ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಮತ್ತು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡಿರುವ ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರ ಅವರಿಗೆ ಹಾಗೂ ಸಮಾಜ ಸೇವಕ ಅಬೂಬಕ್ಕರ್ ಮುಲಾರ್ ಅವರಿಗೆ ಸನ್ಮಾನ ಕಾರ್ಯಕ್ರಮ ನ.29ರಂದು ಆರ್.ಐ.ಸಿ ಸಭಾಂಗಣದಲ್ಲಿ ನಡೆಯಿತು.
ಮುಕ್ವೆ ಜುಮಾ ಮಸೀದಿಯ ಖತೀಬ್ ಇರ್ಷಾದ್ ಫೈಝಿ ಮಜ್ಲಿಸುನ್ನೂರ್ಗೆ ನೇತೃತ್ವ ನೀಡಿ ದುವಾ ನೆರವೇರಿಸಿದರು.
ಬಳಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಶುದ್ದೀನ್ ಸಾಲ್ಮರ ಹಾಗೂ ಅಬೂಬಕ್ಕರ್ ಮುಲಾರ್ಗೆ ಅವರನ್ನು ಹುಸೈನ್ ದಾರಿಮಿ ರೆಂಜಲಾಡಿ ನೇತೃತ್ವದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿ ರೆಂಜಲಾಡಿ ಹುಸೈನ್ ದಾರಿಮಿ ನೇತೃತ್ವದ ಆರ್.ಐ.ಸಿ ಸಂಸ್ಥೆಯನ್ನು ನಾವೆಲ್ಲರೂ ಸೇರಿ ಬೆಳೆಸಬೇಕು, ಹತ್ತಾರು ಮದರಸ, ಮಸೀದಿ, ಧಾರ್ಮಿಕ ಕೇಂದ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿರುವ ಹುಸೈನ್ ದಾರಿಮಿಯವರು ತನ್ನ ಸ್ವಂತ ಊರಿನಲ್ಲಿ ಆರಂಭಿಸಿರುವ ಸಂಸ್ಥೆಯನ್ನು ಎಲ್ಲರೂ ಸೇರಿ ಬೆಳೆಸಲೇಬೇಕು, ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸೃತ ಸಂಶುದ್ದೀನ್ ಸಾಲ್ಮರ ಹಾಗೂ ಅಬೂಬಕ್ಕರ್ ಮುಲಾರ್ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಅವರ ಅರ್ಹತೆಗೆ ಸಂದ ಗೌರವವಾಗಿದೆ ಎಂದು ಅವರು ಹೇಳಿದರು.

ಆರ್.ಐ.ಸಿ ಸಂಸ್ಥೆಯ ಚೇರ್ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರನ್ನು ಭವಿಷ್ಯದ ಸತ್ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ನಮ್ಮ ಆರ್ಐಸಿ ಸಂಸ್ಥೆಗೆ ಸೇರ್ಪಡೆಗೊಳಿಸಿ ಉತ್ತಮ ಶಿಕ್ಷಣ ನೀಡುತ್ತಿದ್ದೇವೆ, ನಮ್ಮ ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಸಂಶುದ್ದೀನ್ ಸಾಲ್ಮರ ಅವರಿಗೆ ಜಿಲ್ಲಾ, ರಾಜ್ಯ ಪ್ರಶಸ್ತಿ ಸಿಗುವ ಅರ್ಹತೆಯಿದ್ದು ಅವರು ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ, ಅಬೂಬಕ್ಕರ್ ಮುಲಾರ್ ಅವರೂ ಸಮಾಜ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಅವರಿಗೂ ಅರ್ಹವಾಗಿ ಪ್ರಶಸ್ತಿ ಲಭಿಸಿದೆ, ಅವರ ಸಾಧನೆಯನ್ನು ಗುರುತಿಸಿ ನಮ್ಮ ಸಂಸ್ಥೆ ವತಿಯಿಂದ ಸನ್ಮಾನಿಸಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿದ ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರ ಮಾತನಾಡಿ ಹುಸೈನ್ ದಾರಿಮಿಯವರ ಆರ್.ಐ.ಸಿ ಸಂಸ್ಥೆಯಿಂದ ಗೌರವ ಸಿಕ್ಕಿರುವುದು ಖುಷಿಯಾಗಿದೆ, ನಿಮ್ಮ ಸಂಸ್ಥೆ ಜೊತೆ ನಾವು ಯಾವತ್ತೂ ಇದ್ದೇವೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಸಮಾಜ ಸೇವಕ ಅಬೂಬಕ್ಕರ್ ಮುಲಾರ್ ಮಾತನಾಡಿ ಹುಸೈನ್ ದಾರಿಮಿ ಏನೆಂದು ನಮಗೆ ತಿಳಿದಿದೆ, ಅವರು ತನಗಾಗಿ ಏನನ್ನೂ ಮಾಡದೇ ಇನ್ನೊಬ್ಬರಿಗಾಗಿಯೇ ಮಾಡಿದ್ದಾರೆ, ಆರ್ಐಸಿ ಸಂಸ್ಥೆಗೆ ನಮ್ಮ ಸಹಕಾರ ಎಂದಿಗೂ ಇದೆ ಎಂದರು.
ಪತ್ರಕರ್ತ ಯೂಸುಫ್ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮ್ಮರ್ ಸುಲ್ತಾನ್ ರೆಂಜಲಾಡಿ ಅವರು ಸ್ವರಚಿತ ಕವನ ವಾಚಿಸಿದರು.
ವೆದಿಕೆಯಲ್ಲಿ ಆರ್.ಐ.ಸಿ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ, ಮುಕ್ವೆ ಜುಮಾ ಮಸೀದಿಯ ಖತೀಬ್ ಇರ್ಷಾದ್ ಫೈಝಿ, ರೆಂಜಲಾಡಿ ಜುಮಾ ಮಸೀದಿಯ ಅಧ್ಯಕ್ಷ ಆರ್.ಎಂ ಅಲಿ ಹಾಜಿ, ಪ್ರ.ಕಾರ್ಯದರ್ಶಿ ಜೆ.ಎಸ್ ಝೈನುದ್ದೀನ್ ಹಾಜಿ, ರೆಂಜಲಾಡಿ ಜುಮಾ ಮಸೀದಿಯ ಖತೀಬ್ ನಾಸಿರ್ ಫೈಝಿ, ಆರ್ಐಸಿ ಸಂಸ್ಥೆಯ ಶಿಕ್ಷಕ ಅಬ್ದುಲ್ ಸಮದ್ ದಾರಿಮಿ, ಕೆ.ಎಂ.ಎಚ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಯೂಸುಫ್ ಹಾಜಿ ಕಡ್ಯ, ಅಬ್ಬಾಸ್ ಹಾಜಿ ಪಾಲ್ತಾಡ್, ಉದ್ಯಮಿಗಳಾದ ಹಿದಾಯತ್ ಕಣ್ಣೂರು, ಸಿದ್ದೀಕ್ ತಿಂಗಳಾಡಿ ಉಪಸ್ಥಿತರಿದ್ದರು.
ಉಮ್ಮರ್ ಸುಲ್ತಾನ್ ರೆಂಜಲಾಡಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.