ಪುತ್ತೂರು: ಪಡ್ನೂರಿನ ವರುಣ್ ಕೆ ಪಿ ಅವರು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಸೆಪ್ಟೆಂಬರ್ 2025ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯನ್ನು ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಇವರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಈಶ್ಚರ ಭಟ್ ಪಂಜಿಗುಡ್ಡೆ ಮತ್ತು ಜಯಶ್ರೀ ಭಟ್ ದಂಪತಿ ಪುತ್ರ. 
ವರುಣ್ ಕೆ ಪಿ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪದವಿ ಪೂರ್ವ ಮತ್ತು ಬಿ.ಕಾಂ ಶಿಕ್ಷಣವನ್ನು ನೆಹರುನಗರ ವಿವೇಕಾನಂದ ಕಾಲೇಜಿನಲ್ಲಿ ಹಾಗು ಸಿಎ ರಾಜ್ ರತ್ನಂ ಹಳೆಯಂಗಡಿ ಮತ್ತು ಸಿಎ ರಜನೀಶ್ ಅವರಲ್ಲಿ ಸಿಎ ಆರ್ಟಿಕಲ್ ಶಿಪ್ನ್ನು ಪೂರ್ಣಗೊಳಿಸಿದ್ದಾರೆ.
ಶಾಸಕರಿಂದ ಅಭಿನಂದನೆ
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಪುತ್ರ ವರುಣ್ ಕೆ.ಪಿ ಸಿ ಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರುವ ಕುರಿತು ಶಾಸಕ ಅಶೋಕ್ ಕುಮಾರ್ ರೈ ಅವರು ಅಭಿನಂದಿಸಿದ್ದಾರೆ. ಶಾಸಕರ ಕಚೇರಿಯಲ್ಲಿ ವರುಣ್ ಕೆ.ಪಿ ಅವರಿಗೆ ಶಲ್ಯ, ಪುಷ್ಪ ಗುಚ್ಚ ನೀಡಿ ಗೌರವಿಸಿದರು. ಈ ಸಂದರ್ಭ ಈಶ್ವರ ಭಟ್ ಪಂಜಿಗಡ್ಡೆ, ದೇವಳದ ಸಮಿತಿ ಸದಸ್ಯ ವಿನಯ ಸುವರ್ಣ, ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಜೊತೆಗಿದ್ದರು.
ಗಣಪತಿಯ ಆಶೀರ್ವಾದವೇ ಮಗನ ಶ್ರೀರಕ್ಷೆ
ವರುಣ್ ಬಾಲ್ಯದಿಂದಲೇ ಗಣೇಶ ಚತುರ್ಥಿಯ ಹಬ್ಬದಂದು ಮನೆಯಲ್ಲಿ ತಾನೆ ಮಣ್ಣಿನಲ್ಲಿ ರಚಿಸಿದ ಗಣಪತಿಗೆ ಪೂಜೆ ಮಾಡಿ ವಿಸರ್ಜಣೆ ಮಾಡುವ ವಿಶೇಷ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾನೆ. ಶಾಸಕರು ಕೂಡಾ ಕಾರ್ಯಕ್ರಮಕ್ಕೆ ಆಗಮಿಸಿ ವರುಣ್ನ ಭಕ್ತಿಯ ಕಾರ್ಯಗಳನ್ನು ನೋಡಿ ಸಭಾಕಾರ್ಯಕ್ರಮದಲ್ಲಿ ಗಣಪತಿ ದೇವರು ವರುಣ್ನ ಸಿ ಎ ತೇರ್ಗಡೆಗೆ ಆಶೀರ್ವಾದ ನೀಡಲಿದ್ದಾರೆ ಎಂದಿದ್ದರು. ಇದೀಗ ಅದು ನೆರವೇರಿದೆ ಎಂದು ಈಶ್ವರ ಭಟ್ ಪಂಜಿಗುಡ್ಡೆಯವರು ತನ್ನ ಪುತ್ರನ ಸಾಧನೆಗೆ ಗಣಪತಿಯೇ ಶ್ರೀರಕ್ಷೆ ಎಂದು ಆನಂದ ಬಾಷ್ಪದಿಂದ ತಿಳಿಸಿದ್ದಾರೆ.
ಶೈಕ್ಷಣಿಕದ ಜೊತೆ ಧಾರ್ಮಿಕ, ಸಾಮಾಜಿಕ ಚಟುವಟಿಕೆ
ವರುಣ್ ಕೆ.ಪಿ ಅವರು ಎಳೆಯ ವಯಸ್ಸಿನಿಂದಲೇ ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು ಸುಮಾರು 17 ವರ್ಷಗಳಿಂದ ಪ್ರತಿ ವರ್ಷ ಮನೆಯಲ್ಲಿ ಗಣಪತಿ ವಿಗ್ರಹ ರಚನೆ ಮಾಡಿ ಪೂಜೆ ಮಾಡುತ್ತಿದ್ದರು. ಇದರ ಜೊತೆಗೆ ಸುಮಾರು 12 ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಪೇಟೆ ಸವಾರಿಯ ವೇಳೆ ಹಣ್ಣು ಕಾಯಿ ಆರತಿಯಲ್ಲೂ ಭಾಗವಹಿಸುತ್ತಿದ್ದರು. ಪಡ್ನೂರಿನ ಕಡವದಲ್ಲಿರುವ ಶಿರಾಡಿ ದೈವದ ತಂಬಿಲ ಸೇವೆಯ ಧಾರ್ಮಿಕ ವಿಧಿ ವಿಧಾನಗಳನ್ನು ತಾನೆ ಮುಂದೆ ನಿಂತು ನೆರವೇರಿಸುತ್ತಿದ್ದು, ಎರ್ಮುಂಜಪಳ್ಳ ಅಶ್ವತ್ಥಕಟ್ಟೆ ದೇವತಾ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.