ಹಣ ಕಳುಹಿಸಿದ ಮೆಸೇಜ್ ಸೃಷ್ಟಿಸಿ ವಂಚನೆಗೆ ಯತ್ನ

0

ಉಪ್ಪಿನಂಗಡಿ: 2,500 ರೂ.ನ ಬದಲಾಗಿ 25,000 ರೂ ಹಣವನ್ನು ತಪ್ಪಾಗಿ ಕಳುಹಿಸಲಾಗಿದೆ ಎಂದು ಮೆಸೇಜ್‌ನ್ನು ಮುಂದಿರಿಸಿ ಮಿಕ್ಕಿ ಉಳಿದ ಹಣವನ್ನು ತಕ್ಷಣವೇ ಹಿಂದಿರುಗಿಸಿ ಎಂದು ವಿನಂತಿಸಿ ಉದ್ಯಮಿಯೋರ್ವರನ್ನು ವಂಚನೆಗೆ ಸಿಲುಕಿಸಲು ಯತ್ನಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಇಲ್ಲಿನ ಹಳೇ ಬಸ್ ನಿಲ್ದಾಣದ ಬಳಿ ಇರುವ ನ್ಯೂ ಅಶ್ವಿನಿ ಸ್ಟೋರ್ಸ್ ಮಾಲಕರಾದ ಗಣೇಶ್ ಬಿ. ಅವರಿಗೆ ಹಿಂದಿ ಭಾಷೆಯಲ್ಲಿ ಪೋನಾಯಿಸಿದ ವ್ಯಕ್ತಿ `ನಮಗೆ ಒಂದು ಮಿಕ್ಸಿ ಗ್ರೈಂಡರ್ ಬೇಕಾಗಿದೆ. ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತೇನೆ. ಅದಕ್ಕೆ ಮೊದಲು ಅದರ ಹಣವನ್ನು ಆನ್ ಲೈನ್ ಮೂಲಕ ನಾನೇ ಪಾವತಿಸುತ್ತೇನೆ’ ಎಂದು ತಿಳಿಸಿದ್ದಲದೆ 2,500ರ ಕನಿಷ್ಠ ಬೆಲೆಯ ಮಿಕ್ಸಿಯನ್ನು ಖರೀದಿಸುವ ಒಪ್ಪಂದವನ್ನು ಮಾಡಿಕೊಂಡಿದ್ದ.

ಹಣ ಕಳುಹಿಸಲು ಬೇಕಾದ ಖಾತೆ ನಂಬ್ರವನ್ನು ಕೇಳಿ ಪಡೆದ ಆ ವ್ಯಕ್ತಿ ಖಾತೆಯನ್ನು ದೃಢೀಕರಿಸುವ ಸಲುವಾಗಿ 10 ರೂ. ಹಣವನ್ನು ವರ್ಗಾಹಿಸಿ ಅದರ ಸಂದೇಶವನ್ನು ವಾಟ್ಸಪ್ ಮೂಲಕ ಗಣೇಶ್‌ರವರಿಗೆ ಕಳುಹಿಸಿದ್ದ. ಸಂದೇಶವನ್ನು ನೋಡಿದ ಅಂಗಡಿ ಮಾಲಕರು ಅದರಲ್ಲಿನ ಖಾತೆಯ ವಿವರವನ್ನು ಖಚಿತಪಡಿಸಿ ಹಣ ಬಂದಿದೆ ಎಂದು ತಿಳಿಸಿದ್ದರು. ಕೂಡಲೇ ಆತ ಮಿಕ್ಸಿಯ ಬಾಬ್ತು 2,500 ರೂ. ಹಣವನ್ನು ಈಗಲೇ ಕಳುಹಿಸುತ್ತೇನೆಂದು ತಿಳಿಸಿ ಕೆಲ ನಿಮಿಷದ ಬಳಿಕ 25,000 ರೂ. ಹಣವನ್ನು ವರ್ಗಾಯಿಸಲಾದ ಸಂದೇಶವನ್ನು ವಾಟ್ಸಪ್ ಮೂಲಕ ಕಳುಹಿಸಿರುತ್ತಾನೆ. ಬಳಿಕ ಆತ ಮಿಕ್ಸಿಯ ಹಣ ತಲುಪಿರುವುದನ್ನು ದೃಢಪಡಿಸಲು ಪೋನಾಯಿಸಿದಾಗ ಸಂದೇಶವನ್ನು ನೋಡಿದ್ದ ಗಣೇಶ್ ರವರು ನೀವು 2,500 ರೂ.ನ ಬದಲು 25,000 ರೂ ಹಣವನ್ನು ಕಳುಹಿಸಿದ್ದೀರಿ ಎಂದು ತಿಳಿಸಿದ್ದಾರೆ. ಆ ವೇಳೆ ತನಗೆ ಆ ತನಕ ಗೊತ್ತೇ ಇರಲಿಲ್ಲ ಎಂಬಂತಿದ್ದ ಆ ವ್ಯಕ್ತಿ ತಿಳಿಯದೇ ಒಂದು ಸೊನ್ನೆ ಹೆಚ್ಚು ಹಾಕಿ ಅವಾಂತರವಾಗಿದೆ. ಹೆಚ್ಚುವರಿ ಮೊತ್ತವನ್ನು ವಾಪಾಸು ನನ್ನ ಖಾತೆಗೆ ಹಾಕಿ ಎಂದು ವಿನಂತಿಸಿದ್ದಾನೆ. ಖಾತೆಗೆ ಹಾಕುವುದಿಲ್ಲ. ಬದಲಾಗಿ ಮಿಕ್ಸಿ ಪಡೆದುಕೊಂಡು ಹೋಗಲು ಬರುವ ವ್ಯಕ್ತಿಯ ಕೈಯಲ್ಲಿ ಕೊಡುತ್ತೇನೆ ಎಂದು ಅಂಗಡಿ ಮಾಲಕರು ತಿಳಿಸುತ್ತಾರೆ. ಆಯಿತೆಂದು ಒಪ್ಪಿದ ಆ ವ್ಯಕ್ತಿ ಒಂದಷ್ಟು ಸಮಯ ಕಳೆದು ಮತ್ತೆ ಪೋನಾಯಿಸಿ ನನಗೆ ತುರ್ತು ಅಗತ್ಯತೆ ಇರುವುದರಿಂದ ಆ ಹೆಚ್ಚುವರಿ ಹಣವನ್ನು ಆನ್ ಲೈನ್ ನಲ್ಲಿ ಖಾತೆಗೆ ವರ್ಗಾಹಿಸಿ ಎಂದು ವಿನಂತಿಸುತ್ತಾನೆ. ಆ ವೇಳೆ ಸಂಶಯಗೊಂಡ ಅಂಗಡಿ ಮಾಲಕರು ಹಣ ಜಮೆ ಗೊಂಡಿರುವ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಸದ್ರಿ ಖಾತೆಗೆ ಮೆಸೇಜ್ ನಲ್ಲಿ ತಿಳಿಸಿದ ಯಾವುದೇ ಮೊತ್ತ ಜಮೆಯಾಗದಿರುವುದು ಕಂಡು ಬಂದಿತ್ತು. ನಕಲಿ ಮೆಸೇಜ್ ಸೃಷ್ಟಿಸಿ ಹಣ ಕಬಳಿಸುವ ಈ ವಂಚನಾ ಜಾಲಕ್ಕೆ ಇನ್ಯಾವ ವರ್ತಕರೂ ಬಲಿಯಾಗದಿರಲಿ ಎಂಬ ಆಶಯದಲ್ಲಿ ಪ್ರಕರಣವನ್ನು ಅವರು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.

ವ್ಯವಹಾರಿಕ ಒತ್ತಡದಲ್ಲಿ ಇರುವ ವರ್ತಕರ ಗಡಿಬಿಡಿಯ ಮನೋಸ್ಥಿತಿಯ ದುರ್ಲಾಭ ಪಡೆದು ತಪ್ಪಿ ಹೆಚ್ಚುವರಿ ಹಣ ಪಾವತಿಸಲಾಗಿದೆ ಎಂದು ನಂಬಿಸುವ ಕೃತಕ ಆನ್ ಲೈನ್ ವರ್ಗಾವಣೆಯ ಸಂದೇಶವನ್ನು ಸೃಷ್ಠಿಸಿ ಅನುಕಂಪದ ಭಾವನೆಯನ್ನು ಬಿತ್ತಿ ಹಣ ಕಬಳಿಸುವ ಕೃತ್ಯದ ಬಗ್ಗೆ ಜನತೆ ಎಚ್ಚರ ವಹಿಸಬೇಕಾಗಿದೆ.

LEAVE A REPLY

Please enter your comment!
Please enter your name here