ಕಡಬ: ಕಡಬ ಪೇಟೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಬೇಡ್ಕರ್ ಭವನಕ್ಕೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನಿತಾ ಕುಮಾರಿ ಅ.9 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಂದು ಕೊರತೆಗಳ ಸಭೆಯಲ್ಲಿ ಮುಖಂಡರು ಪ್ರಸ್ತಾವನೆ ಮಾಡಿದಂತೆ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಈಗಿರುವ ಸ್ಥಳದಲ್ಲೇ ನಿರ್ಮಾಣ ಮಾಡಬೇಕು ಒತ್ತಾಯಿಸಲಾಗಿತ್ತು. ಇದರ ಭಾಗವಾಗಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಲಿತಪರ ಸಂಘಟನೆಗಳ ಮುಖಂಡರಾದ ಶಶಿಧರ ಬೊಟ್ಟಡ್ಕ, ವಸಂತ ಕುಬಲಾಡಿ ಸಹಿತ ಪ್ರಮುಖರಿದ್ದರು.
ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ಜಾಗ ಕಾಯ್ದಿರಿಸುವಂತೆ ಮತ್ತು ಈಗ ಇರುವ ಜಾಗದಲ್ಲೇ ಹೊಸ ಭವನ ನಿರ್ಮಿಸುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಹಲವು ಬಾರಿ ಚರ್ಚೆಯಾಗಿತ್ತು. ಹಿಂದಿನ ಸಭೆಯಲ್ಲಿ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ 0.50 ಎಕ್ರೆ ಹತ್ತಿರದ ಸರ್ಕಾರಿ ಜಾಗವನ್ನು ಕಾದಿರಿಸುವಂತೆ ಒತ್ತಾಯಿಸಿದ್ದರು. ಆದರೆ ಈಗ ಇರುವ ಅಂಬೇಡ್ಕರ್ ಭವನದ ಬಳಿ ಸರ್ಕಾರಿ ಜಮೀನು ಇಲ್ಲವೆಂದು ತಹಶೀಲ್ದಾರ್ ಹೇಳಿದ್ದರು.
ಹೀಗಾಗಿ ಕೋಡಿಂಬಾಳ ಗ್ರಾಮದಲ್ಲಿ ಸರ್ವೆ ನಂ 243/1 ಎಪಿ2ರಲ್ಲಿ 0.30 ಎಕ್ರೆ ಜಮೀನು ಕಾಯ್ದಿರಿಸಿರುವುದಾಗಿ ಹೇಳಿದ್ದರು. ಇದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿ ಮರು ಸರ್ವೆ ಮಾಡಿ ಅಂಬೇಡ್ಕರ್ ಭವನದ ಬಳಿಯೇ ಜಾಗ ಕಾಯ್ದಿರಿಸುವಂತೆ ಒತ್ತಾಯಿಸಲಾಗಿತ್ತು. ಇತ್ತೀಚೆಗೆ ನಡೆದ ಕುಂದು ಕೊರತೆ ಸಭೆಯಲ್ಲೂ ಭಾರೀ ಚರ್ಚೆಯಾಗಿತ್ತು.