ಪುತ್ತೂರು: ಕೇಂದ್ರ ಚುನಾವಣಾ ಆಯೋಗ ದೇಶದಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಜಾರಿಗೆ ತರುವಾಗ ಬಿಜೆಪಿ ಸಹಮತ ಸೂಚಿಸಿತು. ಆದರೆ ವಿರೋಧ ಪಕ್ಷ ಕಾಂಗ್ರೆಸ್ ವಿರೋಧಿಸಿತು. ಮತ ಚೋರಿ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ನವರೇ ನಿಜವಾದ ಮತ ಚೋರಿಯ ಕೆಲಸ ಮಾಡುತ್ತಾ ಬಂದಿದ್ದಾರೆ. ಕೇರಳದಿಂದ ಬಂದವರಿಗೂ ಮತದಾನದ ಹಕ್ಕನ್ನು ನೀಡಿದ್ದು ಅವರು ಎರಡೂ ಕಡೆ ಮತದಾನ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯ, ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಆರೋಪಿಸಿದರು.

ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ ನಡೆಯಲಿರುವ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗಾಗಿ ಅ.28ರಂದು ಬಪ್ಪಳಿಗೆ ಜೈನ ಭವನದಲ್ಲಿ ನಡೆದ ಬಿಎಲ್ಎ-2 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮತದಾನದ ಅರ್ಹತೆ ಇದ್ದವರ ಹಕ್ಕನ್ನು ಕಿತ್ತುಕೊಳ್ಳಬಾರದು. ಒಬ್ಬ ವ್ಯಕ್ತಿ ಒಂದೇ ಕಡೆ ಮತದಾನ ಮಾಡಬೇಕು. ಮತದಾನದ ಹಕ್ಕಿಲ್ಲದವರಿಗೆ, ಎರಡು ಕಡೆ ಮತದಾನ ಮಾಡುವವರಿಗೆ ವಿಶೇಷ ತೀವ್ರ ಪರಿಷ್ಕರಣೆಯ ಮೂಲಕ ತಿರಸ್ಕಾರ ಮಾಡಿ ಚುನಾವಣಾ ಆಯೋಗವು ದೇಶಕ್ಕೆ ಭದ್ರ ಬುನಾದಿ ಹಾಕಲಿದೆ. ಒಬ್ಬ ವ್ಯಕ್ತಿ ಪುತ್ತೂರಿನಲ್ಲಿ, ಬೆಂಗಳೂರು, ಮಂಗಳೂರಿನಲ್ಲಿ ಮತದಾನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಪರಿಸ್ಕರಣೆಯನ್ನು ವಿರೋಧಿಸುತ್ತಿದೆ. ಈಶಾನ್ಯ ಭಾರತದಲ್ಲಿ ಬಾಂಗ್ಲಾದೇಶದಿಂದ ಬಂದ ನುಸುಳುಕೋರರು ಮತದಾನದ ಹಕ್ಕು ಪಡೆದುಕೊಂಡಿದ್ದಾರೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಶೇ.40 ಮತದಾರರು ನುಸುಳುಕೋರರೇ ಆಗಿದ್ದಾರೆ. ಇದನ್ನೆಲ್ಲ ತಡೆದು ನಿಜವಾಗಿಯೂ ಯಾರು ದೇಶದ ಪ್ರಜೆಗಳೋ ಅವರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ. ಇದರ ಯಶಸ್ವಿನಲ್ಲಿ ನಮ್ಮ ಪಕ್ಷದ ಬಿಎಲ್ಎಗಳು ಸಕ್ರಿಯವಾಗಿ ತೊಡಗಿಸಿಕೊಂಡು ನೆರವು ನೀಡಬೇಕು ಎಂದರು.
ಆಪರೇಶನ್ ಸಿಂದೂರ ಮತ್ತು ಸರ್ಜಿಕಲ್ ದಾಳಿಯ ನಂತರ ತಾಯಿ ಭಾರತಿ ವಿಶ್ವಮುಖದಲ್ಲಿ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಲು ಸಾಧ್ಯವಿಲ್ಲದ ಸ್ಥಿತಿ ಇತ್ತು. ಈಗ ಅಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. 70 ವರ್ಷಗಳ ಆಡಳಿತದ ಅವಧಿಯಲ್ಲಿ ನಮಗೆಲ್ಲ ಒಂದು ಆತಂಕವಿತ್ತು. ನಮ್ಮ ದೇಶ ಪರಮ ವೈಭವದತ್ತ ಹೋಗುವುದೇ ಎಂಬ ಭಯವಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಸಿಕ್ಕಿದ ಮೇಲೆ ನಮ್ಮೆಲ್ಲ ಕನಸು ನನಸಾಗಿ ತಾಯಿ ಭಾರತಿ ಪರಮ ವೈಭವದತ್ತ ಸಾಗುತ್ತಿದ್ದಾಳೆ. ಭಾರತ ವಿಶ್ವಗುರುವಾಗುವುದರಲ್ಲಿ ಸಂಶಯವಿಲ್ಲ ಎಂದು ಕಿಶೋರ್ ಬೊಟ್ಯಾಡಿ ನುಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪುತ್ತೂರು ಮಂಡಲದ ಪ್ರಭಾರಿ ಸುನಿಲ್ ಆಳ್ವ, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಕಲ್ಲಿಮಾರ್, ಎಸ್ಟಿ ಮೋರ್ಛಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರಿಪ್ರಸಾದ್ ಯಾದವ್ ಮತ್ತು ಯುವರಾಜ್ ಪೆರಿಯತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಜೀವ ಮಠಂದೂರು, ಪ್ರೇಮಾನಂದ ಶೆಟ್ಟಿ ಮತ್ತು ಸುನಿಲ್ ಆಳ್ವ ಅವರು ಎಸ್ಐಆರ್ ಬಗ್ಗೆ ಬೂತ್ ಎಜೆಂಟರಿಗೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.
ಪಂಚ ಗ್ಯಾರಂಟಿ ಯೋಜನೆ ಮೂಲಕ ಜನರ ದಾರಿತಪ್ಪಿಸಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರ ಈಗ ಇದೇ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಬೊಕ್ಕಸ ಖಾಲಿ ಮಾಡಿಕೊಂಡು ಕೂತಿದೆ. ಜನರ ಗಮನ ಬೇರೆ ಕಡೆಗೆ ಸೆಳೆಯಲು ಇಲ್ಲಸಲ್ಲದ ವಿಚಾರ ಎತ್ತಿಕೊಂಡು ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಕಳೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಜನ ಮತ ಮಾರಲಿಲ್ಲ. ಆದರೆ ರಾಜ್ಯದ ಇತರ ಕಡೆ ಆಮಿಷಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಮತ್ತೆ ಜಾಗೃತರಾಗುವ ಅನಿವಾರ್ಯತೆ ಇದೆ.
ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಸದಸ್ಯರು