ಪುತ್ತೂರು: ಭಾರತ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಸಂಸ್ಥೆಯು ಪ್ರಾರಂಭಗೊಂಡು ಇವತ್ತಿಗೆ 25 ವರ್ಷಗಳು ಪೂರ್ಣಗೊಂಡವು. ಈ ಪ್ರಯುಕ್ತ, ಪುತ್ತೂರು ದೂರವಾಣಿ ಇಲಾಖೆಯ ಕ್ಲಬ್ ರೂಮಿನಲ್ಲಿ, ನಿವೃತ್ತ ನೌಕರರಿಂದ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಅಪರಾಹ್ನ 3ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮೊದಲಿಗೆ ವಿ.ಸಿ. ನಾಯ್ಕ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು಼. ಸಂಧ್ಯಾ ರಾವ್ ಅವರು ಜಾಣ್ಮೆ ಒಗಟುಗಳಿಂದ ಸಭಿಕರ ಬುದ್ಧಿಗೆ ಕಸರತ್ತು ನೀಡಿದರು. ಬಳಿಕ ಕೆಲವು ಆಟಗಳನ್ನು ಆಡಿಸಿ, ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಹಾಡು, ನೃತ್ಯ ಮುಂತಾದ ವೈವಿಧ್ಯಮಯ ಚಟುವಟಿಕೆಗಳಿಂದ ಕಾರ್ಯಕ್ರಮವು ಕಳೆಗಟ್ಟಿತು. ಬಿ.ಎಸ್.ಎನ್.ಎಲ್ ಬೆಳ್ಳಿಹಬ್ಬದ ಮಹೋತ್ಸವದ ಸಲುವಾಗಿ ಇಲಾಖೆಯ ಅಧಿಕಾರಿ ಜ್ಯೋತಿಯವರು ಕೇಕ್ ಕತ್ತರಿಸಿ, ಸಿಹಿ ಹಂಚಿ, ಶುಭ ಹಾರೈಸಿದರು. ನಿವೃತ್ತ ಉದ್ಯೋಗಿಗಳು ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಲಘು ಉಪಹಾರದೊಂದಿಗೆ, ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.