತು.


ನವರಾತ್ರಿಯ ಉತ್ಸವದ ಅಂತಿಮ ದಿನವಾದ ಅ.1ರಂದು ಕ್ಷೇತ್ರದಲ್ಲಿ ವಿಶೇಷವಾಗಿ ಚಂಡಿಕಾ ಯಾಗ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಚಂಡಿಕಾ ಯಾಗ ಪ್ರಾರಂಭ, ಮಕ್ಕಳಿಗೆ ಅಕ್ಷರಾಭ್ಯಾಸ, ಭಜನೆ, ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ.ದುರ್ಗಾಪರಮೇಶ್ವರಿ ಎಚ್.ಕೆ ಮತ್ತು ಮನಸ್ವಿನಿ ವಿ ಇವರಿಂದ ‘ಭಕ್ತಗೀತೆ ಸುಗಮ ಸಂಗೀತ’ ರಾತ್ರಿ ದೇವರಿಗೆ ನಿತ್ಯಪೂಜೆ, ದುರ್ಗಾಪೂಜೆ, ಸಾಮೂಹಿಕ ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಂಡಿತು.


ಸೆ.22ರಂದು ಬೆಳಿಗ್ಗೆ ನಿತ್ಯಪೂಜೆಯ ಬಳಿಕ ನವರಾತ್ರಿ ಉತ್ಸವದ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆತಿತು. ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ದೇವರಿಗೆ ನಿತ್ಯಪೂಜೆ, ದುರ್ಗಾಪೂಜೆ, ಲಲಿತ ಸಹಸ್ರನಾಮ ಪಾರಾಯಣ, ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ನವರಾತ್ರಿಯಲ್ಲಿ ಪ್ರತಿದಿನ ಸಂಜೆ ನಡೆದ ವಿವಿಧ ಕಲಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಮೆರುಗು ನೀಡಿತು. ನವರಾತ್ರಿಯಲ್ಲಿ ವಿಶೇಷವಾಗಿ ಸೆ.30ರಂದು ಆಯುಧ ಪೂಜೆ, ವಾಹನ ಪೂಜೆ, ಅ.1ರಂದು ಅಕ್ಷರಾಭ್ಯಾಸ, ಚಂಡಿಕಾಯಾಗ ನೆರವೇರಿತು.


27ಭಜನಾ ತಂಡಗಳಿಂದ ಭಜನಾ ಸೇವೆ, 9 ಮನೆಯವರು ನವರಾತ್ರಿಯ ಸಮಾರಾಧನೆಯ ಸೇವೆ ಸಲ್ಲಿಸಿ ಕೃತಾರ್ಥರಾದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮಾಜಿ ಶಾಸಕ ಸಂಜೀವ ಮಠಂದೂರು, ನ್ಯಾಯಾಧೀಶರಾದ ಶಿವಣ್ಣ ಎಚ್.ಆರ್., ಸರಿತಾ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ನಾಯಕರುಗಳು ಸೇರಿದಂತೆ ಸಾವಿರಾರು ಮಂದಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.


25ಸಾವಿರ ಮಂದಿಗೆ ಅನ್ನದಾನ:
ನವರಾತ್ರಿಯ 10 ದಿನಗಳ ಉತ್ಸವದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನೆರವೇರಿದ್ದು ಒಟ್ಟು 25,000 ಮಂದಿ ಭಕ್ತಾದಿಗಳು ದೇವರ ಅನ್ನಪ್ರಸಾದ ಸ್ವೀಕರಿಸಿದರು. ಜೊತೆಗೆ ಬೆಳಿಗ್ಗೆ ಹಾಗೂ ಸಂಜೆ ಉಪಹಾರವನ್ನು ಒದಗಿಸಲಾಗಿತ್ತು.


ಸಹಕರಿಸಿದವರಿಗೆ ಗೌರವಾರ್ಪಣೆ:
ಕ್ಷೇತ್ರದಲ್ಲಿ 10 ದಿನಗಳ ಕಾಲ ನಡೆದ ವೈಭವದ ನವರಾತ್ರಿ ಉತ್ಸವ ಯಶಸ್ಸಿಯಾಗಿ ನೆರವೇರುವಲ್ಲಿ ಸಹಕರಿಸಿದ ಅರ್ಚಕ ವೃಂದ, ಸ್ವಚ್ಚತೆ ಸೇರಿದಂತೆ ಎಲ್ಲಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ದುಡಿದ ವಿಶ್ವ ಯುವಕ ವೃಂದ ಚಾರಿಟೇಬಲ್ ಟ್ರಸ್ಟ್ ಕುಂಜೂರು, ದೇವಸ್ಥಾನದ ಖಾಯಂ ಕರಸೇವಕ ಹಾಗೂ ಸ್ವಯಂ ಸೇವಕರಾಗಿ ಸಹಕರಿಸಿದ ಭಕ್ತಾದಿಗಳು, ಮಹಿಳೆಯರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಕುಂಜೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ರೈ, ಸದಸ್ಯರಾದ ರಾಧಾಕೃಷ್ಣ ಕಲ್ಲೂರಾಯ, ಅಭಿಲಾಷ್ ರೈ ಬಂಗಾರಡ್ಕ, ಐತ್ತಪ್ಪ ನಾಯ್ಕ, ಅನುರಾಧ ಕಲ್ಲೂರಾಯ, ಪ್ರಧಾನ ಅರ್ಚಕ ಸದಾನಂದ ರವಿ, ನ್ಯಾಯವಾದಿ ಸ್ವಾತಿ ಜೆ ರೈ, ಈಶ್ವರ ಎಂ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here