





ಮಂಗಳೂರು: ಕೆಡಿಪಿ ಸಭೆಯು ಜಿ.ಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಪುತ್ತೂರು ಶಾಸಕ ಅಶೋಕ್ ರೈ ಅವರು ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ತಿಳಿಸಿದರು.


ಕೋವಿ ಪರವಾನಿಗೆ ನವೀಕರಣ ಮಾಡುತ್ತಿಲ್ಲ ಯಾಕೆ? ಕೃಷಿಕರಿಗೆ ಕೋವಿ ಅತೀ ಅಗತ್ಯ





ಸರಕಾರ ಈ ಹಿಂದೆ ಜಿಲ್ಲೆಯ ಕೃಷಿಕರಿಗೆ ಕೋವಿ ಪರವಾನಿಗೆಯನ್ನು ನೀಡಿತ್ತು. ಕೋವಿ ಪರವಾನಿಗೆ ಹೊಂದಿದ್ದ ವ್ಯಕ್ತಿ ಮರಣ ಹೊಂದಿದರೆ ಅವರ ಮಕ್ಕಳ ಹೆಸರಲ್ಲಿ ಕೋವಿ ಲೈಸೆನ್ಸ್ ಪಡೆಯಬೇಕಾಗಿದೆ. ಆದರೆ ಪೊಲೀಸ್ ಇಲಾಖೆ ಲೈಸೆನ್ಸ್ ನವೀಕರಣವನ್ನು ಮಾಡುತ್ತಿಲ್ಲ ಯಾಕೆ? ಈ ಬಗ್ಗೆ ಸ್ಪಷ್ಟನೆಯನ್ನು ನೀಡುವಂತೆ ಶಾಸಕ ಅಶೋಕ್ ರೈ ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೃಷಿಕರಿಗೆ ಕೋವಿ ಇಲ್ಲದೆ ಬದುಕು ಇಲ್ಲ. ಕೃಷಿಗೆ ಮಂಗಗಳ ಹಾವಳಿ, ಆನೆ ಹಾವಳಿ ಇರುತ್ತದೆ. ಅವುಗಳಿಗೆ ಕೋವಿಯಿಂದ ಶೂಟ್ ಮಾಡುವುದಿಲ್ಲ ಜಸ್ಟ್ ಕೋವಿ ತೋರಿಸಿದರೆ ಸಾಕು ಅವು ಓಡಿ ಹೋಗ್ತದೆ. ಆದರೆ ಈ ವರ್ಷ ಕೋವಿಗಳ ಲೈಸೆನ್ಸ್ ಪರವಾನಿಗೆ ನವೀಕರಣವನ್ನೇ ಮಾಡುತ್ತಿಲ್ಲ ಯಾಕೆ? ನವೀಕರಣಕ್ಕೆ ಏನು ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಎಸ್.ಪಿ ಈಗಾಗಲೇ ಕೋವಿ ಪರವಾನಿಗೆಗೆ 25 ಸಾವಿರ ಅರ್ಜಿ ಬಂದಿದೆ. ಲೈಸೆನ್ಸ್ ನವೀಕರಣಕ್ಕೆ ಕೆಲವೊಂದು ನಿಬಂಧನೆಗಳನ್ನು ಅಳವಡಿಸಲಾಗಿದೆ. ನಿಬಂದನೆಗಳಿಗೆ ಪ್ರಕಾರ ಇದ್ದಲ್ಲಿ ಲೈಸೆನ್ಸ್ ಕೊಡಲಾಗುತ್ತದೆ. ಕ್ರಿಮಿನಲ್ ಹಿನ್ನೆಲೆ ಇದ್ದಲ್ಲಿ ಲೈಸನ್ಸ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ ಅವರು ಹೊಸ ಪರವಾನಿಗೆ ಕೊಡಿ ಎಂದು ಕೇಳುತ್ತಿಲ್ಲ ಇದ್ದ ಲೈಸೆನ್ಸನ್ನು ನವೀಕರಣ ಮಾಡಿ ಎಂದು ಹೇಳುತ್ತಿದ್ದೇವೆ. ಕ್ರಿಮಿನಲ್ ಹಿನ್ನೆಲೆ ಇದ್ದರೆ ಕೊಡಬೇಡಿ. ಉಳಿದವರಿಗೆ ಕೊಡಬಹುದಲ್ಲ ಎಂದು ಪ್ರಶ್ನಿಸಿದರು. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದೇ ಇದ್ದಲ್ಲಿ, ಕೃಷಿಕರೇ ಆಗಿದ್ದಲ್ಲಿ ಪರವಾನಿಗೆ ನೀಡಿ ಎಂದು ಸಚಿವರು ಸೂಚನೆ ನೀಡಿದರು.
ಅಡಿಕೆ ಎಲೆ ಚುಕ್ಕಿ ರೋಗದಿಂದ ಕೃಷಿಕರು ಆತಂಕದಲ್ಲಿದ್ದಾರೆ- ಸರಕಾರ ಗಂಭೀರವಾಗಿ ಪರಿಗಣಿಸಿ
ದಕ ಜಿಲ್ಲೆಯ ಪುತ್ತೂರು ಮತ್ತು ಸುಳ್ಯದಲ್ಲಿ ಅಡಿಕೆ ಎಲೆ ಚುಕ್ಕಿ ರೋಗದಿಂದ ಗಿಡವೇ ನಾಶವಾಗುತ್ತಿದೆ. ಇದಕ್ಕೆ ಇದುವರೆಗೂ ಯಾವುದೇ ಔಷಧಿಯೂ ಸಿಕ್ಕಿಲ್ಲ ಈ ಕಾರಣಕ್ಕೆ ಕೃಷಿಕರು ಆತಂಕದಲ್ಲಿದ್ದು ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಕೆಡಿಪಿ ಸಭೆಯಲ್ಲಿ ಆಗ್ರಹಿಸಿದ್ದಾರೆ.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಕಳೆದ ಒಂದೆರಡು ವರ್ಷದಿಂದ ಈ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಒಂದು ಬಾರಿ ಈ ರೋಗ ಕಾಣಿಸಿಕೊಂಡರೆ ಮತ್ತೆ ಅಡಿಕೆ ಗಿಡ ಸತ್ತೇ ಹೋಗುತ್ತಿದೆ. ಕೃಷಿಕರು ಯಾವುದೇ ಕೀಟನಾಶಕ ಸಿಂಪಡನೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ, ಗೊಬ್ಬರ ಹಾಕಿದರೂ ಪ್ರಯೋಜನವಿಲ್ಲ. ಈಗಾಗಲೇ ಪುತ್ತೂರಿನಲ್ಲಿ 8 ಗ್ರಾಮ ಹಾಗೂ ಸುಳ್ಯದಲ್ಲಿ 28 ಗ್ರಾಮದಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಇದುವರೆಗೂ ಯಾರಿಂದಲೂ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂದು ಹೇಳಿದ ಶಾಸಕರು ದ ಕ ಜಿಲ್ಲೆಯಲ್ಲಿ ಅಡಿಕೆಗೆ ತೊಂದರೆಯಾದಲ್ಲಿ ಈ ಭಾಗದ ಜನರ ಬದುಕೇ ದುಸ್ತರವಾಗಲಿದೆ ಎಂದು ಹೇಳಿದರು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾ ಅಧ್ಯಕ್ಷರು ದ.ಕ ಜಿಲ್ಲೆಯ ಜನಪ್ರತಿನಿಧಿಗಳು ಸಭೆ ಸೇರಿ ಇದನ್ನು ಸರಕಾರದ ಮುಂದೆ ವಿಷಯ ಮಂಡಿಸಬೇಕು. ಇದಕ್ಕೆ ಸುಲಭ ಪರಿಹಾರ ಸಾಧ್ಯವಿಲ್ಲವಾದ್ದರಿಂದ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸುವ ಎಂದು ಹೇಳಿದರು.
ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರ ವ್ಯವಸ್ಥೆ ಮಾಡಿ: ಕೆಡಿಪಿ ಸಭೆಯಲ್ಲಿ ಆಗ್ರಹ ಮಾಡಿಸುತ್ತೇನೆ ಎಂದ ಆರೋಗ್ಯ ಸಚಿವರು
ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭ ಮಾಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಕೆಡಿಪಿ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ ಮಾಡಿದರು. ಈಗಾಗಲೇ 28 ಮಂದಿ ರೋಗಿಗಳು ಈ ಭಾಗದಲ್ಲಿ ಇದ್ದು ಪರ್ಯಾಯ ವ್ಯವಸ್ಥೆ ಇಲ್ಲದೆ ಸಂಕಷ್ಟಪಡುತ್ತಿದ್ದಾರೆ. ಹೆಚ್ಚಿನವರು ಬಡವರಾದ ಕಾರಣ ಡಯಾಲಿಸಿಸ್ ಗೆ ಕಷ್ಡವಾಗುತ್ತಿದೆ ಈ ಕಾರಣಕ್ಕೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು ಕೂಡಲೇ ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ದ.ಕ ಜಿಲ್ಲೆಯ ಆರೋಗ್ಯಾಧಿಕಾರಿಗಳನ್ನು ಈ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂದು ಮನವಿ ಮಾಡಿದರು.
ಕಂಬಳ 24 ಗಂಟೆಯೂ ನಡೆಯುತ್ತದೆ: ನಿಭಂದನೆ ಇಲ್ಲದೆ ಪೊಲೀಸ್ ಇಲಾಖೆ ಅನುಮತಿ ನೀಡಬೇಕು
ಪುತ್ತೂರು:ತುಳುನಾಡಿನ ಜನಪದ ಕ್ರೀಡೆ ಕಂಬಳ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯಲಿದೆ. ಈ ಕಂಬಳ ದಿನದ 24 ಗಂಟೆಯೂ ನಿರಂತರವಾಗಿ ನಡೆಯುತ್ತಿದೆ. ಈ ಸಮಯದಲ್ಲಿ ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟ್ಂ ಬಳಕೆ ಯಾಗುತ್ತದೆ. ಕಂಬಳಕ್ಕೆ ಯಾವುದೇ ನಿಬಂಧನೆ ಇಲ್ಲದೆ ಪರವಾನಿಗೆ ನೀಡಬೇಕು ಎಂದು ಶಾಸಕ ಅಶೋಕ್ ರೈ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಎಸ್ಪಿ ಅನುಮತಿ ನೀಡಲಾಗುತ್ತದೆ ಎಂದು ಸಭೆಗೆ ತಿಳಿಸಿದರು.









