ಪುತ್ತೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ. ಆರ್. ಗವಾಯಿ ಮೇಲೆ ವಕೀಲ ರಾಜೇಶ್ ಕಿಶೋರ್ ಧರಿಸಿದ ಶೂ ಎಸೆದಿರುವುದು ಖಂಡನೀಯವಾಗಿದೆ ಎಂದು ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಘ ಸಮಿತಿ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಈ ಕೃತ್ಯ ಭಾರತದ ಸಂವಿಧಾನದ ಮೇಲೆ ನಡೆಸಿದ ದಾಳಿಯಾಗಿದೆ. ದಲಿತರೊಬ್ಬರು ಮುಖ್ಯ ನ್ಯಾಯ ಮೂರ್ತಿಯ ಪೀಠದಲ್ಲಿ ಕುಳಿತು ನ್ಯಾಯ ನೀಡುವುದನ್ನು ಒಪ್ಪದ ಮನೋಸ್ಥಿತಿಗಳು ಇಂದಿಗೂ ಇರುವುದಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಆದೇಶಿಸುತ್ತಿಲ್ಲ ಮತ್ತು ಗವಾಯಿಯವರು ದಲಿತ ಸಮುದಾಯಕ್ಕೆ ಸೇರಿದವರೆಂಬ ದ್ವೇಷ ಭಾವನೆಯಿಂದ ಈ ಕೃತ್ಯ ಎಸಗಿದ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಸಂಘಟನಾ ಸಂಚಾಲಕ ಪಿ. ಕೆ. ರಾಜು ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಸಂಚಾಲಕ ಪದ್ಮನಾಭ ಗರ್ಗಾಡಿ, ಪುತ್ತೂರು ತಾಲೂಕು ಮಾಜಿ ಸಂಚಾಲಕ ಗಣೇಶ್ ಕರೆಕ್ಕಾಡು, ಕಡಬ ವಲಯ ಸಂಚಾಲಕ ಕಮಲಾಕ್ಷ ಕಡಬ ಉಪಸ್ಥಿತರಿದ್ದರು.
ಸಂಘಟನೆ ನೋಂದಣಿ ಸಂಖ್ಯೆ ಬಳಕೆ ಮಾಡಿದರೆ ಕ್ರಮ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ 47/74-75 ರ ಸಮಿತಿಯು ಪ್ರಸ್ತುತ ಎಂ ಗುರುಮೂರ್ತಿ ಶಿವಮೊಗ್ಗ ಅವರ ನಾಯಕತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ರಚನೆ ಮಾಡಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಸಂಘನೆಯ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ಬೇರೆ ಸಂಘಟನೆಯವರು ಬಳಕೆ ಮಾಡಬಾರದು ಎಂಬ ಆದೇಶವೂ ಇದೆ. ಒಂದು ವೇಳೆ ಬಳಕೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣಪ್ಪ ಸಣ್ಣಾಜೆ ಎಚ್ಚರಿಕೆ ನೀಡಿದ್ದಾರೆ.