





ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಇಂದು,ಸಂವಿಧಾನ ದಿನಾಚರಣೆಯನ್ನು ಆಚರಿಸಿ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ಬರೆದ “ಸಂವಿಧಾನ ಓದು” ಎಂಬ ಪುಸ್ತಕವನ್ನು, ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಎಲ್ಲಾ ವಲಯಗಳಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.



ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸಂವಿಧಾನವನ್ನು ಪ್ರತಿಯೊಬ್ಬರು ಅರಿತು ಬಾಳಿದರೆ ಸಮಾಜದಲ್ಲಿ ಯಾವುದೇ ಸಂಘರ್ಷಕ್ಕೆ ಅವಕಾಶವಿರುವುದಿಲ್ಲ. ಒಬ್ಬರು ಇನ್ನೊಬ್ಬರ ಹಕ್ಕುಗಳ ಮೇಲೆ, ದಬ್ಬಾಳಿಕೆ ನಡೆಸಿದಾಗ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಇದನ್ನು ತಡೆಯಲು ಪ್ರತಿಯೊಬ್ಬ ನಾಗರಿಕನು ಭಾರತದ ಸಂವಿಧಾನವನ್ನು ಅರಿತು ಬಾಳುವ ಉದ್ದೇಶದಿಂದ, ಸರಕಾರವು ಸಂವಿಧಾನ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಈ ಮೂಲಕ ಮತ್ತೊಮ್ಮೆ ಸಂವಿಧಾನವನ್ನು ಅರಿಯುವ ಕೆಲಸವಾಗಬೇಕು ಎಂದರು.





ಸಂವಿಧಾನದ ವಿಚಾರವಾಗಿ ಮಾತನಾಡಿದ, ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಭಾರತದ ಸಂವಿಧಾನವು ಅಂಗೀಕಾರಗೊಂಡು ಇಂದಿಗೆ ಸರಿಸುಮಾರು 76 ವರ್ಷ ಕಳೆದರೂ, ಇನ್ನೂ ಸಂವಿಧಾನದ ವಿಚಾರಗಳನ್ನು ಅರಿಯದೆ ಕೆಲವು ಜನರು ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ‘ಸಂವಿಧಾನ ಓದು’ ಪುಸ್ತಕವನ್ನು ವಿತರಿಸುವುದರೊಂದಿಗೆ ಜನರಿಗೆ ಸಂವಿಧಾನದ ಅರಿವು ನೀಡುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸಿಕ್ವೆರಾ ಸಾಮೆತಡ್ಕ, ಕಾರ್ಯದರ್ಶಿ ಇಬ್ರಾಹಿಂ ಬಾತಿಶ ಸಾಲ್ಮರ, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಾಬು ಮರಿಕೆ, ಕಚೇರಿ ಕಾರ್ಯದರ್ಶಿ ಜೋನ್ ಸಿರಿನ್, ಸಂಘಟನಾ ಕಾರ್ಯದರ್ಶಿ ಸಲಾಂ ಸಂಪ್ಯ, ಕಾರ್ಮಿಕ ಘಟಕದ ಸಂಚಾಲಕ ಜಯಪ್ರಕಾಶ್, ಅಸಂಘಟಿತ ಕಾರ್ಮಿಕ ಸಂಘದ ಕಾರ್ಯದರ್ಶಿ ಸಿದ್ದೀಕ್ ಮೊಟ್ಟೆತ್ತಡ್ಕ, ಕಚೇರಿ ಸಹಾಯಕ ನವಾಜ್ ಮತ್ತಿತರರು ಉಪಸ್ಥಿತರಿದ್ದರು.






