ನಿಡ್ಪಳ್ಳಿ: ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಮತ್ತು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ಬ್ಯಾಂಕ್ ಆಫ್ ಬರೋಡಾ ಸಂಯೋಜಿತ) ಇವರಿಂದ ಪರಿಶಿಷ್ಟ ಪಂಗಡದ ಹೈನುಗಾರರಿಗೆ ಮಾಹಿತಿ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮ ತಂಬುತ್ತಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ ಅ.13 ರಂದು ನಡೆಯಿತು.
ಪಾಣಾಜೆ ಪಶುವೈದ್ಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಪಿ. ಪ್ರಕಾಶ್ ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ವಿವರಿಸಿದರು.
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಆರ್ಥಿಕ ಸ್ವಾವಲಂಬನೆ ಗಳಿಸುವ ಬಗ್ಗೆ ಮತ್ತು ಬ್ಯಾಂಕಿನ ವಿವಿಧ ಯೋಜನೆಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮೇವಿನ ಬೆಳೆಗಳ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಡಾ.ಶಿವಕುಮಾರ್ (COFS 31) ಹೊಸ ತಳಿಯ ಬೀಜ ವಿತರಿಸಿ ಅದನ್ನು ಬೆಳೆಯುವ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಟಿ.ಜೆ ರಮೇಶ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಪೋಷಣೆ ಮತ್ತು ಶರೀರ ಶಾಸ್ತ್ರ ಸಂಸ್ಥೆಯ ವತಿಯಿಂದ ಪ.ಪಂಗಡದ ಉಪ ಯೋಜನೆಯಡಿ ಹೈನುಗಾರರಿಗೆ ಹಾಲಿನ ಕ್ಯಾನುಗಳನ್ನು ವಿತರಿಸಲಾಯಿತು. ತಂಬುತ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ತೇಜಸ್ವಿನಿ ಮತ್ತು ಪಶುಸಖಿ ತೇಜಸ್ವಿನಿ ಉಪಸ್ಥಿತರಿದ್ದರು.