ಮಜ್ಜಾರಡ್ಕದಲ್ಲಿ ಸಂಭ್ರಮದ 8ನೇ ವರ್ಷದ ಕೆಸರುಡೊಂಜಿ ದಿನ, ಸಾಧಕರಿಗೆ ಸನ್ಮಾನ, ಆಟೋಟ ಸ್ಪರ್ಧೆಗಳು

0

ಆಕರ್ಷಕ ಕುಣಿತ ಭಜನೆ, ಅಂತರರಾಜ್ಯ ಹಗ್ಗ ಜಗ್ಗಾಟ

ತಾ.ಮಟ್ಟದ ವಾಲಿಬಾಲ್, ಕೆಸರುಗದ್ದೆಯಲ್ಲಿ ಅಟ್ಟಿ ಮಡಿಕೆ

ಅರ್ಹವಾದ ಸಂಘಟನೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ: ಅಶೋಕ್ ಕುಮಾರ್ ರೈ


ಪುತ್ತೂರು: ಸಮಾಜ ಸೇವೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ನಡೆಯುವ 8ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮ ನ.2ರಂದು ಮಜ್ಜಾರು ಗದ್ದೆಯಲ್ಲಿ ಸಂಭ್ರಮದಿಂದ ಜರಗಿತು. ಈ ವರ್ಷ ವಿಶೇಷವಾಗಿ ಕುಣಿತ ಭಜನೆ, ಅಂತರರಾಜ್ಯ ಮಟ್ಟದ ಹಜ್ಜ ಜಗ್ಗಾಟ ಸ್ಪರ್ಧೆ, ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ವಾಲಿಬಾಲ್, ಕೆಸರುಗದ್ದೆಯಲ್ಲಿ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಸೇರಿದಂತೆ ಸ್ಥಳೀಯರಿಗೆ ಕಬಡ್ಡಿ ಹಾಗೂ ಪುಟಾಣಿ ಮಕ್ಕಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ವಿವಿಧ ಅಟೋಟ ಸ್ಪರ್ಧೆಗಳು ಗಮನ ಸೆಳೆದವು ಇದಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಯುವಶಕ್ತಿ ಬಳಗದ ಓರ್ವರಿಗೆ ಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಿತು.


ಬೆಳಿಗ್ಗೆ ಉದ್ಯಮಿ ಅಜಿತ್ ರೈ ದೇರ್ಲರವರು ಕುಣಿತ ಭಜನಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು, ಮುಂಡೂರು, ದರ್ಬೆತ್ತಡ್ಕ, ಕೆಯ್ಯೂರು ಸೇರಿದಂತೆ ಸುಮಾರು 11 ಕುಣಿತ ಭಜನಾ ತಂಡಗಳ 2೦೦ ಕ್ಕೂ ಅಧಿಕ ಭಜನಾರ್ಥಿಗಳು ಭಾಗವಹಿಸಿದ್ದರು. 1 ಗಂಟೆಗಳ ಕಾಲ ಕುಣಿತ ಭಜನೆ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿತು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಸ್ಮರಣಿಕೆ, ಪ್ರಶಂಸ ಪತ್ರ ಹಾಗೂ ತಂಡದ ಗುರುಗಳಿಗೆ ಸನ್ಮಾನ ಮಾಡಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳುರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಜ್ಜಾರಡ್ಕ ಯುವಶಕ್ತಿ ಬಳಗವು ತಾಲೂಕಿನ ಒಂದು ಉತ್ತಮ ಸಂಘಟನೆಯಾಗಿದ್ದು ಅತ್ಯಂತ ಶಿಸ್ತಿನಿಂದ ಕೂಡಿದ ಸಂಘವಾಗಿದೆ.ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಹೆಗ್ಗಳಿಕೆ ಸಂಘಕ್ಕೆ ಇದೆ. ಸಂಘದ ಸೇವೆಗಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಶ್ಲಾಘನೀಯ ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬರುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ತೆಂಗಿನ ಕಾಯಿ ಒಡೆಯುವ ಮೂಲಕ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿದ ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಒಂದು ಸಂಘಟನೆಯ ಯುವಕರು ಹೇಗಿರಬೇಕು ಎಂಬುದನ್ನು ನಾವು ಯುವಶಕ್ತಿ ಬಳಗದವರನ್ನು ನೋಡಿ ಕಲಿಯಬೇಕಾಗಿದೆ. ಅತ್ಯಂತ ಶಿಸ್ತು ಹಾಗೂ ಗೌರವಯುತವಾಗಿ ಸಮಾಜದಲ್ಲಿ ನಡೆದುಕೊಂಡ ರೀತಿ ಶ್ಲಾಘನೀಯ. ಯುವಶಕ್ತಿ ಬಳಗವು ಜಿಲ್ಲೆಗೆ ಮಾದರಿಯಾದ ಸಂಘಟನೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಸವಣೂರು ಸರಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್‌ರವರು ಮಾತನಾಡಿ, ಯುವಶಕ್ತಿ ಬಳಗದ ಎಲ್ಲಾ ಕಾರ್ಯಕ್ರಮಗಳನ್ನು ಗಮನಿಸಿದಾಗ ತಾಲೂಕಿನಲ್ಲಿಯೇ ಒಂದು ಉತ್ತಮ ಸಂಘ ಇದಾಗಿದೆ. ಇತರ ಎಲ್ಲಾ ಕಾರ್ಯಕ್ರಮಗಳಲ್ಲೂ ಈ ಸಂಘಟನೆ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.ಸಂಘದಿಂದ ಇನ್ನಷ್ಟು ಸಮಾಜ ಸೇವೆಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರ ಶ್ರೀಕಾಂತ ಪೂಜಾರಿ ಬಿರಾವು ಮಾತನಾಡಿ, ಯುವಶಕ್ತಿ ಬಳಗವು ಕಳೆದ 8 ವರ್ಷಗಳಿಂದ ಕೆಸರುಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತಿದೆ. ಸಮಾಜ ಸೇವೆಯೊಂದಿಗೆ ಇತರ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಒಂದು ಉತ್ತಮ ಸಂಘಟನೆ ಇದಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ನಿವೃತ್ತ ಸೈನಿಕ ಬಾಲಕೃಷ್ಣ ಪಾಟಾಳಿ ಎನ್.ಕಲ್ಲರ್ಪೆ, ಕೊಳ್ತಿಗೆ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಪತ್ರಕರ್ತ ಸಿಶೇ ಕಜೆಮಾರ್, ದರ್ಬೆತ್ತಡ್ಕ ಶ್ರೀ ವಿಷ್ಣು ಸೇವಾ ಬಳಗದ ಅಧ್ಯಕ್ಷ ರವೀಂದ್ರ ಮಣಿಯಾಣಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ಶ್ರೀ ವಿಷ್ಣು ಯುವಶಕ್ತಿ ಬಳಗದ ಗೌರವ ಅಧ್ಯಕ್ಷ ಶರತ್ ರೈ ಓಲ್ತಾಜೆ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು ಉಪಸ್ಥಿತರಿದ್ದರು. ಯುವಶಕ್ತಿ ಬಳಗದ ಉಪಾಧ್ಯಕ್ಷ ಸುಜಿತ್ ಶೇಖಮಲೆ ಅತಿಥಿಗಳನ್ನು ವೀಳ್ಯ ಹಾಗೂ ಶಾಲು ಹಾಕಿ ಸ್ವಾಗತಿಸಿದರು. ಹರೀಶ್ ಸ್ವಾಮಿನಗರ ಮತ್ತು ದೀಪಕ್ ಕೋಡಿಯಡ್ಕ ಪ್ರಾರ್ಥಿಸಿದರು. ಯುವಶಕ್ತಿ ಬಳಗದ ಮಾಜಿ ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ ಸ್ವಾಗತಿಸಿ, ವರದಿ ವಾಚಿಸಿದರು. ಶ್ರೀನಿಧಿ ಬಿಸಿರೋಡ್ ಕಾರ್ಯಕ್ರಮ ನಿರೂಪಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಯುವಶಕ್ತಿ ಬಳಗದ ಗೌರವ ಅಧ್ಯಕ್ಷ ಶರತ್ ರೈ ಓಲ್ತಾಜೆ ಬೆಂಗಳೂರು ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ಲೋಕೇಶ್ ಸ್ವಾಮಿನಗರ, ಸಂಘಟನೆಯ ಗೌರವ ಸಲಹೆಗಾರರು, ಉದ್ಯಮಿ ಮೋಹನದಾಸ ರೈ ಕುಂಬ್ರ, ಉದ್ಯಮಿ ಮನೋಜ್ ರೈ, ಜನಾರ್ದನ ಗೌಡ ಪದಡ್ಕ ಪಡುಮಲೆ, ಉದ್ಯಮಿ ಶ್ರೀಧರ ಶೆಟ್ಟಿ ಬೆಂಗಳೂರು, ಇಶಾ ಲಾಜಿಸ್ಟಿಕ್‌ನ ಮಧುರಾಜ್ ಶೆಟ್ಟಿ ಬೆಂಗಳೂರು, ಉದ್ಯಮಿ ಲೋಕೇಶ್ ರೈ ಅಮೈ, ರೇಷ್ಮಾ ಉದಯ್ ಪೂಜಾರಿ ಮಡಿಕೇರಿ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಸಂಘಟನೆಯ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ ಸ್ವಾಗತಿಸಿ, ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವಿಷ್ಣು ಯುವಶಕ್ತಿ ಬಳಗದ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಸಹಕರಿಸಿದ್ದರು.


ಸಂಜೆಯ ಹೊತ್ತಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಸಂಘಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸಲದ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಯು ಒಂದು ಅರ್ಹವಾದ ಸಂಘಟನೆಗೆ ಸಿಕ್ಕಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಯುವಶಕ್ತಿ ಬಳಗವು ಒಂದು ಮಾದರಿ ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಗೆ ತನ್ನಿಂದ ಸಾಧ್ಯವಾಗುವ ಅನುದಾನವನ್ನು ಕೊಡುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ಸಂಘಟನೆಯಿಂದ ಸಮಾಜ ಸೇವೆಗಳು ಇನ್ನಷ್ಟು ಮೂಡಿಬರಲಿ ಸಮಾಜದ ಅಶಕ್ತರ ಕಣ್ಣೀರು ಒರೆಯುವ ಕೆಲಸ ನಿರಂತರ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ವಿಶೇಷವಾಗಿ ಬಿಜೆಪಿ ಜಿಲ್ಲಾ ಮುಖಂಡ ಪ್ರಮೋದ್ ದಿಡುಪೆ, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಸು ಫ್ರಮ್‌ ಸೋ ನಟ ಪುಷ್ಪರಾಜ್ ಬೋಳಾರ್, ವಿಜಯ ಸಾಮ್ರಾಟ್ ಸಂಘಟನೆಯ ಸ್ಥಾಪಕ ಅಧ್ಯಕ್ಷ ಸಜಜ್ ರೈ ಬಳಜ್ಜ ಆಗಮಿಸಿ ಶುಭ ಹಾರೈಸಿದರು.



ಸಾಧಕರಿಗೆ ಗೌರವದ ಸನ್ಮಾನ
ಪ್ರತಿ ವರ್ಷದಂತೆ ಈ ವರ್ಷವೂ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು. ಇಂಡಿಯನ್ ಬುಕ್ ಆಫ್ ರೇಕಾರ್ಡ್ ಅವಾರ್ಡ್ ಪುರಸ್ಕೃತ ಪುಟಾಣಿ ಆತ್ಮಿಕಾ ವಿಜಯ್, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪುತ್ತೂರು ಅರುಣ ಸಾರಥಿ ಅಟೋ ಚಾಲಕ ಮಾಲಕರಿಗೆ ಹಾಗೂ 61 ಬಾರಿ ರಕ್ತದಾನ ಮಡುವ ಮೂಲಕ ಹಲವು ಮಂದಿಯ ಪ್ರಾಣ ಉಳಿಸಿದ ಶಶಿಧರ ಪಾಟಾಳಿ ಮೇರ್ಲರವರುಗಳಿಗೆ ಗೌರವದ ಸನ್ಮಾನ ನಡೆಯಿತು. ಅನ್ನದಾನ ಪ್ರಾಯೋಜಕತ್ವ ವಹಿಸಿದ್ದ ಶರತ್ ರೈ ಓಲ್ತಾಜೆಯವರ ಪರವಾಗಿ ಅವರ ತಂದೆ ಜತ್ತಪ್ಪ ರೈ ಓಲ್ತಾಜೆಯವರನ್ನು ಗೌರವಿಸಲಾಯಿತು.ಅದೇ ರೀತಿ ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವ ವಹಿಸಿದವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗುರುತಿಸಲಾಯಿತು. ವಿಶೇಷ ಚೇತನರಾದ ಮೋಹನ್ ದರ್ಬೆತ್ತಡ್ಕರವರ ಗೃಹ ನಿರ್ಮಾಣದಲ್ಲಿ ಸಹಕಾರ ನೀಡಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.



ಅಂತರರಾಜ್ಯ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆ
ಈ ವರ್ಷದ ವಿಶೇಷ ಆಕರ್ಷಣೆಯಾಗಿ ಅಂತರರಾಜ್ಯ ಮಟ್ಟದ 500 ಕೆಜಿ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ಇದರಲ್ಲಿ ಒಟ್ಟು 19 ತಂಡಗಳು ಭಾಗವಹಿಸಿದ್ದವು. ವಿದ್ಯಾದಾಯಿನಿ ವಿದ್ಯಾನಗರ ತಂಡವು ಎ ಮತ್ತು ಬಿ ತಂಡದಲ್ಲಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಶ್ರೀ ದೇವಿ ಫ್ರೆಂಡ್ಸ್ ಪಾಣೆಮಂಗಳೂರು ತಂಡವು ಎ ಮತ್ತು ಬಿ ತಂಡವಾಗಿ ತೃತೀಯ ಮತ್ತು ಚತುರ್ಥ ಪ್ರಶಸ್ತಿಯನ್ನು ಪಡೆದುಕೊಂಡಿತು. ವಸಂತ ಪೂಜಾರಿ ಮಲಾರ್ ಮತ್ತು ರಾಜೇಶ್ ರೈ ಸಂಪ್ಯದಮೂಲೆ ತೀರ್ಪುಗಾರರಾಗಿದ್ದರು. ಪುತ್ತೂರು,ಸುಳ್ಯ,ಕಡಬ 3 ತಾಲೂಕುಗಳ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟವು ನಡೆಯಿತು. ಇದರಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.ಸೌತಡ್ಕ ಎ ಮತ್ತು ಬಿ ತಂಡವು ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಪಡೆದುಕೊಂಡರೆ, ಅಭಿನವ ಮಾಡಾವು ಎ ಮತ್ತು ಬಿ ತಂಡವು ಚತುರ್ಥ ಮತ್ತು ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಅನೂಪ್ ಪೆರಿಗೇರಿ ಮತ್ತು ನಂದಕುಮಾರ್ ಪಾಪೆಮಜಲು ತೀರ್ಪುಗಾರರಾಗಿ ಸಹಕರಿಸಿದ್ದರು. ಕೆಸರುಗದ್ದೆಯಲ್ಲಿ ನಡೆದ ಆಕರ್ಷಕ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ 3 ತಂಡಗಳು ಭಾಗವಹಿಸಿದ್ದು ಪ್ರಥಮ ಛತ್ರಪತಿ ಕಡಬ, ವೀರ ಸಾರ್ವಕರ್ ಕಲ್ಲಗುಡ್ಡೆ ದ್ವಿತೀಯ ಪ್ರಶಸ್ತಿ ಪಡೆದುಕೊಂಡರೆ, ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಮರ್ಕಂಜ ಗೌರವ ಟ್ರೋಫಿ ಪಡೆದುಕೊಂಡಿತು. ತೀರ್ಪುಗಾರರಾಗಿ ಸುರೇಶ್ ಪಡಿಪಂಡ ನೆಲ್ಯಾಡಿ ಸಹಕರಿಸಿದ್ದರು.

ಯುವ ಪ್ರಶಸ್ತಿ ಪ್ರದಾನ
ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಂಘಟನೆಯ ಓರ್ವ ಸದಸ್ಯರಿಗೆ ‘ಯುವ ಪ್ರಶಸ್ತಿ’ನೀಡಿ ಗೌರವಿಸಲಾಯಿತು. ಈ ವರ್ಷದ ಯುವ ಪ್ರಶಸ್ತಿಯನ್ನು ಮಾಜಿ ಪ್ರಧಾನ ಕಾರ್ಯದರ್ಶಿ ಯತೀಶ ನಾಯ್ಕ ಕಠಾರ ಬೆಳ್ಳಿಪ್ಪಾಡಿ ಇವರಿಗೆ ನೀಡಿ ಗೌರವಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಸಂಘಟನೆಯ ಅಧ್ಯಕ್ಷ ಲೋಕೇಶ್ ಸ್ವಾಮಿನಗರರವರಿಗೆ ಸಂಘಟನೆಯ ಸರ್ವ ಸದಸ್ಯರುಗಳು ಹೂ ಗುಚ್ಚ ನೀಡಿ ಅಭಿನಂದಿಸಿದರು.

‘ ಸಂಘಟನೆಯ ವತಿಯಿಂದ 8ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ವಿಶೇಷವಾಗಿ ಮಾಜಿ ಗೌರವ ಅಧ್ಯಕ್ಷ ಓಲೆಮುಂಡೋವು ಮೋಹನ್ ರೈಯವರ ಸಹಕಾರ ಹಾಗೇ ಗೌರವ ಅಧ್ಯಕ್ಷ ಶರತ್ ರೈ ಓಲ್ತಾಜೆಯವರ ಅನ್ನದಾನ ಸಹಕಾರ ಸೇರಿದಂತೆ ಹಲವು ಮಂದಿ ದಾನಿಗಳು ಸಹಕಾರ ನೀಡಿದ್ದಾರೆ. ವಿಶೇಷವಾಗಿ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಹಾಗೇ ಸಂಘಟನೆಯ ಹಿಂದಿರುವ ಎಲ್ಲಾ ಶಕ್ತಿಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’
ರಾಜೇಶ್ ಕೆ.ಮಯೂರ,
ಸಂಘಟಕರು ಯುವಶಕ್ತಿ ಬಳಗ ಮಜ್ಜಾರಡ್ಕ

LEAVE A REPLY

Please enter your comment!
Please enter your name here