





ಪುತ್ತೂರು : ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು, ಕನ್ನಡ ವಿಭಾಗ, ಕನ್ನಡ ಸಂಘ, ಮತ್ತು ಯಕ್ಷಕಲಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನ.1ರಂದು ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ, ಕನ್ನಡ ನಾಡು-ನುಡಿ ಚಿಂತನೆ, ಕನ್ನಡ ಭಾವ ಗಾಯನ ಕಾರ್ಯಕ್ರಮ ಜರುಗಿತು.


ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕರಾದ ಪ್ರತಿಭಾ ಶೆಟ್ಟಿ ವಿಶೇಷ ಉಪನ್ಯಾಸ ನೀಡಿ ಕನ್ನಡ ಎಂಬುದು ಕೇವಲ ಒಂದು ಭಾಷೆಯಲ್ಲ, ಅದು ಕನ್ನಡಿಗರೆಲ್ಲರ ಜೀವದ ಭಾಷೆ, ಭಾವದ ಭಾಷೆ. ಹುಯಿಲಗೋಳ ನಾರಾಯಣರಾವ್, ಆಲೂರು ವೆಂಕಟರಾವ್ ಮೊದಲಾದ ಕನ್ನಡಪರ ಹೋರಾಟಗಾರರು ಕನ್ನಡ ಭಾಷೆಯ ಉಳಿವಿಗಾಗಿ ಮಾಡಿದ ಹೋರಾಟ ಅವಿಸ್ಮರಣೀಯ. ಸಾಂಸ್ಕೃತಿಕ, ಪ್ರಾಕೃತಿಕ ಶ್ರೀಮಂತಿಕೆಯಿಂದ ಕೂಡಿದ ನಾಡು ನಮ್ಮ ಕನ್ನಡ ನಾಡು. ಹೀಗಿದ್ದೂ ಪರಭಾಷೆಗಳ ವ್ಯಾಮೋಹದಿಂದಾಗಿ ಇಂದು ಕರ್ನಾಟಕದಲ್ಲಿ ಕನ್ನಡಿಗರೇ ತಬ್ಬಲಿಗಳಾಗುತ್ತಿದ್ದಾರೆ. ಕನ್ನಡಿಗರ ಇಂತಹ ಮನಸ್ಥಿತಿ ಬದಲಾಗಬೇಕಿದೆ. ಕನ್ನಡದ ಉಳಿವಿಗಾಗಿ ಪ್ರತಿಯೊಬ್ಬ ಕನ್ನಡಿಗನೂ ಶ್ರಮಿಸಬೇಕಾಗಿದೆ. ಕನ್ನಡ ಭಾಷೆಯ ಬಗೆಗಿನ ಪ್ರೇಮ ಕೇವಲ ಈ ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿದಿನವೂ ಕನ್ನಡವನ್ನು ಸಂಭ್ರಮಿಸಬೇಕು. ಭಾಷೆಯ ಮೇಲೆ ಪ್ರೀತಿ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಉಪಪ್ರಾಂಶುಪಾಲ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ|ವಿಜಯಕುಮಾರ ಎಂ. ಮಾತನಾಡಿ ಇಂದು ವಿದ್ಯಾರ್ಥಿಗಳು ಬರವಣಿಗೆಯಲ್ಲಿ ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.





ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ.ಡಾ|ಆಂಟನಿ ಪ್ರಕಾಶ್ ಮೋಂತೆರೋ ಮಾತನಾಡಿ ಕನ್ನಡ ಭಾಷೆಯ ಮೇಲಿನ ಪ್ರೀತಿ ಕೇವಲ ಕನ್ನಡವನ್ನು ಎಲ್ಲೆಡೆ ಕಡ್ಡಾಯಗೊಳಿಸುವುದರಿಂದ ಬರಬೇಕಾದ್ದಲ್ಲ, ಬದಲಿಗೆ ಮನದಾಳದಿಂದ ಬರಬೇಕು ಎಂದರು. ಕನ್ನಡ ಏಕೀಕರಣ ಕಾರ್ಯದಲ್ಲಿ ಆಲೂರು ವೆಂಕಟರಾಯರ ತ್ಯಾಗವನ್ನು ಸ್ಮರಿಸಿಕೊಂಡರು. ಯಕ್ಷಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕನ್ನಡ ಭಾವ ಗಾಯನ ನಡೆಯಿತು. ಕಾಲೇಜಿನ ಉಪನ್ಯಾಸಕರಾದ ಡಾ|ನಾರ್ಬರ್ಟ್ ಮಸ್ಕರೇನಸ್, ಡಾ|ವಿನಯಚಂದ್ರ, ಡಾ|ಎಡ್ವಿನ್ ಡಿಸೋಜ, ಡಾ|ರಾಧಾಕೃಷ್ಣ ಗೌಡ, ಸುರಕ್ಷಾ ಎಸ್.ರೈ, ಧನ್ಯ ಪಿ.ಟಿ ಉಪಸ್ಥಿತರಿದ್ದರು. ಸುರಭಿ ಮತ್ತು ಅಪರ್ಣಾ ಪ್ರಾರ್ಥಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಅವನಿ ಸ್ವಾಗತಿಸಿ, ಪ್ರಥಮ ಬಿ.ಕಾಂನ ಸನಿಹ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಪ್ರಶಾಂತಿ ಕಾರ್ಯಕ್ರಮ ನಿರೂಪಿಸಿದರು.










