





ಎಲ್ಐಸಿಗೆ ಒಂದು ಆಸ್ತಿ ಹಾಗೂ ಶಕ್ತಿಯಾಗಿದ್ದಾರೆ-ಗಣಪತಿ ಭಟ್
ಪುತ್ತೂರಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ-ಅಶೋಕ್ ಕುಮಾರ್ ರೈ
ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ-ಕಿಶೋರ್ ಕುಮಾರ್ ಬೊಟ್ಯಾಡಿ
ಶ್ರದ್ಧೆ, ಪರಿಶ್ರಮ, ಸೇವಾ ಮನೋಭಾವವಿದ್ದರೆ ಗೌರವ ಪ್ರಾಪ್ತಿ-ಅರುಣ್ ಕುಮಾರ್ ಪುತ್ತಿಲ
ಜಿ.ಕೆ.ಪ್ರಸನ್ನರವರು ಭಕ್ತಕೋಡಿಯ ಶಿಲ್ಪಿಯಾಗಿದ್ದಾರೆ-ಚಂದ್ರಶೇಖರ ಎನ್.ಎಸ್.ಡಿ
ಸರ್ವೆ ಗ್ರಾಮದ ಕಿರೀಟಕ್ಕೆ ವಜ್ರದ ಕೊಡುಗೆ ಕೊಟ್ಟ ವ್ಯಕ್ತಿ-ಸುರೇಶ್ ಕುಮಾರ್ ಸೊರಕೆ
ಸರ್ವೆ ಗ್ರಾಮದ ಇತಿಹಾಸದಲ್ಲಿ ನೆನಪಲ್ಲಿ ಉಳಿಯುವ ಕೆಲಸ-ಎಸ್.ಡಿ.ವಸಂತ
ಬೆವರು ಸುರಿಸಿ ಹಂತ ಹಂತವಾಗಿ ಮೇಲೆ ಬಂದಿದ್ದಾರೆ-ಡಾ.ಸೀತಾರಾಮ್ ಭಟ್ ಕಲ್ಲಮ
ಬೆವರಿನಲ್ಲಿ ಸ್ನಾನ ಮಾಡಿ ಇತಿಹಾಸ ನಿರ್ಮಿಸಿದ್ದಾರೆ-ಶ್ರೀನಿವಾಸ ಎಚ್.ಬಿ.


ಪುತ್ತೂರು: ಭಾರತೀಯ ಜೀವವಿಮಾ ನಿಗಮದ ಮುಖ್ಯ ಜೀವವಿಮಾ ಸಲಹೆಗಾರ ಜಿ.ಕೆ.ಪ್ರಸನ್ನ ಮಾಲಕತ್ವದಲ್ಲಿ ಭಕ್ತಕೋಡಿಯಲ್ಲಿ ನಿರ್ಮಾಣಗೊಂಡ, ಹಲವು ಸೌಲಭ್ಯಗಳನ್ನು ಒಳಗೊಂಡ “ಆರಾಧ್ಯ ಸಂಕೀರ್ಣ”ದ ಲೋಕಾರ್ಪಣಾ ಸಮಾರಂಭ ನ.8ರಂದು ನಡೆದು ಸಂಜೆ ಸಭಾಕಾರ್ಯಕ್ರಮ ನಡೆಯಿತು. ಜಿ.ಕೆ.ಪ್ರಸನ್ನರವರ ತಾಯಿ ದೇವಕಿ ಅಮ್ಮ ಹಾಗೂ ಅತಿಥಿ ಅಭ್ಯಾಗತರು ದೀಪ ಬೆಳಗಿಸಿ ಉದ್ಘಾಟಿಸಿದರು. ಪುರೋಹಿತರು ವೇದಸ್ತುತಿ ಹಾಡಿದರು.






ಎಲ್ಐಸಿಯಲ್ಲಿ ಒಂದು ಆಸ್ತಿ ಹಾಗೂ ಶಕ್ತಿಯಾಗಿದ್ದಾರೆ:
ಭಾರತೀಯ ಜೀವವಿಮಾ ನಿಗಮ ಉಡುಪಿ ಶಾಖೆಯ ಹಿರಿಯ ವಿಭಾಗಾಧಿಕಾರಿ ಗಣಪತಿ ಭಟ್ ಶುಭಾಶಂಸನೆ ಮಾಡಿ ಜಿ.ಕೆ.ಪ್ರಸನ್ನರವರು ಎಲ್ಐಸಿಯಲ್ಲಿ ಒಂದು ಆಸ್ತಿ ಹಾಗೂ ಶಕ್ತಿಯಾಗಿದ್ದಾರೆ. ಎಲ್ಐಸಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಈ ಹಂತಕ್ಕೆ ಬಂದಿದ್ದಾರೆ. ಇದಕ್ಕೆ ಅವರ ಶ್ರಮವೇ ಕಾರಣ. ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೇರಲಿ ಅವರ ಜೀವನದಲ್ಲಿ ಪ್ರಸನ್ನವಾಗಿ ಬೆಳೆಯಲಿ ಎಂದು ಹೇಳಿ ಹಾರೈಸಿದರು.

ಪುತ್ತೂರಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಜಿ.ಕೆ.ಪ್ರಸನ್ನರವರು ಭಕ್ತಕೋಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಧೈರ್ಯ ಮಾಡಿ ಸಂಕೀರ್ಣ ನಿರ್ಮಿಸಿದ್ದಾರೆ. ಈ ಮೂಲಕ ಪುತ್ತೂರಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ನಾವೆಲ್ಲರೂ ಅವರಿಗೆ ಸಹಕಾರ, ಧೈರ್ಯ ಕೊಡಬೇಕು. ಅವರ ಜತೆಯಲ್ಲಿ ನಿಲ್ಲಬೇಕು ಎಂದರು. ಒಂದು ಕಟ್ಟಡ ನಿರ್ಮಾಣವಾದಾಗ ಅದರಿಂದ ಉದ್ಯಮ ಆರಂಭವಾಗುತ್ತದೆ. ಇದರಿಂದ ಹಲವರಿಗೆ ಉದ್ಯೋಗ ಸಿಗುತ್ತದೆ. ಸ್ಟಾರ್ಟ್ಅಪ್ ಉದ್ಯಮ ಆರಂಭಿಸುವವರಿಗೆ ಇಲ್ಲಿ ಅವಕಾಶವಿದೆ. ಅದಕ್ಕೆ ಬೇಕಾದಂತಹ ವ್ಯವಸ್ಥೆಗಳನ್ನು ಸರಕಾರದ ಮಟ್ಟದಲ್ಲಿ ಮಾಡಿಕೊಡುತ್ತೇನೆ ಎಂದ ಅವರು ಜೆ.ಕೆ.ಪ್ರಸನ್ನರವರಿಗೆ ಇನ್ನೂ ಹೆಚ್ಚಿನ ಶಕ್ತಿ, ಧೈರ್ಯವನ್ನು ದೇವರು ಕೊಡಲಿ ಎಂದು ಹೇಳಿ ಶುಭಹಾರೈಸಿದರು.

ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ:
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ ನನ್ನ ಊರು ಈ ರೀತಿಯಾಗಿ ಅಭಿವೃದ್ಧಿಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಇದಕ್ಕೆ ಕಾರಣ ಜಿ.ಕೆ.ಪ್ರಸನ್ನರವರು. ಇವರು ಸರಳತೆಯ ಮನುಷ್ಯ. ಸಾಮಾಜಿಕ ಸಾಮರಸ್ಯವನ್ನು ಕಾಣುವವರು. ಅವರು ನಿರ್ಮಿಸಿದ ಈ ಕಟ್ಟಡ ಕೇವಲ ಕಟ್ಟಡ ಮಾತ್ರವಲ್ಲ ಅದು ಅವರ ಭಾವನೆಯಾಗಿದೆ. ಅವರು ಆರಾಧನೆಯ ಮುಖಾಂತರ ಆರಾಧ್ಯ ಸಂಕೀರ್ಣ ನಿರ್ಮಿಸಿ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದ ಅವರು ಜಿ.ಕೆ.ಪ್ರಸನ್ನರವರ ಎಲ್ಲಾ ಕನಸುಗಳಿ ಶ್ರೇಯಸ್ಸು ಸಿಗಲಿ ಎಂದು ಹಾರೈಸಿದರು.

ಶ್ರದ್ಧೆ, ಪರಿಶ್ರಮ, ಸೇವಾ ಮನೋಭಾವವಿದ್ದಾಗ ಸಮಾಜ ಗೌರವಿಸುತ್ತದೆ:
ಪುತ್ತಿಲ ಪರಿವಾರ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಶ್ರಮಕ್ಕೆ ಭಗವಂತ ಅನುಗ್ರಹ ನೀಡುತ್ತಾನೆ ಎಂಬುದಕ್ಕೆ ಜಿ.ಕೆ.ಪ್ರಸನ್ನರವರು ಸಾಕ್ಷಿಯಾಗಿದ್ದಾರೆ. ಜೀವವಿಮಾ ನಿಗಮದಲ್ಲಿ ಕೆಲಸ ನಿರ್ವಹಿಸಿ ಅನೇಕ ಜನರಿಗೆ ಜೀವವನ್ನು ಕೊಟ್ಟವರು. ನರನು ನಾರಾಯಣನಾಗಿ ಪರಿವರ್ತನೆಯಾಗಲು ಶ್ರದ್ಧೆ, ವಿಶ್ವಾಸ, ಪರಿಶ್ರಮ, ಸೇವಾ ಮನೋಭಾವದ ಜತೆ ಬೆಳೆಯಬೇಕು. ಆಗ ಸಮಾಜವೂ ಅವನನ್ನು ಗೌರವಿಸುತ್ತದೆ ಎಂದರು. ಆರಾಧ್ಯ ಸಂಕೀರ್ಣದ ಮೂಲಕ ಈ ಪರಿಸರವೂ ಅಭಿವೃದ್ಧಿಯಾಗಲಿ. ಸಾವಿರಾರು ಜನರಿಗೆ ಉದ್ಯೋಗ ನೀಡುವ ಕೆಲಸ ನಡೆಯಲಿ ಎಂದು ಹೇಳಿ ಹಾರೈಸಿದರು.
ಜಿ.ಕೆ.ಪ್ರಸನ್ನರವರು ಭಕ್ತಕೋಡಿಯ ಶಿಲ್ಪಿಯಾಗಿದ್ದಾರೆ:
ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ. ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಬೃಹತ್ ಕಟ್ಟಡ ನಿರ್ಮಾಣಗೊಂಡಿದ್ದು ನಮಗೆ ಹೆಮ್ಮೆಯ ವಿಚಾರವಾಗಿದೆ. ಒಂದೇ ಸೂರಿನಡಿ ನೂರಾರು ವ್ಯವಸ್ಥೆಗಳು ಇಲ್ಲಿ ಲಭ್ಯವಿದೆ. ಇವರು ಪಾದರಸದಂತಹ ಚುರುಕಿನ ವ್ಯಕ್ತಿಯಾಗಿದ್ದಾರೆ. ಇವರು ನಿರ್ಮಿಸಿದ ಈ ಕಟ್ಟಡ ಇತಿಹಾಸದ ಪುಟ ಸೇರಿದೆ ಎಂದರು. ಜಿ.ಕೆ.ಪ್ರಸನ್ನರವರು ಭಕ್ತಕೋಡಿಯ ಶಿಲ್ಪಿಯಾಗಿದ್ದಾರೆ. ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎಂಬುದು ಮುಖ್ಯವಲ್ಲ. ಯಾವ ರೀತಿ, ಹೇಗೆ ಬದುಕಿದೆ ಎಂಬುದು ಮುಖ್ಯವಾಗಿದೆ.
ಸರ್ವೆ ಗ್ರಾಮದ ಕಿರೀಟಕ್ಕೆ ವಜ್ರದ ಕೊಡುಗೆ ಕೊಟ್ಟ ವ್ಯಕ್ತಿ:
ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ ಕುಮಾರ್ ಸೊರಕೆ ಮಾತನಾಡಿ ಸರ್ವೆ ಗ್ರಾಮದ ಕಿರೀಟಕ್ಕೆ ವಜ್ರದ ಕೊಡುಗೆ ಕೊಟ್ಟ ವ್ಯಕ್ತಿ ಜಿ.ಕೆ.ಪ್ರಸನ್ನರವರು. ಆರಾಧ್ಯ ಸಂಕೀರ್ಣದಲ್ಲಿ ಹಲವು ವ್ಯವಸ್ಥೆಗಳನ್ನು ನೀಡಿದ್ದಾರೆ. ಇಲ್ಲಿನ ಯುವಕರಿಗೆ ಬೆಳೆಯಲು, ಉದ್ಯೋಗಿಗಳಾಗಲು ಇಂತಹ ವ್ಯವಸ್ಥೆಗಳು ಸಹಾಯಕಾರಿಯಾಗಿದೆ ಎಂದರು. ಪ್ರತಿಯೊಬ್ಬ ಯುವಕರು ತನ್ನ ಪರಿಶ್ರಮದಿಂದ ದುಡಿದಾಗ ಸಮಾಜಕ್ಕೆ ಇಂತಹ ಕೊಡುಗೆಯನ್ನು ನೀಡಬಹುದು. ಇವರು ಎಲ್ಲರಿಗೂ ಆದರ್ಶಪ್ರಾಯರಾಗಲಿ ಎಂದ ಅವರು ಈ ಪ್ರದೇಶ ಸಾವಿರಾರು ಕೋಟಿ ರೂ. ವ್ಯವಹಾರ ಮಾಡುವ ಸಂಕೀರ್ಣವಾಗಿ ಮೂಡಿಬರಲಿ ಎಂದು ಹೇಳಿ ಹಾರೈಸಿದರು.
ಸರ್ವೆ ಗ್ರಾಮದ ಇತಿಹಾಸದಲ್ಲಿ ನೆನಪಲ್ಲಿ ಉಳಿಯುವ ಕೆಲಸ:
ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷ ಎಸ್.ಡಿ.ವಸಂತ ಮಾತನಾಡಿ ಪ್ರಸನ್ನರವರು ನನ್ನ ಆತ್ಮೀಯ ವ್ಯಕ್ತಿ. ಅವರು ಜೀವನದಲ್ಲಿ ಎತ್ತರಕ್ಕೆ ಏರಿದರೂ ಬಂದ ದಾರಿಯನ್ನು ಮರೆಯಲಿಲ್ಲ. ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಿದವರು. ಇಲ್ಲಿ ನಿರ್ಮಾಣ ಮಾಡಿದ ಸಂಕೀರ್ಣದಲ್ಲಿ ಹಲವು ಸೌಲಭ್ಯಗಳನ್ನು ನೀಡಿದ್ದಾರೆ. ಸರ್ವೆ ಗ್ರಾಮದ ಇತಿಹಾಸದಲ್ಲಿ ನೆನಪಲ್ಲಿ ಉಳಿಯುವಂತಹ ಕೆಲಸ ಪ್ರಸನ್ನರವರಿಂದ ಆಗಿದೆ ಎಂದು ಹೇಳಿ ಶುಭಹಾರೈಸಿದರು.
ಬೆವರು ಸುರಿಸಿ ಹಂತ ಹಂತವಾಗಿ ಮೇಲೆ ಬಂದಿದ್ದಾರೆ:
ಅಧ್ಯಕ್ಷತೆ ವಹಿಸಿದ್ದ ಕಲ್ಲಮ ಶ್ರೀಗುರುರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ|ಸೀತಾರಾಮ್ ಭಟ್ ಕಲ್ಲಮ ಮಾತನಾಡಿ ಜಿ.ಕೆ.ಪ್ರಸನ್ನರವರು ಸುಂದರವಾದ ವ್ಯಕ್ತಿತ್ವವುಳ್ಳವರು. ಅವರಲ್ಲಿ ಬದ್ಧತೆ, ಧೈರ್ಯ, ಸ್ಥೈರ್ಯ ಇದೆ. ಮಾಂತ್ರಿಕ ಸ್ಪರ್ಶತೆ ಇದೆ. ಅಲ್ಲದೆ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣವಿದೆ ಎಂದರು. ಇವರು ಅದೃಷ್ಟದಿಂದ ಮೇಲೆ ಬಂದವರಲ್ಲ. ಬೆವರು ಸುರಿಸಿ ಹಂತ ಹಂತವಾಗಿ ಮೇಲೆ ಬಂದಿದ್ದಾರೆ. ಅವರ ಮಾತೇ ಶಕ್ತಿ, ಬಂಡವಾಳ. ಕಾಯಕವೇ ಕೈಲಾಸ ಎಂದು ನಂಬಿ ಬದುಕಿದ ವ್ಯಕ್ತಿಯಾಗಿದ್ದಾರೆ ಎಂದು ಹೇಳಿ ಅವರ ಕುರಿತಾದ ಕವನ ವಾಚಿಸಿದರು.
ಬೆವರಿನಲ್ಲಿ ಸ್ನಾನ ಮಾಡಿ ಇತಿಹಾಸ ನಿರ್ಮಿಸಿದ್ದಾರೆ:
ನಿವೃತ್ತ ಮುಖ್ಯಶಿಕ್ಷಕ ಶ್ರೀನಿವಾಸ್ ಎಚ್.ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಜಿ.ಕೆ.ಪ್ರಸನ್ನರವರು ಮಧ್ಯಮ ವರ್ಗದಲ್ಲಿ ಜನಿಸಿದವರು. ಅವರು ಬೆಳೆದು ಬಂದ ದಾರಿ ಕಠಿಣವಾಗಿತ್ತು. ಸೈಕಲ್ ಹಿಡಿದುಕೊಂಡು ಜೀವ ವಿಮಾ ಪಾಲಿಸಿ ಮಾಡಿಕೊಂಡು ಬಂದವರು ಇವತ್ತು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರು. ಅವರು ನೀರಿನಲ್ಲಿ ಸ್ನಾನ ಮಾಡಲಿಲ್ಲ. ದುಡಿದು ಬೆವರಿನಲ್ಲಿ ಸ್ನಾನ ಮಾಡಿ ಇಂದು ಇತಿಹಾಸ ನಿರ್ಮಿಸಿದ್ದಾರೆ. ಈ ಗ್ರಾಮದಲ್ಲಿ ಪ್ರಥಮ ಬಾರಿಗೆ ಲಿಫ್ಟ್ ವ್ಯವಸ್ಥೆ ತಂದಿದ್ದಾರೆ. ಈ ಸಂಕೀರ್ಣದಿಂದ ಹಲವರಿಗೆ ಉದ್ಯೋಗ ಸಿಗುವಂತಹ ಕೆಲಸ ಆಗಲಿ. ಭಕ್ತಕೋಡಿ ಉಪನಗರವಾಗಿ ಬೆಳೆಯಲಿ ಎಂದು ಹೇಳಿ ಹಾರೈಸಿದರು.
ಜಿ.ಕೆ.ಪ್ರಸನ್ನರವರ ಪುತ್ರ, ಆದಿತ್ಯ ನಾರಾಯಣ ವಂದಿಸಿದರು. ಡಾ.ವೆಂಕಟೇಶ್ ಮಂಜುಳಗಿರಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬೆರ್ವೋಡಿ ವಸಂತರಾಜ್ ಕರಿಂಕ, ದರ್ಬೆ ಕಾನಾವು ಸ್ಕಿನ್ ಕ್ಲಿನಿಕ್ನ ಡಾ.ನರಸಿಂಹ ಶರ್ಮ ಕಾನಾವು, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುಧೀರ್ಕೃಷ್ಣ ಪಡ್ಡಿಲ್ಲಾಯ ತೌಡಿಂಜ, ಮುರಳೀಧರ ಭಟ್ ಬಂಗಾರಡ್ಕ, ಶಶಿಧರ್ ನೆಟ್ಟಾರ್, ನಿವೃತ್ತ ಮುಖ್ಯಗುರು ಮಹಾಬಲ ರೈ ಮೇಗಿನಗುತ್ತು, ಸುರೇಶ್ ರೈ ಸೂಡಿಮುಳ್ಳು, ಪ್ರಸಾದ್ ರೈ ಸೊರಕೆ ಶುದ್ಧಂಗಾನ, ನರಸಿಂಹ ತೇಜಸ್ವಿ ಕಾನಾವು, ಮಹಾಬಲೇಶ್ವರ ಭಟ್ ವೀರಮಂಗಲ, ಗಣಪತಿ ಭಟ್ ಕೋಡಿಂಬಾಳ, ಕೆ.ಎಸ್.ಮಧುಸೂದನ ಭಟ್ ಕಲ್ಮಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಕ್ತಕೋಡಿ ಒಕ್ಕೂಟದ ಅಧ್ಯಕ್ಷ ಶಶಿಧರ್ ಎಸ್.ಡಿ ಸರ್ವೆದೋಳ, ಸರ್ವೆ ಎಸ್.ಕೆ. ಡಿಜಿಟಲ್ನ ಸುಬ್ರಹ್ಮಣ್ಯ ಕರಂಬಾರ್, ಲೆಕ್ಕಪರಿಶೋಧಕ ಅರವಿಂದ ಕೃಷ್ಣ ಶಿವಗಿರಿ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಕಮಲೇಶ್ ಸರ್ವೆದೋಳಗುತ್ತು, ಪುತ್ತೂರು ಕಾಮಧೇನು ಆಗ್ರೋ ಸೇಲ್ಸ್ನ ಶ್ರೀರಂಜನ್ ಪಿ.ಎಸ್., ಭಕ್ತಕೋಡಿ ಎಸ್.ಎಂ.ಸುಪಾರಿ ಟ್ರೇಡರ್ಸ್ನ ಶರೀಫ್ ಸರ್ವೆ, ಸರ್ವಿರ್ ಸರ್ಜಿಕಲ್ ರೆಮೆಡಿನ ತ್ರಿವಿಕ್ರಮ್ ಭಟ್, ಸರ್ವೆ ಕೇಶವಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪುತ್ತೂರು ಶ್ರೀನಿಧಿ ಬೋರ್ವೆಲ್ಸ್ ಮಾಲಕ ಗೋಪಾಲಕೃಷ್ಣ ಪಿ. ಸಹಕರಿಸಿದರು.
ದೈವಜ್ಞರಿಗೆ, ಪುರೋಹಿತರಿಗೆ ಸನ್ಮಾನ
ಹಿರಿಯ ಜ್ಯೋತಿಶಾಸ್ತ್ರಜ್ಞ, ದೈವಜ್ಞ ಜ್ಯೋತಿರ್ವಿದ್ವಾನ್ ವಳಕ್ಕುಂಜ ವೆಂಕಟ್ರಮಣ ಭಟ್, ನೇಪಾಳದ ಶ್ರೀಪಶುಪತಿ ದೇವಾಲಯದ ನಿಕಟಪೂರ್ವ ಪ್ರಧಾನ ಅರ್ಚಕ ವೇ.ಮೂ.ಬ್ರಹ್ಮಶ್ರೀ ವಿದ್ವಾನ್ ಶ್ರೀರಾಮ ಕಾರಂತ, ಪುರೋಹಿತರಾದ ವೇ.ಮೂ.ಬ್ರಹ್ಮಶ್ರೀ ಅನಂತ ನಾರಾಯಣ ಭಟ್ ಪರಕ್ಕಜೆ ಹಾಗೂ ವಿಶ್ರಾಂತ ಮುಖ್ಯಗುರು ವೇ.ಮೂ.ಮಂಜುಳಗಿರಿ ವೆಂಕಟರಮಣ ಭಟ್ಟರವರನ್ನು ಸನ್ಮಾನಿಸಲಾಯಿತು. ಶಾಲು, ಹಾರ, ಪೇಟ, ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಜಿ.ಕೆ.ಪ್ರಸನ್ನ ದಂಪತಿ ಸನ್ಮಾನಿಸಿದರು. ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿ ಆರಾಧ್ಯ ಸಂಕೀರ್ಣ ಅಭಿವೃದ್ಧಿ ಹೊಂದಿ ಯಶಸ್ಸು ಹೊಂದುವಂತೆ ಹಾರೈಸಿದರು. ರವಿಶಂಕರ್ ಬೆಟ್ಟಂಪಾಡಿ ಸನ್ಮಾನಿತರ ಪರಿಚಯ ಮಾಡಿದರು.
ಕಟ್ಟಡದ ಇಂಜಿನಿಯರ್ ಪ್ರಸನ್ನ ಭಟ್ರವರಿಗೆ ಸನ್ಮಾನ
ಆರಾಧ್ಯ ಸಂಕೀರ್ಣ ಕಟ್ಟಡದ ಇಂಜಿನಿಯರ್, ಶ್ರೀರಾಮ ಕನ್ಸ್ಟ್ರಕ್ಷನ್ ಮಾಲಕ ಪ್ರಸನ್ನ ಭಟ್ರವರನ್ನು ಜಿ.ಕೆ.ಪ್ರಸನ್ನ ದಂಪತಿ ಸನ್ಮಾನಿಸಿದರು.
ಜಿ.ಕೆ.ಪ್ರಸನ್ನ ದಂಪತಿಗೆ ಷಣ್ಮುಖ ಯುವಕ ಮಂಡಲದಿಂದ ಸನ್ಮಾನ
ಆರಾಧ್ಯ ಸಂಕೀರ್ಣದ ಮಾಲಕ ಜಿ.ಕೆ.ಪ್ರಸನ್ನ ಮತ್ತು ದೇವಿಕಾ ದಂಪತಿಯನ್ನು ಭಕ್ತಕೋಡಿ ಷಣ್ಮುಖ ಯುವಕ ಮಂಡಲದ ಪರವಾಗಿ ನಿವೃತ್ತ ಮುಖ್ಯಶಿಕ್ಷಕ ಶ್ರೀನಿವಾಸ್ ಎಚ್.ಬಿ.ರವರು ಯುವಕ ಮಂಡಲದ ಸದಸ್ಯರೊಂದಿಗೆ ಶಾಲು, ಹಾರ, ಪೇಟ, ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಸನ್ಮಾನಿಸಿದರು.









