ವಿಟ್ಲ: ಬಂಟ್ವಾಳ ತಾಲೂಕಿನ ಇಡ್ಕಿದು ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ನಾಯ್ಕ್ ಎಸ್ ರವರ ಮೊಮ್ಮಗಳು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ 2 ವರ್ಷ 7 ತಿಂಗಳ ಮೋಶ್ವಿ ಪಿ. ರವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿ ಐಬಿಆರ್ ಅಚೀವರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
10 ಅನ್ವೇಷಕರು, 13 ಸ್ವಾತಂತ್ರ್ಯ ಹೋರಾಟಗಾರರು,26 ವಾಹನಗಳು,18 ಪಕ್ಷಿಗಳು,10 ಆಕಾಶ ವಸ್ತುಗಳು,7 ವೃತ್ತಿಗಳು,17 ದೇಶೀಯ ಪ್ರಾಣಿಗಳು,12 ಕೀಟಗಳು,12 ಕಾಡು ಪ್ರಾಣಿಗಳು,76 ಇತರ ವಸ್ತುಗಳು,26 ತರಕಾರಿಗಳು, 22 ಪಕ್ಷಿಗಳು,10 ಕ್ರಿಯೆಗಳು, 18 ಹೂವುಗಳು, 12 ಹಣ್ಣುಗಳು, ಕನ್ನಡ ವರ್ಣಮಾಲೆಯ ಅಕ್ಷರಗಳು, 1 ರಿಂದ 10 ವರೆಗೆ ಎಣಿಕೆ, 15 ಜೀವಿಗಳ ಧ್ವನಿಗಳ ಅನುಕರಣೆ ಹಾಗೂ 11 ರಾಷ್ಟ್ರೀಯ ಚಿಹ್ನೆಗಳನ್ನು ಮೋಶ್ವಿ ರವರು ತಮ್ಮ ಅಸಾಮಾನ್ಯ ಪ್ರತಿಭೆ ಮತ್ತು ಮನೋವೇಗದ ಮೂಲಕ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2025″ರಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಅವರು ತೋರಿಸಿರುವ ಪ್ರತಿಭೆಯನ್ನು ಗುರುತಿಸಿ ಪ್ರಮಾಣ ಪತ್ರ ನೀಡಿ ಗೌರವಿಸಿದೆ.
ಮೋಶ್ವಿ ಪಿ. ಅವರು ಐಐಟಿ ಬಾಂಬೆಯಲ್ಲಿ ಸಂಶೋಧನಾ ವೃತ್ತಿಯಲ್ಲಿರುವ ಪಿಹೆಚ್ ಡಿ ಪದವೀಧರ ಪ್ರತೀಕ್ ಹಾಗೂ ಉಪನ್ಯಾಸಕಿ ತೇಜಸ್ವಿನಿ ಎಸ್. ದಂಪತಿಯ ಪುತ್ರಿಯಾಗಿದ್ದು, ಬಂಟ್ವಾಳ ತಾಲೂಕು ಇಡ್ಕಿದು ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ನಾಯ್ಕ್ ಎಸ್ ಹಾಗೂ ಗೀತಾ ದಂಪತಿ, ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುಟ್ಟಣ್ಣ ನಾಯ್ಕ್ ಹಾಗೂ ರೇವತಿ ದಂಪತಿಯ ಮೊಮ್ಮಗಳಾಗಿದ್ದಾರೆ.