




@ ಸಿಶೇ ಕಜೆಮಾರ್
ಪುತ್ತೂರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಘನ ಮತ್ತು ದ್ರವ ತ್ಯಾಜ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸಿ, ವಿಂಗಡಿಸಿ ಸಂಸ್ಕರಿಸಲು ಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)ಯೋಜನೆಯಡಿ ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಒಳಮೊಗ್ರು ಗ್ರಾಮ ಪಂಚಾಯತ್ನ ಸ್ವಚ್ಛ ಸಂಕೀರ್ಣ ಘಟಕಕ್ಕೆ ಮೂರು ವರ್ಷಗಳು ತುಂಬಿದ್ದು ಯಶಸ್ವಿಯಾಗಿ ನಡೆಯುತ್ತಿದೆ.ಸಂಜೀವಿನಿ ಒಕ್ಕೂಟದ ಮೂಲಕ ಸಂಪೂರ್ಣವಾಗಿ ಮಹಿಳೆಯಿಂದಲೇ ನಿರ್ವಹಣೆ ಹೊಂದಿರುವ ಈ ಘಟಕದಲ್ಲಿ ವಿಶೇಷವಾಗಿ ಸ್ವಚ್ಛ ವಾಹಿನಿ ವಾಹನದ ಚಾಲಕರು ಕೂಡ ಮಹಿಳೆಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.




ಒಣ ಕಸದ ಯಶಸ್ವಿ ಸಂಗ್ರಹ
ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ಅಂಗಡಿ ಮುಂಗಟ್ಟು, ಹೋಟೆಲ್, ವಾಣಿಜ್ಯ ಸಂಕೀರ್ಣಗಳಲ್ಲಿ ಉತ್ಪತ್ತಿಯಾಗುವ ಒಣ ಕಸ ಹಾಗೂ ಹಸಿ ಕಸವನ್ನು ಸ್ವಚ್ಛ ವಾಹಿನಿಯ ಮೂಲಕ ಯಶಸ್ವಿಯಾಗಿ ಸಂಗ್ರಹ ಮಾಡಿ ಅದನ್ನು ವಿಂಗಡಿಸಿ ಸ್ವಚ್ಛ ಸಂಕೀರ್ಣದಲ್ಲಿ ಸಂಗ್ರಹಿಸಿ ಅಲ್ಲಿಂದ ಕೆದಂಬಾಡಿಯಲ್ಲಿರುವ ಎಮ್ಆರ್ಎಫ್ ಘಟಕಕ್ಕೆ ರವಾನೆ ಮಾಡಲಾಗುತ್ತಿದೆ. ವಾರದ ಎಲ್ಲಾ ದಿನಗಳಲ್ಲೂ ಕೂಡ ಸ್ವಚ್ಛ ವಾಹಿನಿ ವಾಹನ ಗ್ರಾಮದ ಎಲ್ಲಾ ಕಡೆಗಳಲ್ಲಿ ಸಂಚರಿಸಿ ಒಣ ಕಸ ಸಂಗ್ರಹ ಕಾರ್ಯವನ್ನು ಮಾಡುತ್ತಿದೆ.





9೦೦ ಕ್ಕೂ ಅಧಿಕ ಮನೆಗಳಿಗೆ ಭೇಟಿ
ಗ್ರಾಮದಲ್ಲಿ ಸುಮಾರು 1650 ಮನೆಗಳು ಇದ್ದು ಇದರಲ್ಲಿ ಸುಮಾರು 900 ಮನೆಗಳಿಗೆ ಸ್ವಚ್ಛ ವಾಹಿನಿ ವಾಹನದೊಂದಿಗೆ ಸ್ವಚ್ಛತಾ ಸೇನಾನಿಗಳು ಭೇಟಿ ನೀಡುತ್ತಿದ್ದಾರೆ. ಇದರಲ್ಲಿ ಸುಮಾರು 430 ಮನೆಗಳಿಂದ ಒಣ ಕಸ ಸಂಗ್ರಹ ಮಾಡಲಾಗುತ್ತಿದೆ. ಅದರಂತೆ 98 ವಾಣಿಜ್ಯ ಕೇಂದ್ರಗಳಿಂದ ಒಣ ಕಸ, ಹಸಿ ಕಸ ಸಂಗ್ರಹ ಮಾಡಲಾಗುತ್ತಿದೆ.ಸ್ವಚ್ಛತಾ ಸೇನಾನಿಗಳು ಮನೆಮನೆಗೆ ಭೇಟಿ ಕೊಡುತ್ತಿದ್ದು ಮನೆಯಲ್ಲಿ ಉತ್ಪತ್ತಿಯಾದ ಕಸವನ್ನು ಸ್ವಚ್ಛ ವಾಹಿನಿಗೆ ನೀಡುವ ಕೆಲಸವನ್ನು ಮನೆಯವರು ಮಾಡಬೇಕಾಗಿದೆ.
ಮನೆಗೆ 50 ರೂ, ಅಂಗಡಿಗೆ 100 ರೂ.ಶುಲ್ಕ
ಕಸ ಸಂಗ್ರಹಕ್ಕೆ ಪಂಚಾಯತ್ ತಿಂಗಳಿಗೆ ಇಂತಿಷ್ಟು ಶುಲ್ಕವನ್ನು ನಿಗದಿಪಡಿಸಿದ್ದು ಇದರಲ್ಲಿ ಮನೆಗೆ ರೂ.50 ಹಾಗೇ ಅಂಗಡಿಗಳಿಗೆ ರೂ.100 ಹಾಗೇ ಹೋಟೆಲ್ಗಳಿಗೆ ರೂ.250, ಬಾರ್ ಆಂಡ್ ರೆಸ್ಟೋರೆಂಟ್ಗಳಿಗೆ ರೂ.350 ಶುಲ್ಕ ನಿಗದಿ ಪಡಿಸಲಾಗಿದೆ. ಪ್ರತಿಯೊಂದು ಮನೆ, ಅಂಗಡಿ, ವಾಣಿಜ್ಯ ಸಂಕೀರ್ಣ, ಹೋಟೆಲ್, ಬಾರ್ ರೆಸ್ಟೋರೆಂಟ್ನವರು ತಿಂಗಳಿಗೆ ಈ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಕೆದಂಬಾಡಿಯ ಎಮ್ಆರ್ಎಫ್ ಘಟಕಕ್ಕೆ ಕಸ ರವಾನೆ
ಗ್ರಾಮದ ಎಲ್ಲಾ ಕಡೆಗಳಿಂದ ಸಂಗ್ರಹಿಸಿದ ಕಸವನ್ನು ಸ್ವಚ್ಛ ಸಂಕೀರ್ಣದಲ್ಲಿ ವಿಂಗಡಿಸಿ ಬೇರ್ಪಡಿಸುವ ಕೆಲಸ ಆಗುತ್ತಿದ್ದು ಇಲ್ಲಿಂದ ವಾರಕ್ಕೆ ಒಂದು ಸಲದಂತೆ ಕೆದಂಬಾಡಿಯಲ್ಲಿರುವ ಎಂಆರ್ಎಫ್ ಘಟಕಕ್ಕೆ ರವಾನೆಯಾಗುತ್ತದೆ. ಹೆಚ್ಚಾಗಿ ಆದಿತ್ಯವಾರದ ದಿನ ಎಂಆರ್ಎಫ್ನ ವಾಹನ ಇಲ್ಲಿಗೆ ಬಂದು ಕಸವನ್ನು ಕೊಂಡೋಗುವ ಕೆಲಸ ನಡೆಯುತ್ತದೆ. ಸಂಗ್ರಹವಾದ ಹಸಿ ಕಸವನ್ನು ಕಾಂಪೋಸ್ಟ್ ಮಾಡುವ ಕೆಲಸ ಆಗುತ್ತಿದೆ.
ಮಹಿಳೆಯರಿಂದಲೇ ನಿರ್ವಹಣೆ
ಗ್ರಾಮ ಪಂಚಾಯತ್ನ ಮೇಲುಸ್ತುವಾರಿ ಸಮಿತಿಯು ಸ್ವಚ್ಛ ಸಂಕೀರ್ಣದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದು ಪಂಚಾಯತ್ನ 15ನೇ ಹಣಕಾಸು ನಿಧಿಯಿಂದ ಅನುದಾನ ನೀಡಲಾಗುತ್ತಿದೆ ಉಳಿದಂತೆ ಗ್ರಾಮ ಪಂಚಾಯತ್ನ ಅನುಗ್ರಹ ಸಂಜೀವಿನಿ ಒಕ್ಕೂಟವೇ ಸಂಪೂರ್ಣ ನಿರ್ವಹಣೆಯ ಜವಬ್ದಾರಿ ವಹಿಸಿಕೊಂಡಿದೆ. ಪಂಚಾಯತ್ಗೆ ಮತ್ತು ಅನುಗ್ರಹ ಸಂಜೀವಿನಿ ಒಕ್ಕೂಟಕ್ಕೆ ಈ ರೀತಿಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಸ್ವಚ್ಛ ಸಂಕೀರ್ಣ ಘಟಕದಲ್ಲಿ ಕಮಲಾಕ್ಷಿ ಬೊಳ್ಳಾಡಿ, ಕವಿತಾ ಪರ್ಪುಂಜ ಮತ್ತು ಕವಿತಾ ಕುಂಬ್ರ ಮೂವರು ಸ್ವಚ್ಛತಾ ಸೇನಾನಿಗಳಿದ್ದು ಇದರಲ್ಲಿ ಕಮಲಾಕ್ಷಿಯವರು ಸ್ವಚ್ಛ ವಾಹಿನಿಯ ಚಾಲಕರಿದ್ದಾರೆ. ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ರೈಯವರು ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಧಕಿ ಈ ಮಹಿಳಾ ವಾಹನ ಚಾಲಕಿ
ಸ್ವಚ್ಛ ವಾಹಿನಿ ವಾಹನದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಕಮಲಾಕ್ಷಿ ಬೊಳ್ಳಾಡಿಯವರು ಶಾಂತಪ್ಪ ಗೌಡರವರ ಪತ್ನಿಯಾಗಿರುವ ಇವರು ಸ್ವಚ್ಛ ವಾಹಿನಿ ಆರಂಭದಿಂದಲೇ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕಿನಲ್ಲಿ ಕೆಲವೇ ಕೆಲವು ಪಂಚಾಯತ್ಗಳ ಸ್ವಚ್ಛ ವಾಹಿನಿಗಳಲ್ಲಿ ಮಹಿಳೆಯರೇ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಇದರಲ್ಲಿ ಕಮಲಾಕ್ಷಿ ಕೂಡ ಒಬ್ಬರಾಗಿದ್ದಾರೆ. ಪೇಟೆ ಪಟ್ಟಣ, ಹಳ್ಳಿಗಳಲ್ಲಿ ಬಹಳ ಜಾಗೂರುಕತೆಯಿಂದ ವಾಹನ ಚಾಲನೆ ಮಾಡುವ ಮೂಲಕ ಮನೆಮನೆಯಿಂದ ಕಸ ಸಂಗ್ರಹದ ಸೇವೆಯನ್ನು ಮಾಡುತ್ತಿರುವ ಇವರಿಗೆ ಒಂದು ಬಿಗ್ ಸೆಲ್ಯೂಟ್ ಹೇಳಲೇಬೇಕಾಗಿದೆ.

‘ನನಗೆ ಚಿಕ್ಕಂದಿನಿಂದಲೇ ಡ್ರೈವರ್ ಆಗಬೇಕು ಎಂಬ ಕನಸು ಇತ್ತು, ನಾನು ಈ ಕೆಲಸಕ್ಕೆ ಸೇರಿದ ಮೇಲೆಯೇ ಡ್ರೈವಿಂಗ್ ಕಲಿತದ್ದು ನನ್ನ ಡ್ರೈವಿಂಗ್ ಕಲಿಯುವ ಕನಸಿಗೆ ಈ ಕೆಲಸ ಅವಕಾಶ ಮಾಡಿಕೊಟ್ಟಿತು. ಈ ಕೆಲಸದಲ್ಲಿ ನನಗೆ ತುಂಬಾ ಖುಷಿ ಸಿಕ್ಕಿದೆ. ಮಹಿಳೆಯರು ಜೀವನದಲ್ಲಿ ಮುಂದೆ ಬರಬೇಕು ಇದೇ ನನ್ನ ಮಾತು. ಮುಂದೆ ಒಂದು ದಿನ ಜೆಸಿಬಿ ಡ್ರೈವಿಂಗ್ ಮಾಡಬೇಕು ಎಂಬ ಆಸೆ ಇದೆ.’
ಕಮಲಾಕ್ಷಿ ಶಾಂತಪ್ಪ ಗೌಡ ಬೊಳ್ಳಾಡಿ, ಸ್ವಚ್ಛ ವಾಹಿನಿ ವಾಹನ ಚಾಲಕರು
‘ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಅಧಿಕಾರ ವರ್ಗದವರ ಸಂಪೂರ್ಣ ಸಹಕಾರ ಒಕ್ಕೂಟಕ್ಕೆ ಇದೆ. ಸ್ವಚ್ಛತಾ ಸೇನಾನಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಣ ಕಸ ಸೇರಿದಂತೆ ಹಸಿ ಕಸದ ಸಂಗ್ರಹ ಕೂಡ ನಡೆಯುತ್ತಿದ್ದು ಹಸಿ ಕಸವನ್ನು ಕಾಂಪೋಸ್ಟ್ ಮಾಡುವ ಕೆಲಸವೂ ಆಗುತ್ತಿದೆ. ವರ್ತಕರು, ಮನೆಯವರು ಕಸವನ್ನು ನೀಡುವ ಮೂಲಕ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕಾಗಿದೆ.’
ಚಂದ್ರಿಕಾ ರೈ ಮೊಡಪ್ಪಾಡಿ,
ಮೇಲ್ವಿಚಾರಕರು, ಎಂಬಿಕೆ ಅನುಗ್ರಹ ಸಂಜೀವಿನಿ ಒಕ್ಕೂಟ ಒಳಮೊಗ್ರು
‘ ವಾರದಲ್ಲಿ ಒಂದು ದಿನ ಮನೆಗೂ ಭೇಟಿ ಕೊಟ್ಟು ಉತ್ತಮ ರೀತಿಯಲ್ಲಿ ಕಸ ಸಂಗ್ರಹ ಮಾಡುವ ಸೇವೆಯನ್ನು ಸ್ವಚ್ಚತಾ ಸೇನಾನಿಗಳು ಮಾಡುತ್ತಿದ್ದಾರೆ. ಇದರಲ್ಲಿ ಸ್ವಚ್ಚ ವಾಹಿನಿ ವಾಹನದ ಚಾಲಕರು ಮಹಿಳೆಯೇ ಆಗಿರುವುದು ಹೆಮ್ಮೆಯ ಸಂಗತಿ. ಗ್ರಾಮದ ಸ್ವಚ್ಛತೆಯ ವಿಷಯದಲ್ಲಿ ಕಸವನ್ನು ಬೀದಿಗೆ ಹಾಕದೆ ಸ್ವಚ್ಚ ವಾಹಿನಿಗೆ ಕೊಟ್ಟು ಸಹಕರಿಸಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ.’
ರಾಜೇಶ್ ರೈ ಪರ್ಪುಂಜ,
ಗೌರವ ಸಲಹೆಗಾರರು, ಸ್ನೇಹ ಯುವಕ ಮಂಡಲ ಪರ್ಪುಂಜ
‘ ಪ್ರತಿ ವಾರವೂ ಭೇಟಿ ಕೊಟ್ಟು ಒಳ್ಳೆಯ ರೀತಿಯಲ್ಲಿ ಒಣ ಮತ್ತು ಹಸಿ ಕಸವನ್ನು ಸಂಗ್ರಹ ಮಾಡುತ್ತಿದ್ದಾರೆ. ಕಸ ಸಂಗ್ರಹಣೆಯ ವಿಷಯದಲ್ಲಿ ವರ್ತಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಾರೆ. ಗ್ರಾಮದ ಸ್ವಚ್ಛತೆ ಕಾಪಾಡುತ್ತಿರುವ ಸ್ವಚ್ಛತಾ ಸೇನಾನಿಗಳಿಗೆ ನಾವು ಧನ್ಯವಾದ ಹೇಳಲೇಬೇಕು.’
ಪ್ರಶಾಂತ್ ಶೆಟ್ಟಿ, ನರ್ತಕಿ ಬಾರ್ ಕುಂಬ್ರ








