ರಾಮಕುಂಜ; ಯಾಕೂಬ್ ಮೇಸ್ತ್ರಿಯವರಿಂದ ಕಾರ್ಮಿಕರಿಗೆ ದೀಪಾವಳಿ ಪ್ರಯುಕ್ತ ಅಕ್ಕಿ ವಿತರಣೆ

0

ರಾಮಕುಂಜ: ಇಲ್ಲಿನ ಹಲ್ಯಾರ ನಿವಾಸಿ ಯಾಕೂಬ್ ಮೇಸ್ತ್ರಿಯವರು ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬದ ಪ್ರಯುಕ್ತ ಸುಮಾರು 30 ಮಂದಿ ಕಾರ್ಮಿಕರಿಗೆ ಅಕ್ಕಿ ವಿತರಣೆ ಮಾಡಿದರು.

ಅ.19ರಂದು ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಮುಂಭಾಗದ ಶ್ರೀ ರಾಮಕುಂಜೇಶ್ವರ ಸೌಧದ ವಠಾರದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯಂ.ಸತೀಶ್ ಭಟ್ ಅವರು ಮಾತನಾಡಿ, ಯಾಕೂಬ್‌ರವರ ಧಾರ್ಮಿಕ ಸಾಮರಸ್ಯದ ಜೀವನದ ಬಗ್ಗೆ ಉಲ್ಲೇಖಿಸಿ ಮಾನವೀಯತೆಯ ಸಾಕಾರ ಮೂರ್ತಿಯಾಗಿರುವ ಯಾಕೂಬ್‌ರವರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅವರು ಇನ್ನು ಮುಂದೆಯೂ ಇದೇ ರೀತಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಎಲ್ಲ ವರ್ಗದವರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಲೆಂದು ಹಾರೈಸಿದರು. ನಿವೃತ್ತ ಶಿರಸ್ತೇದಾರ ಆದಂ ಹೇಂತಾರ್ ಶುಭಹಾರೈಸಿದರು. ಆತೂರು ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಕಾರ್ಯದರ್ಶಿ ಮಹಮ್ಮದ್ ರಫೀಕ್, ಉಳ್ಳಾಲ ಅಳೆಕ್ಕಳ ಮದನಿ ಪ್ರೌಢಶಾಲೆಯ ಶಿಕ್ಷಕ ಮೋನಪ್ಪ ಕೆ.ಹೆಚ್., ನಿವೃತ್ತ ಎಎಸ್‌ಐ ಗಿರಿಯಪ್ಪ ಗೌಡ, ತಿರುಮಲೇಶ್ವರ ಭಟ್ ನೂಜಿಲ, ದುರ್ಗಾಪ್ರಸಾದ್ ಸುಣ್ಣಾಲ, ಮೋನಪ್ಪ ಕುಲಾಲ್ ಬೊಳ್ಳರೋಡಿ, ಯಾಕೂಬ್ ಮೇಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪತ್ರಕರ್ತ ನಝೀರ್ ಕೊಯಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲೀಂ ಹಲ್ಯಾರ ಸ್ವಾಗತಿಸಿ, ನಿರೂಪಿಸಿದರು. ಝೈನ್ ಆತೂರು, ಹಮೀದ್ ಕುಂಡಾಜೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸನ್ಮಾನ;
ನಿವೃತ್ತ ಶಿರಸ್ತೇದಾರ ಆದಂ ಹೇಂತಾರು ಹಾಗೂ ನಿವೃತ್ತ ಎಎಸ್‌ಐ ಗಿರಿಯಪ್ಪ ಗೌಡ ಅವರನ್ನು ಯಾಕೂಬ್ ಮೇಸ್ತ್ರಿ ಅವರ ಪರವಾಗಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುಮಾರು 30 ಮಂದಿ ಕಾರ್ಮಿಕರಿಗೆ ಅಕ್ಕಿ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here