





ಸ್ವಚ್ಛ ಮನೆ, ಸ್ವಚ್ಛ ಗ್ರಾಮ, ಸ್ವಚ್ಛ ನಗರ ನಿರ್ಮಾಣ ನಮ್ಮೆಲ್ಲರ ಹೊಣೆ: ಶೀನ ಶೆಟ್ಟಿ


ಪುತ್ತೂರು: ಎಲ್ಲೆಂದರಲ್ಲಿ ಕಸ ಬಿಸಾಡುವ ಮತ್ತು ಸುಡುವ ಅಭ್ಯಾಸವನ್ನು ಬಿಡುವ ಮೂಲಕ ಪ್ರತಿಯೊಬ್ಬರು ಸ್ವಚ್ಛತೆಯ ಮಹತ್ವ ಮತ್ತು ಅಗತ್ಯವನ್ನು ಅರಿತುಕೊಳ್ಳಬೇಕು, ಆರೋಗ್ಯಕರ ನೈರ್ಮಲ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಚ್ಛತೆ ನಮ್ಮ ಸಂಸ್ಕೃತಿ ಆಗಬೇಕು ಎಂದು ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ, ಸ್ವಚ್ಛತಾ ಜಿಲ್ಲಾ ರಾಯಭಾರಿ ಶೀನ ಶೆಟ್ಟಿಯವರು ಹೇಳಿದರು.





ಕಸ ಮುಕ್ತ ಮನೆ, ಕಸ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕರುಗಳು, ಸ್ವಚ್ಛತಾ ಜಿಲ್ಲಾ ರಾಯಭಾರಿಗಳು ಆಗಿರುವ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯರವರು ನ.೧೩ ರಂದು ಒಳಮೊಗ್ರು ಗ್ರಾಮ ಪಂಚಾಯತ್ಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಸ್ವಚ್ಛತೆಯೇ ಸಮೃದ್ಧಿ, ಸ್ವಚ್ಛತೆಯೇ ಸಂಸ್ಕೃತಿ ಎಂಬಂತೆ ಅಪ್ನಾದೇಶ್ ಮಾದರಿ ಗ್ರಾಮ ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯತ್ಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದಾರೆ ಅದರಂತೆ ಒಳಮೊಗ್ರು ಗ್ರಾಮ ಪಂಚಾಯತ್ಗೆ ಭೇಟಿ ನೀಡಿದ ಇವರುಗಳು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಅಧಿಕಾರಿ ವರ್ಗದವರೊಂದಿಗೆ ಮಾತುಕತೆ ನಡೆಸಿದರು.
ಒಳಮೊಗ್ರು ಗ್ರಾಮವನ್ನು ಕಸ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಮನೆ, ಸ್ವಚ್ಛ ಗ್ರಾಮ, ಸ್ವಚ್ಛ ನಗರ ನಿರ್ಮಾಣ ಮತ್ತು ನಿರಂತೆ ನಿರ್ವಹಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಹೇಳಿದ ಕೃಷ್ಣ ಮೂಲ್ಯರವರು ಗ್ರಾಮದ ಸರ್ವರು ಸಹಕಾರ ನೀಡಿದರೆ ಗ್ರಾಮವನ್ನು ಕಸ ಮುಕ್ತ ಗ್ರಾಮವನ್ನಾಗಿಸುವುದು ದೊಡ್ಡ ವಿಷಯವಲ್ಲ, ಆರಂಭದಲ್ಲಿ ನಮ್ಮ ಮನೆ ಕಸ ಮುಕ್ತ ಮನೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಚಿತ್ರಾ ಬಿ.ಸಿ, ಶಾರದಾ ಆಚಾರ್ಯ, ಸುಂದರಿ ಪರ್ಪುಂಜ, ನಳಿನಾಕ್ಷಿ, ವನಿತಾ ಕುಮಾರಿ, ರೇಖಾ ಯತೀಶ್, ಪ್ರದೀಪ್ ಸೇರ್ತಾಜೆ, ಲತೀಫ್ ಕುಂಬ್ರ, ಮಹೇಶ್ ರೈ ಕೇರಿ ಉಪಸ್ಥಿತರಿದ್ದರು. ಗ್ರಾಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ ಸ್ವಾಗತಿಸಿ, ವಂದಿಸಿದರು. ಗ್ರಾಪಂ ಕಾರ್ಯದರ್ಶಿ ಜಯಂತಿ, ಸಿಬ್ಬಂದಿಗಳಾದ ಕೇಶವ, ಗುಲಾಬಿ, ಜಾನಕಿ, ಲೋಕನಾಥ್, ಮೋಹನ್ ಕೆ.ಪಿ, ಸಿರಿನಾ ಉಪಸ್ಥಿತರಿದ್ದರು.
ಸ್ವಚ್ಛತೆಗೆ ಗ್ರಾಪಂ ಹೆಚ್ಚಿನ ಮಹತ್ವ ನೀಡುತ್ತಿದೆ.
ಸ್ವಚ್ಛತೆಯ ವಿಷಯದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಉತ್ತಮ ಕೆಲಸವನ್ನು ಮಾಡುತ್ತಿದೆ, ಗ್ರಾಮದ ಸ್ವಚ್ಛತೆಯ ವಿಷಯದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮತ್ತು ಆಡಳಿತ ಮಂಡಳಿ, ಅಧಿಕಾರಿ ವರ್ಗದವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಳಮೊಗ್ರು ಗ್ರಾಮ ಕಸ ಮುಕ್ತ ಗ್ರಾಮವಾಗಬೇಕು ಎಂದು ಹೇಳಿದ ಶೀನ ಶೆಟ್ಟಿಯವರು ಗ್ರಾಪಂಗೆ ಅಭಿನಂದನೆ ಸಲ್ಲಿಸಿದರು.










