ಕಡಬ: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ, ಆಲಂಕಾರು ಗ್ರಾಮ ಪಂಚಾಯತ್ನ ಸಹಕಾರದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಎಲುಬು ಮತ್ತು ಮೂಳೆ ಚಿಕಿತ್ಸಾ ವಿಭಾಗ, ಕಣ್ಣಿನ ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ರೋಗ ವಿಭಾಗದ ತಜ್ಞ ವೈದ್ಯರುಗಳಿಂದ ಎಂಡೋಸಲ್ಫಾನ್ ಸಂತ್ರಸ್ತರ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ಹಾಗೂ ನಶಾಮುಕ್ತ ಅಭಿಯಾನದ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ಅ.21ರಂದು ಆಲಂಕಾರು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
ವೈದ್ಯರು ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಆಲಂಕಾರು, ಪೆರಾಬೆ ಮತ್ತು ಕುಂತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂಡೋಪೀಡಿತರು ಹಾಗೂ ವಿಶೇಷ ಚೇತನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಆಲಂಕಾರು ಮತ್ತು ಕುಂತೂರು ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ಬೆನ್ಸಿ, ರಮ್ಯ, ಪ್ರಾಥಮಿಕ ವಿಶೇಷಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಆಲಂಕಾರು ಗ್ರಾ.ಪಂ.ನ ಮೋನಪ್ಪ ಬರೆಪುದೇಲು, ಪೆರಾಬೆ ಗ್ರಾ.ಪಂ.ನ ಮುತ್ತಪ್ಪ ಬಿ., ಆರೋಗ್ಯ ಇಲಾಖೆಯ ಆಲಂಕಾರು, ಪೆರಾಬೆ, ಕುಂತೂರು ಗ್ರಾಮದ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ನಶಾಮುಕ್ತ ಅಭಿಯಾನದ ಪ್ರತಿಜ್ಞೆ;
ಕೇಂದ್ರ ಸರಕಾರದ ನಶಾಮುಕ್ತ ಅಭಿಯಾನದಡಿಯಲ್ಲಿ ನಾವು ಸಹ ಮಾದಕ ವ್ಯಸನ ಮುಕ್ತರಾಗಬೇಕು. ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತಗೊಳಿಸಲು ದೃಢ ನಿರ್ಧಾರ ಮಾಡುವುದೆಂದು ಹಾಗೂ ನನ್ನ ದೇಶವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಸಾಧ್ಯವಿರುವ ಎಲ್ಲವನ್ನು ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಲಾಯಿತು.