ಐದೂವರೆ ಗಂಟೆಯಲ್ಲಿ 23 ನೃತ್ಯ ಪ್ರದರ್ಶನಗಳು
ದೀಪಕ್ ಕುಮಾರ್ ಅವರು ಪುತ್ತೂರಿಗೆ ನೃತ್ಯದ ವಾತಾವರಣ ಕೊಡುವವರು – ಈಶ್ವರ ಬೆಡೇಕರ್
ದೇವರು ಕೊಟ್ಟ ಅವಕಾಶವನ್ನು ಬಳಸಿಕೊಳ್ಳಿ – ವಿಜಯಲಕ್ಷ್ಮೀ ಶೆಣೈ
ಸಾಮಾಜಿಕ ಚಟುವಟಿಕೆ ಮೂಲಕ 30ನೇ ವರ್ಷದ ಸಂಭ್ರಮ – ವಿ.ದೀಪಕ್ ಕುಮಾರ್
ಪುತ್ತೂರು: ಮುಂದಿನ ವರ್ಷ 30 ಸಂಭ್ರಮದಲ್ಲಿರುವ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ 29ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಂಗೀತ- ನೃತ್ಯ ಸಂಭ್ರಮವು ಅ.26ರಂದು ಸಂಜೆ ಜೈನ ಭವನದಲ್ಲಿ ನಡೆಯಿತು. ಸಂಜೆ ಆರಂಭಗೊಳ್ಳುವ ಕಾರ್ಯಕ್ರಮಕ್ಕೆ ಮಧ್ಯಾಹ್ನವೇ ಸಭಾಂಗಣ ತುಂಬೆಲ್ಲ ವಿದ್ಯಾರ್ಥಿಗಳ ಕಾಲ್ಗಳ ಗೆಜ್ಜೆನಾದ ಕೇಳುತ್ತಿತ್ತು.

ಒಂದೇ ಕಲಾ ಶಾಲೆಯಡಿಯಲ್ಲಿ ಸಂಗೀತ ಮತ್ತು ಭರತನಾಟ್ಯ ತರಗತಿಗಳನ್ನು ನೀಡುತ್ತಿರುವ ಸಂಸ್ಥೆ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಶಿಷ್ಯಂದಿರಿಂದ ಆರಂಭದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಬಳಿಕ ನೃತ್ಯ ಸಂಭ್ರಮ ಪ್ರದರ್ಶನಗೊಂಡಿತು. ಸುಮಾರು ಐದೂವರೆ ಗಂಟೆ ಸಂಸ್ಥೆಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಿಂದ ಸುಮಾರು 23 ವಿವಿಧ ಭರತನಾಟ್ಯ ಪ್ರದರ್ಶನಗಳು ಪ್ರಸ್ತುತಿಗೊಂಡವು. ಸಂಸ್ಥೆಯಿಂದ ನೃತ್ಯಾಭ್ಯಾಸ ಮಾಡಿ ಪರವೂರಿನಲ್ಲಿರುವ ಕಲಾವಿದರು ಆನ್‌ಲೈನ್ ಮೂಲಕ ನೃತ್ಯ ಕಲಿತ ತಾಯಂದಿರು ಕೂಡಾ ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದ ಕೊನೆಯ ವಂದೆ ಮಾತರಂ ನೃತ್ಯ ಪ್ರದರ್ಶನ ಎಲ್ಲರ ಮನಮುಟ್ಟುವಂತಿತ್ತು.
ದೀಪಕ್ ಕುಮಾರ್ ಅವರು ಪುತ್ತೂರಿಗೆ ನೃತ್ಯದ ವಾತಾವರಣ ಕೊಡುವವರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ನಿವೃತ್ತ ಬ್ಯಾಂಕ್ ನೌಕರರಾಗಿರುವ ಈಶ್ವರ ಬೆಡೇಕರ್ ಅವರು ಮಾತನಾಡಿ, ನಾನು ಕಂಡುಕೊಂಡಂತೆ ದೀಪಕ್ ಕುಮಾರ್ ಅವರು ನೃತ್ಯ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದುಕೊಂಡಿದ್ದಾರೆ. ಇವತ್ತು ಪುತ್ತೂರಿಗೆ ಪುತ್ತೂರು ನರಸಿಂಹ ನಾಯಕ್ ಅವರು ಸಂಗೀತ ಕ್ಷೇತ್ರದಲ್ಲಿ ಒಂದು ಒಳ್ಳೆಯ ಹೆಸರು ತಂದಿದ್ದಾರೆ. ಅದೇ ರೀತಿ ನೃತ್ಯ ಕ್ಷೇತ್ರದಲ್ಲಿ ದೀಪಕ್ ಕುಮಾರ್ ಅವರು ಒಳ್ಳೆಯ ಹೆಸರನ್ನು ತಂದಿದ್ದಾರೆ. ಇವರ ಜೊತೆ ಇವರ ಪತ್ನಿ ಪ್ರೀತಿಕಲಾ, ಸಹೋದರ ಗಿರೀಶ್ ಕೂಡಾ ಉತ್ತಮ ಕಲಾವಿದರಾಗಿ ಮೂಡಿ ಬಂದಿದ್ದಾರೆ. ಇವರು ಪುತ್ತೂರಿಗೆ ನೃತ್ಯದ ವಾತಾವರಣ ಕೊಟ್ಟಿದ್ದಾರೆ. ಜೊತೆಗೆ ಪ್ರಸ್ತುತವಾಗಿ ಪರಿಸರ ಸಂರಕ್ಷಣೆಯ ಜೊತೆ ಉತ್ತಮ ಪರಿಸರದ ವಾತಾವರಣವನ್ನು ಕೊಡುತ್ತಿದ್ದಾರೆ ಎಂದರು.
ದೇವರು ಕೊಟ್ಟ ಅವಕಾಶವನ್ನು ಬಳಸಿಕೊಳ್ಳಿ
ಅಭ್ಯಾಗತರಾಗಿ ಭಾಗವಹಿಸಿದ ಯೇಳ್ತಿಮಾರ್ ಟ್ರೇಡರ್‍ಸ್ ಆಂಡ್ ಇಂಡಸ್ಟ್ರೀಸ್‌ನ ಮಾಲಕಿ ವಿಜಯಲಕ್ಷ್ಮೀ ಶೆಣೈ ಅವರು ಮಾತನಾಡಿ ನಾನು ಎಷ್ಟೋ ಸಾಂಸ್ಕೃತಿಕ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಿದ್ದೇನೆ. ಆದರೆ ಇಂತಹ ಕಲಾನೈಪುಣ್ಯತೆಯ ಕಾರ್ಯಕ್ರಮ ನೋಡಿದ್ದು ಸಂತೋಷ ತಂದಿದೆ. ದೀಪಕ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿದ ನೃತ್ಯದಲ್ಲಿ ವಿದ್ಯಾರ್ಥಿಗಳ ಮುಖವರ್ಣಿಕೆ, ಆಭರಣ, ಡ್ರೆಸ್ ಎಲ್ಲವೂ ಫರ್‌ಪೆಕ್ಟ್ ಆಗಿತ್ತು. ವಿದ್ಯಾರ್ಥಿಗಳು ಕೂಡಾ ತಮ್ಮ ಶೈಕ್ಷಣಿಕ ವಿಚಾರದ ಜೊತೆ ನೃತ್ಯ,ಸಂಗೀತ ಇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ವಿಪುಲ ಅವಕಾಶವಿದೆ. ದೇವರು ಕೊಟ್ಟ ಅವಕಾಶವನ್ನು ಬಳಸಿಕೊಳ್ಳಿ ಎಂದರು.
ಸಾಮಾಜಿಕ ಚಟುವಟಿಕೆ ಮೂಲಕ 30ನೇ ವರ್ಷದ ಸಂಭ್ರಮ
ನಿರ್ದೇಶಕರಾದ ವಿದ್ವಾನ್ ಬಿ ದೀಪಕ್ ಕುಮಾರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು 30ನೇ ವರ್ಷಕ್ಕೆ ಹೆಜ್ಜೆ ಹಾಕುವ ಸಂದರ್ಭ ಒಂದಷ್ಟು ಕಾರ್ಯಕ್ರಮ ಆಯೋಜಿಸಿದ್ದೇವೆ. ಈಗಾಗಲೇ ನೃತ್ಯದ ಜೊತೆ ಇತರೆ ಸಾಮಾಜಿಕ ಕಾರ್ಯಕ್ರಮ ಮಾಡಿದ್ದೇವೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕಾಡು ಗಿಡಗಳನ್ನು ನೆಡುವ ಪ್ರಯತ್ನ ಮಾಡಿದ್ದೆವು. ಇದಕ್ಕೆ ಕಾಕತಾಳಿಯವೋ ಏನೋ ಅದಕ್ಕೆ ಸರಿಯಾಗಿ ಗಿಡಗಳ ಬೆಳವಣಿಗೆಗೆ ಪ್ರಕೃತಿ ಮಳೆಯ ರೂಪದಲ್ಲಿ ನೀರು ಉಣಿಸುತ್ತಿದೆ. ಸುಮಾರು 5 ಸಾವಿಕ್ಕಿಂತ ಹೆಚ್ಚು ಕಾಡುಗಿಡಗಳನ್ನು ಬಯಲು ಪ್ರದೇಶದಲ್ಲಿ ಬೆಳೆಸಿದ್ದೇವೆ. ಸುಮಾರು 10 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ದ್ವಾರಕ ಪ್ರತಿಷ್ಠಾನದಿಂದ ಅನೇಕ ಸ್ಥಳದಲಿ ಗಿಡ ನೆಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಕೃತಿಯ ಸ್ವಚ್ಛತೆಗೆ ಪೂರಕವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ದೇವೆ. ರಸಪ್ರಶ್ನೆ, ಭಾಷಣ ಸ್ಪರ್ಧೆ ಮಾಡಿದ್ದೇವೆ. ಹೀಗೆ 30ನೇ ವರ್ಷದಲ್ಲಿ ಹಲವು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದ ಅವರು ಇನ್ನೂ ಹಲವು ಕಾರ್ಯಕ್ರಮಗಳಿಗೆ ಎಲ್ಲರ ಪ್ರೋತ್ಸಾಹ ಯಾಚಿಸಿದರು. ಸಂಸ್ಥೆಯ ಸಂಚಾಲಕಿ ಪ್ರಭಾ ಬಿ ಶಂಕರ್, ಸಂಗೀತ ನಿರ್ದೇಶಕಿ ಪ್ರೀತಕಲಾ ವಿದ್ಯಾ, ಸಹ ನಿರ್ದೇರ್ಶಕ ಬಿ.ಗಿರೀಶ್ ಕುಮಾರ್, ಹೊಟೇಲ್ ಉದ್ಯಮಿ ಗಿರೀಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಭರತನಾಟ್ಯ ಪ್ರದರ್ಶನಕ್ಕೆ ಮೃದಂಗದಲ್ಲಿ ವಿದ್ವಾನ್ ಬಾಲಚಂದ್ರ ಬಾಗವತ್, ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ್ ಕಾಂಞಗಾಡ್, ರಿದಂಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್, ಪಿಟೀಲಿನಲ್ಲಿ ಧನಶ್ರೀ ಶಬರಾಯ ಅವರು ಸಹಕರಿಸಿದರು. ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ ಮತ್ತು ನಟುವಾಂಗದಲ್ಲಿ ವಿದ್ವಾನ್ ಬಿ ದೀಪಕ್ ಕುಮಾರ್ ಸಹಕರಿಸಿದರು. ಸುದ್ದಿ ಯು ಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮ ನೇರಪ್ರಸಾರ ಮಾಡಲಾಗಿತ್ತು.
ಜ.11ಕ್ಕೆ ರಂಗಪ್ರವೇಶನದ ನೆನಪು ಮರುಕಳಿಸುವ ಕಾರ್ಯಕ್ರಮ
ಪುತ್ತೂರು ಜನ್ಮಕ್ಷೇತ್ರವಲ್ಲವಾದರೂ ನನಗೆ ಕಾರ್ಯಕ್ಷೇತ್ರ. ಪುತ್ತೂರಿಗೆ ಬಂದ ಮೇಲೆ ನಾನು ಭರತನಾಟ್ಯ ಕಲಾವಿದನಾಗಿ ಬೆಳೆಯಲು ಸಾಧ್ಯವಾಯಿತು. ಈ ಮಣ್ಣಿನ ಶಕ್ತಿ ನನ್ನನ್ನು ಬೆಳೆಸಿದೆ. 1996ನೇ ಇಸವಿಯ ಜ.12ಕ್ಕೆ ನಾನು ರಂಗ ಪ್ರವೇಶ ಮಾಡಿದ ದಿನ. ಹಾಗಾಗಿ ನನಗೆ ಭರತನಾಟ್ಯ ಕಲಿಸಿದ ಗುರುಗಳೆಲ್ಲರನ್ನು ನೆನೆಸಿಕೊಂಡು. ಜ.11ಕ್ಕೆ ಪುತ್ತೂರಿನಲ್ಲಿ ರಂಗ ಪ್ರವೇಶದ ನೆನಪನ್ನು ಮರುಕಳಿಸಲು 30 ವರ್ಷದ ಹಿಂದೆ ಹೇಗಿದ್ದೆನೋ ಹಾಗೆ ಆಗಲು ಪ್ರಯತ್ನ ಪಡುತ್ತೇನೆ. ಕಾರ್ಯಕ್ರಮಕ್ಕೆ ನನ್ನ ಗುರುಗಳು ಬರುತ್ತಾರೆ. ಆ ಕಾರ್ಯಕ್ರಮಕ್ಕೆ ಎಲ್ಲರು ಬಂದು ಹರಸಬೇಕು.
ವಿದ್ವಾನ್ ಬಿ.ದೀಪಕ್ ಕುಮಾರ್, ನೃತ್ಯ ನಿರ್ದೇಶಕ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು
ನಾವು ಜೀಪು ಮಾಡಿ ಬರುತ್ತಿದ್ದೆವು
ದಿ.ಭವಾನಿ ಶಂಕರ್ ಮತ್ತು ನಾನು ಬ್ಯಾಂಕ್ ಸಹೋದ್ಯೋಗಿಗಳು. ಅವರ ಮಗ ವಿದ್ವಾನ್ ದೀಪಕ್ ಕುಮಾರ್ ಎಳೆ ವಯಸ್ಸಿನಲ್ಲೇ ಅದ್ಭುತ ಭರತನಾಟ್ಯ ಕಲಾವಿದ. ಆಗ ನಾನು ಸುಳ್ಯದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದೆ. ಆಗಿನ ಕಾಲದಲ್ಲಿ ಪುತ್ತೂರಿನಲ್ಲಿ ದೀಪಕ್ ಕುಮಾರ್ ಅವರ ಭರತನಾಟ್ಯ ಕಾರ್ಯಕ್ರಮ ನೋಡಲು ನಾವು ಸುಳ್ಯದಿಂದ ಜೀಪು ಮಾಡಿ ಬರುತ್ತಿದ್ದೇವು. ದಿ.ಭವಾನಿ ಶಂಕರ ಅವರ ಪ್ರಯತ್ನ ಇವತ್ತು ಅತ್ಯಮೂಲ್ಯವಾಗಿ ಮೂಡಿದೆ.
ಈಶ್ವರ ಬೆಡೇಕರ್, ಸದಸ್ಯರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು