ಕೊೖಲ: ಕಾಂಗ್ರೆಸ್ ಮುಖಂಡರಿಂದ ಪಶು ವೈದ್ಯಕೀಯ ಕಾಲೇಜು ಕಟ್ಟಡ ಪರಿಶೀಲನೆ

0

ರಾಮಕುಂಜ: ಕಡಬ ತಾಲೂಕಿನ  ಕೊೖಲದಲ್ಲಿ ನಿರ್ಮಾಣವಾಗಿರುವ ಪಶು ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಕೆ.ಪಿ.ಸಿ.ಸಿ. ಸಂಯೋಜಕ, ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಜಿ. ಕೃಷ್ಣಪ್ಪ ರಾಮಕುಂಜ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಅ.9ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಈ ವೇಳೆ ಮಾತನಾಡಿದ ಜಿ.ಕೃಷ್ಣಪ್ಪ ಅವರು, ಕೊಲ ಪಶು ವೈದ್ಯಕೀಯ ಕಾಲೇಜು ಕಾಮಗಾರಿ ಮೇಲ್ನೋಟಕ್ಕೆ ಕಳಪೆಯಾಗಿರುವುದು ಕಂಡು ಬರುತ್ತಿದೆ. ಆದ್ದರಿಂದ ಕಟ್ಟಡ ಕಾಮಗಾರಿಯ ಗುಣಮಟ್ಟದ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಹಾಗೂ ಇಲ್ಲಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಅನುದಾನ ಮಂಜೂರು ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರಿಗೆ ಮನವಿ ಮಾಡುವುದಾಗಿ ಹೇಳಿದರು. ನೂರಾರು ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳ ದುಸ್ಥಿತಿ ತೀರಾ ಬೇಸರ ತರಿಸುವಂತ್ತಿದೆ. ಸರ್ಕಾರದ ಯೋಜನೆಯೊಂದು ಈ ರೀತಿಯಾಗಿ ನೆನೆಗುದಿಗೆ ಬಿದ್ದಿರುವುದು ವ್ಯವಸ್ಥೆಯನ್ನು ಅಣುಕಿಸುವಂತಿದೆ. ಇಲ್ಲಿನ ವಿಶೇಷ ಕರ್ತವ್ಯ ಅಧಿಕಾರಿ ಜೊತೆ ಮಾತನಾಡಿದ್ದು, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆಯ ಕೆಲಸ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಉಳಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯ ವ್ಯವಸ್ಥೆ ಆಗಬೇಕಾಗಿದೆ. ಇದಕ್ಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಇಲಾಖೆ ಸಚಿವರು ಮತ್ತು ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಮಾತನಾಡುವುದಾಗಿ ತಿಳಿಸಿದರು.


ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಬಾನಡ್ಕ, ಕೊೖಲ ಗ್ರಾ.ಪಂ.ಸದಸ್ಯ ನಝೀರ್ ಪೂರಿಂಗ, ಕೆ.ಡಿ.ಪಿ. ಸದಸ್ಯ ಮೋನಪ್ಪ, ಕೊೖಲ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ, ಗ್ಯಾರಂಟಿ ಸಮಿತಿ ಸದಸ್ಯ ಎ.ಕೆ. ಬಶೀರ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿ. ಮಹಮ್ಮದ್ ರಫೀಕ್, ಎಸ್.ಅಬ್ದುಲ್ ರಹಿಮಾನ್, ಹೈದರ್ ಕಲಾಯಿ, ಯುವಕ ಕಾಂಗ್ರೆಸ್‌ನ ರಾಝಿಕ್ ಆತೂರು, ಕರುಣಾಕರ ದೊಡ್ಡ ಉರ್ಕ ರಾಮಕುಂಜ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here