




ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಕ್ಷಿಣ ಕನ್ನಡ ಹಾಗೂ ಉಡುಪಿ ಹಾಗೂ ರಾಜಧಾನಿ ಬೆಂಗಳೂರು ಸೇರಿದಂತೆ 35 ಘಟಕಗಳನ್ನು ಒಳಗೊಂಡಿರುವ ಮಂಗಳೂರಿನ ಉರ್ವ ಸ್ಟೋರ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷರು, ಪುತ್ತೂರು ತಾಲೂಕು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷರಾದ ಹಿರೇಬಂಡಾಡಿಯ ಅಶೋಕ್ ಕುಮಾರ್ ಪಡ್ಪು ಆಯ್ಕೆಯಾಗಿರುತ್ತಾರೆ.



ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣಾಧಿಕಾರಿ ಹಾಗೂ ಆಯ್ಕೆ ಸಮಿತಿ ಸಂಚಾಲಕರಾದ ಹರೀಶ್ ಕೆ. ಪೂಜಾರಿ ಇವರು ಘೋಷಿಸಿದರು. ಅಶೋಕ್ ಕುಮಾರ್ ಪಡ್ಪುರವರು ಊರಿನ ಹಾಗೂ ಇತರ ಸ್ಥಳೀಯ ಸಾಮಾಜಿಕ, ಧಾರ್ಮಿಕವಾಗಿ ದೇವಸ್ಥಾನಗಳ ಜೀರ್ಣೋದ್ದಾರ ಮತ್ತು ಬ್ರಹ್ಮಕಳಶ ಉತ್ಸವ ಹಾಗೂ ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಮಹತ್ತರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಪ್ರಸ್ತುತ ಪುತ್ತೂರು ತಾಲೂಕು ಬಿಲ್ಲವ ಸಂಘದ ಗುರು ಮಂದಿರದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.





ಯುವವಾಹಿನಿ ಕೇಂದ್ರ ಸಮಿತಿಯ ಸಮಾವೇಶ ಸಂಚಾಲಕರಾಗಿ, ನಿರ್ದೇಶಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ದ್ವಿತೀಯ ಹಾಗೂ ಪ್ರಥಮ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ಪುತ್ತೂರು ತಾಲೂಕಿನಿಂದ ಯುವವಾಹಿನಿ ಕೇಂದ್ರ ಸಮಿತಿಗೆ ಆಯ್ಕೆಯಾದ ಇವರು ನಾಲ್ಕನೇಯವರಾಗಿದ್ದಾರೆ. ಈ ಹಿಂದೆ ನೆಲ್ಯಾಡಿಯ ಡಾ. ಸದಾನಂದ ಕುಂದರ್, ಜಯಂತ ನಡುಬೈಲು,ಹಾಗೂ ಡಾ. ರಾಜಾರಾಮ್ ಕೆ. ಬಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಮೂಲತಃ ಕೃಷಿ ಕುಟುಂಬದವರಾಗಿರುವ ಅಶೋಕ್ ಕುಮಾರ್ ರವರು ಹಿರೇಬಂಡಾಡಿ ಪಡ್ಪು ರಾಮಪ್ಪ ಪೂಜಾರಿ ಮತ್ತು ಗಿರಿಜಾ ದಂಪತಿಗಳ ಪುತ್ರರಾಗಿದ್ದು, ಪತ್ನಿ ಸೌಮ್ಯ ಅಶೋಕ್ ಕುಮಾರ್, ಮಗಳು ಸಾನಿಧ್ಯ ಎ.ಎಸ್ ರವರೊಂದಿಗೆ ಹಿರೇಬಂಡಾಡಿಯಲ್ಲಿ ವಾಸ್ತವ್ಯ ಹೊಂದಿರುತ್ತಾರೆ.










