@ಯೂಸುಫ್ ರೆಂಜಲಾಡಿ
ಪುತ್ತೂರು: ಶಾಸಕ ಅಶೊಕ್ ಕುಮಾರ್ ರೈ ನೇತೃತ್ವದಲ್ಲಿ ಅ.20ರಂದು ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಈಗಾಗಲೇ ಅಬ್ಬರದ ಸಿದ್ದತೆ, ಪ್ರಚಾರ ನಡೆಯುತ್ತಿದೆ, ಈ ಬಾರಿ ಸಿ.ಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಪ್ರಚಾರದ ಭರಾಟೆ ಇನ್ನಷ್ಟು ಹೆಚ್ಚಾಗಿದೆ.
ಎಲ್ಲಾ ಪ್ರಚಾರಗಳ ಮಧ್ಯೆ ಗ್ರಾಮೀಣ ಭಾಗದ ಯುವಕರು ಮತ್ತು ಮಕ್ಕಳು ಸೇರಿಕೊಂಡು ಅಶೋಕ ಜನಮನ ಕಾರ್ಯಕ್ರಮದ ಬಗ್ಗೆ ಮಾಡಿರುವ ‘ರೀಲ್ಸ್’ವೊಂದು ಭಾರೀ ವೈರಲ್ ಆಗಿದ್ದು ಜನ ಮೆಚ್ಚುಗೆ ಪಡೆದುಕೊಂಡಿದೆ.
ಅರಿಯಡ್ಕ ಗ್ರಾಮದ ಕೌಡಿಚ್ಚಾರು ನಿಶು ಸ್ಟುಡಿಯೋದ ಮಾಲಕ ನವೀನ್ ಕೌಡಿಚ್ಚಾರು ನೇತೃತ್ವದಲ್ಲಿ ಮಾಡಿರುವ ತುಳು ರೀಲ್ಸ್‌ನ್ನು ‘ತುಳುನಾಡ ಮೇಸ್ತ್ರಿ’ ಎಂಬ ಪೇಜ್‌ಗೆ ಅಪ್ಲೋಡ್ ಮಾಡಲಾಗಿದೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಗಿಟ್ಟಿಸಿಕೊಂಡಿರುವ ಈ ರೀಲ್ಸ್‌ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೀಲ್ಸ್‌ನಲ್ಲಿ ಏನಿದೆ..?
ರೀಲ್ಸ್‌ನಲ್ಲಿ ಪಾತ್ರೆಯ ಬಗ್ಗೆ ಗಮನ ಸೆಳೆಯಲಾಗಿದೆ. ಒಬ್ಬರು ಪಾತ್ರೆಗಳನ್ನು ತಲೆಯಲ್ಲಿ ಹೊತ್ತುಕೊಂಡು ಮನೆ ಮನೆಗೆ ಮಾರಾಟ ಮಾಡುತ್ತಾ ಬರುತ್ತಾರೆ. ಆಗ ಮನೆಯೊಂದರಲ್ಲಿದ್ದ ಮಕ್ಕಳು ಪಾತ್ರೆಯ ಪೈಕಿ ಊಟದ ತಟ್ಟೆ ಬೇಕೆಂದು ಹಠ ಹಿಡಿಯುತ್ತಾ ತಮ್ಮ ತಾಯಿಯನ್ನು ಕರೆದು ಊಟದ ತಟ್ಟೆ ತೆಗೆದುಕೊಡಿ, ಮನೆಯಲ್ಲೂ, ಶಾಲೆಯಲ್ಲೂ ಊಟಕ್ಕೆ ಆಗಬಹುದು, ಖರೀದಿ ಮಾಡಲು ಅಪ್ಪನಿಗೆ ಹೇಳಿ ಎಂದು ಹೇಳುತ್ತಾರೆ, ಆಗ ಆ ತಾಯಿ ತನ್ನ ಗಂಡನಿಗೆ ಗದರಿಸುವ ರೀತಿಯಲ್ಲಿ ‘ಮಕ್ಕಳು ಹೇಳುವುದು ಕೇಳುವುದಿಲ್ವಾ? ನಮ್ಮ ಮನೆಯಲ್ಲಿ ಬಟ್ಟಲು ಇಲ್ಲ, ಮಕ್ಕಳಿಗೆ ತೆಗೆದುಕೊಡಿ ಎನ್ನುತ್ತಾರೆ. ಇದನ್ನು ಕೇಳಿಸಿಕೊಂಡ ಮಕ್ಕಳ ಅಪ್ಪ ಏದುಸಿರು ಬಿಡುತ್ತಾ ಒಂದು ವಾರದಿಂದ ಕೆಲಸ ಇಲ್ಲ, ನನ್ನಲ್ಲಿ ದುಡ್ಡಿಲ್ಲ, ಮನೆಯಲ್ಲಿರುವ ಹಳೆಯ ಊಟದ ತಟ್ಟೆಗೆ ಪೈಂಟ್ ಕೊಡುವ ಎನ್ನುತ್ತಾರೆ. ದಂಪತಿಯ ಬೊಬ್ಬೆ ಕೇಳಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು(ನವೀನ್ ಕೌಡಿಚ್ಚಾರ್) ಅಲ್ಲಿಗೆ ಬಂದು ನಿಮ್ಮ ಗಲಾಟೆ ರಸ್ತೆಗೆ ಕೇಳುತ್ತಿದೆ, ಏನು ಜಗಳ ಎಂದು ಕೇಳಿದಾಗ, ಮನೆಯ ಯಜಮಾನ ನಡೆದ ಘಟನೆ ವಿವರಿಸುತ್ತಾರೆ. ಆಗ ಆಶ್ಚರ್ಯಗೊಂಡ ವ್ಯಕ್ತಿ, ನಿಮಗೆ ವಿಷಯವೇ ಗೊತ್ತಿಲ್ವಾ? ಅ.೨೦ರಂದು ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಅಶೋಕ ಜನಮನ ಕಾರ್ಯಕ್ರಮ ಇದೆ, ಅಲ್ಲಿ ಲಕ್ಷಕ್ಕಿಂತ ಅಧಿಕ ಮಂದಿ ಭಾಗವಹಿಸುತ್ತಾರೆ, ಅಲ್ಲಿಗೆ ಹೋದವರಿಗೆಲ್ಲ ಊಟದ ತಟ್ಟೆ, ಗ್ಲಾಸ್, ಬೌಲ್, ಶಾಲ್ ಎಲ್ಲ ಉಚಿತವಾಗಿ ಸಿಗ್ತದೆ, ನಿಮಗೆ ಹೋಗಲು ಹಣ ಇಲ್ಲದಿದ್ದರೆ ಸ್ಥಳೀಯ ಲೀಡರ್‌ಗಳಲ್ಲಿ ಹೇಳಿ ಅಲ್ಲಿಗೆ ಹೋಗುವ ವ್ಯವಸ್ಥೆ ಮಾಡ್ತಾರೆ, ಅಶೋಕ್ ರೈ ಒಬ್ಬ ವಿಶೇಷ ಜನ, ಅವರ ಬಗ್ಗೆ ನೀವು ಸ್ವಲ್ಪ ತಿಳ್ಕೊಳ್ಳಿ…ಎಂದು ಹೇಳ್ತಾರೆ. ಇದು ರೀಲ್ಸ್‌ನಲ್ಲಿರುವ ಮುಖ್ಯವಾದ ಹಾಸ್ಯಭರಿತ ವಿಚಾರ.
ರೀಲ್ಸ್ ತಂಡದಲ್ಲಿದ್ದವರು:
ನವೀನ್ ಕೌಡಿಚ್ಚಾರು ನಿರ್ದೇಶನದಲ್ಲಿ ಮಾಡಿರುವ ರೀಲ್ಸ್ ರಚನೆಯನ್ನು ಗುರುರಾಜ್ ರೈ ಕೈಕಂಬ ಮಾಡಿದ್ದು, ಸಮರ್ಥ್ ರೈ ಪಡುಮಲೆ, ಮನಿತ್ ರೈ ಕೊಯಿಲ ಎಡಿಟಿಂಗ್ ಮಾಡಿದ್ದಾರೆ. ಪ್ರಮುಖವಾಗಿ ಅನಿಲ್ ಕೌಡಿಚ್ಚಾರು, ಸಾನ್ವತ್ ರೈ ಪಡುಮಲೆ, ದಿವಿತ್ ರೈ ಪಡುಮಲೆ ಕೊಯಿಲ, ಪೂರ್ವಿಕ್ ರೈ ಪಡುಮಲೆ ಕೊಯಿಲ, ವಿವೇಕ್ ಕೋಡಿಯಡ್ಕ, ವರುಣ್ ಕೋಡಿಯಡ್ಕ, ತೇಜಸ್ ಕೊಯಿಲ ನಟಿಸಿದ್ದು, ಶ್ರೀಕೃಷ್ಣ ಮೆಡಿಕಲ್‌ನ ಜನಾರ್ದನ ಪೂಜಾರಿ ಹಾಗೂ ಪ್ರಕಾಶ್ ರೈ ಕೊಯಿಲ ಸಹಕಾರ ನೀಡಿದ್ದಾರೆ. ‘ತುಳುನಾಡ ಮೇಸ್ತ್ರಿ’ ಎನ್ನುವ ಪೇಜ್‌ನಲ್ಲಿ ಕಳೆದ ಒಂದು ವರ್ಷದಿಂದ ತುಳು ಹಾಸ್ಯಭರಿತ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದು, ತಮ್ಮದೇ ಆದ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಶಾಸಕ ಅಶೊಕ್ ರೈ ಅವರ ಬಡವರ ಪರವಾದ ಕಾಳಜಿ ಮತ್ತು ಬಡವರನ್ನು ಕರೆದು ಮಾತನಾಡುವ ಅವರ ಗುಣ ನಮಗೆಲ್ಲಾ ಬಹಳ ಇಷ್ಟ, ಅದೆಷ್ಟೋ ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ. ಅಶೋಕ್ ರೈ ಮೇಲಿನ ಅಭಿಮಾನದಿಂದ ಅವರ ಜನಮನ ಕಾರ್ಯಕ್ರಮಕ್ಕೆ ನಮ್ಮಿಂದಾಗುವ ಸಣ್ಣ ಪ್ರಚಾರ ಕೊಡುವ ಎಂಬ ಉದ್ದೇಶದಿಂದ ರೀಲ್ಸ್ ಮಾಡಿದ್ದೇವೆ. ರೀಲ್ಸ್ ರಿಲೀಸ್ ಆದ ಬಳಿಕವೇ ಶಾಸಕರಿಗೂ ಗೊತ್ತಾಗಿದ್ದು. ಶಾಸಕರ ಸಹಿತ ಹಲವು ಪ್ರಮುಖರು ನಮಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಫೇಸ್‌ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂನಲ್ಲಿ ಈಗಾಗಲೇ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ನಮ್ಮ ತಂಡದವರ ಪರಿಶ್ರಮಕ್ಕೆ ಫಲ ಸಿಕ್ಕಿದೆ.
-ನವೀನ್ ಕೌಡಿಚ್ಚಾರು, ರೀಲ್ಸ್ ನಿರ್ದೇಶಕರು

ಶಾಸಕರಿಂದ ಮೆಚ್ಚುಗೆ:
ಅಶೋಕ ಜನಮನ ಕುರಿತು ಯುವಕರು ಮಾಡಿರುವ ರೀಲ್ಸ್‌ನ್ನು ಶಾಸಕ ಅಶೋಕ್ ರೈ ವೀಕ್ಷಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೀಲ್ಸ್ ನಿರ್ದೇಶಕ ನವೀನ್ ಕೌಡಿಚ್ಚಾರು ಅವರಿಗೆ ಕರೆ ಮಾಡಿರುವ ಶಾಸಕರು ಅವರಿಗೆ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು ನೀವು ನನ್ನ ಮೇಲಿನ ಅಭಿಮಾನದಿಂದ ಮಾಡಿರುವ ರೀಲ್ಸ್ ನನಗೆ ಇಷ್ಟವಾಗಿದೆ ಎಂದು ತಿಳಿಸಿದ್ದಾರೆ ಎಂದು ನವೀನ್ ಕೌಡಿಚ್ಚಾರ್ ತಿಳಿಸಿದ್ದಾರೆ.