





ಉಪ್ಪಿನಂಗಡಿ: ಪುರಾಣ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯ ನೇತ್ರಾವತಿ- ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಉದ್ಭವ ಶಿವಲಿಂಗಕ್ಕೆ ಈ ಬಾರಿ ವಿಶೇಷವಾಗಿ ಡಿ. 2 ರ ಮಂಗಳವಾರದಂದು ಸಂಜೆಯಿಂದ ಅಭಿಷೇಕಗಳಾದಿಯಾಗಿ ಶಿವಪೂಜೆ ನಡೆಯಲಿದೆ ಎಂದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಕೃಷ್ಣ ನಾೖಕ್ ತಿಳಿಸಿದರು.


ದೇವಾಲಯದಲ್ಲಿ ಗುರುವಾರದಂದು ಕರೆಯಲಾದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದೆರೆಡು ವರ್ಷದಲ್ಲಿ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟನ್ನು ಕಟ್ಟಿದ ಪರಿಣಾಮ ಅದರ ಹಿನ್ನೀರು ನದಿಯಲ್ಲಿ ಶೇಖರಣೆಗೊಳ್ಳುತ್ತಿದ್ದು, ಇದರಿಂದ ಉದ್ಭವಲಿಂಗವು ಜಲಾವೃತವಾಗುತ್ತಿದೆ. ಇದರ ಪರಿಣಾಮ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಲು ಅಸಾಧ್ಯವಾಗಿತ್ತು. ಈ ಬಾರಿ ಮುಂಬರುವ ಮಖೆ ಜಾತ್ರೆಯ ವರೆಗೆ ಅಣೆಕಟ್ಟಿನ ಗೇಟನ್ನು 4 ಮೀಟರ್ ಬದಲಾಗಿ 2 ಮೀಟರ್ ಗೆ ತಗ್ಗಿಸಿ ಜಾತ್ರೋತ್ಸವ ಮುಗಿದ ಬಳಿಕ ಅಣೆಕಟ್ಟಿನ ಗೇಟನ್ನು 4 ಮೀಟರ್ ಗೆ ಏರಿಸಿ ಎಂದು ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಸಕಾರಾತ್ಮಕ ಸ್ಪಂದನ ದೊರೆತರೆ ಈ ಬಾರಿ ಗತಕಾಲದಂತೆ 3 ಮಖೆ ಜಾತ್ರೆಗೂ ಉದ್ಬವಲಿಂಗಕ್ಕೆ ಪೂಜೆ ಪುನಸ್ಕಾರಗಳು ನಡೆಸಬಹುದಾಗಿದೆ. ಈ ಮಧ್ಯೆ ಊರಿನ ಕೆಲ ಭಕ್ತಾದಿಗಳ ಸಹಕಾರದೊಂದಿಗೆ ಉದ್ಭವಲಿಂಗದ ಮರಳು ತೆಗೆದು ಉದ್ಭವಲಿಂಗದ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಇದರ ಕಾರಣಕ್ಕೆ ಉದ್ಭವಲಿಂಗಕ್ಕೆ ವಿಶೇಷ ಅಭಿಷೇಕ ಹಾಗೂ ಶಿವ ಪೂಜೆಯನ್ನು ನಡೆಸಲು ಸಂಕಲ್ಪಿಸಿ ಕ್ಷೇತ್ರದ ತಂತ್ರಿಗಳಿಂದ ಒಪ್ಪಿಗೆಯನ್ನು ಪಡೆಯಲಾಗಿದೆ. ಅದರಂತೆ ಡಿಸೆಂಬರ್ 2ರಂದು ಸಂಜೆ 6 ಗಂಟೆಯಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರವರ ಭಾಗೀಧಾರಿಕೆಯೊಂದಿಗೆ ದೇವಾಲಯದ ಪ್ರಧಾನ ಅರ್ಚಕರಾದಿಯಾಗಿ ಊರಿನ ಸಮಸ್ತ ಭಕ್ತಾದಿಗಳೊಂದಿಗೆ ಉದ್ಭವಲಿಂಗಕ್ಕೆ ವಿಶೇಷ ಶಿವ ಪೂಜೆ, ರುದ್ರಪಾರಾಯಣ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ ಹಾಗೂ ಜಲಾಭಿಷೇಕ ನಡೆಯಲಿರುವುದು. ಬಳಿಕ ಪ್ರಸಾದ ರೂಪವಾಗಿ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸೀಮೆಯ ಎಲ್ಲಾ ಭಕ್ತಾದಿಗಳು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವೆಂಕಪ್ಪ ಪೂಜಾರಿ ಮರುವೇಲು, ಡಾ. ರಮ್ಯ ರಾಜಾರಾಮ್, ದೇವಿದಾಸ ರೈ, ಸೋಮನಾಥ ಉಪಸ್ಥಿತರಿದ್ದರು.












