ಪುತ್ತೂರು: ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಕಡಬ ಇಲ್ಲಿ 2025-26ನೇ ಶೈಕ್ಷಣಿಕ ವರ್ಷದ ಕನ್ನಡ ಸಂಘ ಪ್ರಾಯೋಜಿತ ಮಕ್ಕಳ ಬರವಣಿಗೆಗಳ ಸಂಗ್ರಹದ ಪುಸ್ತಕ “ಕಣಜ” ಇದರ ಅನಾವರಣ ಕಾರ್ಯಕ್ರಮವು ಸಂಸ್ಥೆಯ ಯಾದವಶ್ರೀ ಸಭಾಂಗಣದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಸದಾಶಿವ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ವಿಜ್ಞಾನ ಶಿಕ್ಷಕರಾದ ಯಶವಂತ ರೈ ಇವರು ಉಪಸ್ಥಿತರಿದ್ದು, “ಕಣಜ” ಪುಸ್ತವನ್ನು ಅನಾವರಣಗೊಳಿಸಿದರು. ನಂತರ ಮಾತನಾಡಿದ ಇವರು ಕನ್ನಡ ಭಾಷೆ ಒಂದು ಮಾಧ್ಯಮ. ಆಂಗ್ಲ ಭಾಷೆಯ ಭರಾಟೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಮಕ್ಕಳ ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಸಹಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ, ಸಂಸ್ಥೆಯ ಸಂಚಾಲಕರಾದ ಅಜಿತ್ ರೈ ಆರ್ತಿಲ, ಸರಸ್ವತೀ ವಿದ್ಯಾಲಯ ಪ್ರೌಢ ವಿಭಾಗದ ಮುಖ್ಯ ಮಾತಾಜಿ ಶೈಲಶ್ರೀ ಎಸ್. ರೈ, ಆಂಗ್ಲ ಮಾಧ್ಯಮ ಮುಖ್ಯಗುರು ವಸಂತ ಕೆ., ಕನ್ನಡ ಸಂಘದ ಗೌರವಾಧ್ಯಕ್ಷರಾದ ಪವಿತ್ರಾ ಎನ್ ಮತ್ತು ಅಧ್ಯಕ್ಷರಾದ 10ನೇ ತರಗತಿ ವಿದ್ಯಾರ್ಥಿ ಸುಮಂತ್ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಸುಮಂತ್ ಕೆ. ಸ್ವಾಗತಿಸಿ, ವಿದ್ಯಾರ್ಥಿನಿ ಜಿ. ಶಾರ್ವರಿ ಬನ್ನಿಂತ್ತಾಯ ವಂದಿಸಿ, ಭವಿಷ್ಯ ಕೆ. ಶೆಟ್ಟಿ ನಿರೂಪಿಸಿದರು.